

ಆಂಧ್ರಪ್ರದೇಶ: ಟಾಲಿವುಡ್ನ ಹಿರಿಯ ನಟ ವಿಕ್ಟರಿ ವೆಂಕಟೇಶ್ ಅವರ ಸುದೀರ್ಘ ಸಿನಿಪಯಣವನ್ನು ಸಂಭ್ರಮಿಸಲು ಬುಧವಾರ ಹೈದರಾಬಾದ್ನಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ತೆಲುಗು ಚಿತ್ರರಂಗದ ದಿಗ್ಗಜರಾದ ಮೆಗಾಸ್ಟಾರ್ ಚಿರಂಜೀವಿ, ಬ್ರಹ್ಮಾನಂದಂ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಈ ವೇಳೆ ಹಲವು ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಳ್ಳುತ್ತಿದ್ದ ವೆಂಕಟೇಶ್, ಚಿರಂಜೀವಿ ಇಲ್ಲದಿದ್ದರೆ ನಾನು ಹಿಮಾಲಯಕ್ಕೆ ಹೋಗಿರುತ್ತಿದ್ದೆ ಎಂದು ಹೇಳಿದ್ದಾರೆ.
ತೆಲುಗು ಚಿತ್ರರಂಗದಲ್ಲಿ ವೆಂಕಿ ಮಾಮಾ ಎಂದು ಪ್ರೀತಿಯಿಂದ ಕರೆಯಲ್ಪಡುವ ನಟ ವೆಂಕಟೇಶ್ ಅವರ ಗಮನಾರ್ಹ ಸಿನಿ ಜರ್ನಿಯನ್ನು ಮೆಲುಕು ಹಾಕಲು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಚಿತ್ರರಂಗದ ಅನೇಕ ನಟ-ನಟಿಯರು ಭಾಗಿಯಾಗಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರನ್ನು ಉದ್ದೇಶಿಸಿ ಮಾತನಾಡಿದ ವೆಂಕಟೇಶ್, ಚಿರಂಜೀವಿ ಇಲ್ಲದಿದ್ದರೆ ನಾನು ಹಿಮಾಲಯಕ್ಕೆ ಹೋಗುತ್ತಿದ್ದೆ ಎಂದು ಹಾಸ್ಯಮಯವಾಗಿ ಹೇಳಿದರು.
ತಮ್ಮ ಹೇಳಿಕೆಯನ್ನು ಮುಂದುವರೆಸಿದ ವೆಂಕಟೇಶ್, 9 ವರ್ಷಗಳ ಬ್ರೇಕ್ ನಂತರ ಚಿರಂಜೀವಿ ಅಭಿನಯದ ಬ್ಲಾಕ್ಬಸ್ಟರ್ ಹಿಟ್ ಖೈದಿ ನಂ. 150 ಗಳಿಸಿದ ಚಪ್ಪಾಳೆ, ಅಭಿಮಾನಿಗಳ ರೆಸ್ಪಾನ್ಸ್ ನೋಡಿದ ಮೇಲೆ ಸಿನಿಪ್ರೇಕ್ಷಕರನ್ನು ಮನರಂಜಿಸಲು ಮುಂದುವರಿಸಲು ನಿರ್ಧರಿಸಿದೆ ಎಂದು ಹೇಳಿಕೊಂಡರು. ನಟನ ಈ ಮಾತುಗಳಿಗೆ ಗಣ್ಯರು ಶುಭಕೋರಿದ್ದಾರೆ.
ವೆಂಕಟೇಶ್ ಅವರ ಮುಂಬರುವ ಪ್ಯಾನ್ ಇಂಡಿಯಾ ಸಿನಿಮಾ, ಸೈಲೇಶ್ ಕೊಲನು ನಿರ್ದೇಶನದ 'ಸೈಂಧವ್' ಜನವರಿ 13, 2024 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಜ್ಜಾಗಿದೆ,(ಏಜೆನ್ಸೀಸ್).