

ಶಿವಮೊಗ್ಗ: ಕವಿ ಎಚ್.ಎಸ್.ವೆಂಕಟೇಶಮೂರ್ತಿ ಅವರ ಕವಿತೆ, ನಾಟಕ, ಪ್ರಬಂಧ, ಕಾದಂಬರಿ, ಮಕ್ಕಳ ಸಾಹಿತ್ಯ ಇಂದಿಗೂ ಪ್ರಸ್ತುತ. ಸುಗಮ ಸಂಗೀತ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ ಎಂದು ಸುಗಮ ಸಂಗೀತ ಪರಿಷತ್ ನಿರ್ದೇಶಕಿ ಜಯಶ್ರೀ ಶ್ರೀಧರ್ ಬಣ್ಣಿಸಿದರು.
ನಗರದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್, ಶಿವಮೊಗ್ಗ ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್, ಭಾವಗಾನ, ನಾದಶ್ರೀ ಸುಗಮ ಸಂಗೀತ ಶಾಲೆ ಹಾಗೂ ತರಂಗಿಣಿ ಸಂಗೀತ ಶಾಲೆ ಆಶ್ರಯದಲ್ಲಿ ಕವಿ ಡಾ. ಎಚ್.ಎಸ್.ವೆಂಕಟೇಶಮೂರ್ತಿ ಅವರ ‘ನಾಲ್ಕು ದಿನದ ಬಾಳಿಗೆ ಇರಲಿ ಹಾಲು ಹೋಳಿಗೆ’ ನುಡಿನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಲಾ ಕ್ಷೇತ್ರದಲ್ಲಿ ಚಲನಚಿತ್ರ ಹಾಗೂ ಧಾರಾವಾಹಿಗಳಿಗೆ ಸಂಭಾಷಣೆ ಬರೆಯುವ ಕಲೆಯನ್ನು ಕರಗತ ಮಾಡಿಕೊಂಡಿದ್ದ ಎಚ್‌ಎಸ್‌ವಿ ಅವರ ಕಲಾ ಸೇವೆಯನ್ನು ಮರೆಯವಂತಿಲ್ಲ. ಅವರ ಕವನ, ಕವಿತೆಗಳು ಅಜರಾಮರ. ಎಲ್ಲ ವರ್ಗದವರಿಗೂ ವಿಶೇಷ ಕವನಗಳನ್ನು ರಚಿಸುವುದರ ಮೂಲಕ ಸುಗಮ ಸಂಗೀತ ಕ್ಷೇತ್ರವನ್ನು ಸದೃಢಗೊಳಿಸಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದು ತಿಳಿಸಿದರು.
ಭಾವಗಾನ ಸಂಸ್ಥೆ ಅಧ್ಯಕ್ಷ ಭದ್ರಾವತಿ ವಾಸು ಮಾತನಾಡಿ, ಎಚ್‌ಎಸ್‌ವಿ ಅವರು ನಾಡು ಕಂಡ ಶ್ರೇಷ್ಠ ಕವಿ. ಅವರ ಲೋಕದ ಕಣ್ಣಿಗೆ ರಾಧೆಯು ಕೂಡ, ಸಾವಿರದಳ ಕಮಲಿನಿ ಮುಂತಾದ ಭಾವಗೀತೆಗಳು ಇಂದಿಗೂ ಜೀವಂತಿಕೆಯಿಂದ ಕೂಡಿವೆ ಎಂದರು.
ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾ ಖಜಾಂಚಿ ಜಿ.ವಿಜಯ್‌ಕುಮಾರ್ ಮಾತನಾಡಿ, ಸುಗಮ ಸಂಗೀತ ಕ್ಷೇತ್ರ ಗಟ್ಟಿಗೊಳ್ಳಲು ಇಂತಹ ಕವಿಗಳು ಸಾಧಕರು ಬಹಳ ಮುಖ್ಯ. ಅವರ ಕಥೆ, ಕವನ ಹಾಗೂ ನಾಟಕಗಳು ರಾಜ್ಯ ರಾಷ್ಟ್ರಮಟ್ಟದಲ್ಲೂ ವಿಶೇಷ ಸ್ಥಾನಮಾನ ಪಡೆದಿವೆ. ಸುಗಮ ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ನಾವು ಮರೆಯಲು ಸಾಧ್ಯವೇ ಇಲ್ಲ ಎಂದು ಹೇಳಿದರು.
ಸುಗಮ ಸಂಗೀತ ಪರಿಷತ್ ಕಲಾವಿದರು, ಭಾವಗಾನ ತಂಡದ ಕಲಾವಿದರು ಹಾಗೂ ಎಲ್ಲ ಸಂಗೀತ ಪಾಠಶಾಲೆ ಕಲಾವಿದರು ಎಚ್‌ಎಸ್‌ವಿ ಅವರ ಕವಿತೆಗಳನ್ನು ಹಾಡಿದರು. ಸಂಚಾಲಕರಾದ ಶೋಭಾ ಸತೀಶ್, ಭುಜಂಗಪ್ಪ, ಕಾರ್ಯದರ್ಶಿ ಮಥುರಾ ನಾಗರಾಜ್, ಪ್ರಮುಖರಾದ ಬಸವರಾಜ್, ಲಲಿತಮ್ಮ, ವಿಜಯಕುಮಾರ್ ಇತರರಿದ್ದರು.