ಮೊದಲು​ ಆತ್ಮಹತ್ಯೆಗೆ ಪ್ಲಾನ್ ಮಾಡಲಾಗಿತ್ತು ಆದ್ರೆ ಆ ಒಂದು ಅನುಮಾನ ಸಾಮೂಹಿಕ ಹತ್ಯೆಗೆ ಕಾರಣವಾಯ್ತು! Venjaramoodu murders

Venjaramoodu murders
Published on

Venjaramoodu murders : ಯುವಕನೊಬ್ಬನಿಂದ ನಡೆದ ಸಾಮೂಹಿಕ ಹತ್ಯೆ ಪ್ರಕರಣ ಕೇವಲ ಕೇರಳ ಮಾತ್ರವಲ್ಲ ಇಡೀ ದೇಶದಲ್ಲಿ ಭಾರಿ ಸುದ್ದಿಯಾಯಿತು. ತನ್ನ ಪ್ರೇಯಸಿಯೂ ಸೇರಿದಂತೆ ತನಗೆ ಸಂಬಂಧಪಟ್ಟ ಐವರನ್ನು 23 ವರ್ಷದ ಯುವಕನೊಬ್ಬ ಕೇರಳದ ವೆಂಜರಮೂಡಿನಲ್ಲಿ ಬರ್ಬರವಾಗಿ ಕೊಲೆ ಮಾಡಿದ್ದ. ಈ ಭೀಕರ ಕೊಲೆಗೆ ಕಾರಣ ಏನಿರಬಹುದು ಅಂತ ತಿಳಿದುಕೊಳ್ಳಲು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದರು. ಇದೀಗ ಕೊನೆಗೂ ಈ ಸಾಮೂಹಿಕ ಹತ್ಯೆಗೆ ಕಾರಣ ಬಹಿರಂಗವಾಗಿದೆ.

ವೆಂಜರಮೂಡು ಹತ್ಯಾಕಾಂಡಕ್ಕೆ ಆರ್ಥಿಕ ಬಿಕ್ಕಟ್ಟು ಪ್ರಮುಖ ಕಾರಣ ಎಂದು ಪೊಲೀಸರು ತೀರ್ಮಾನಕ್ಕೆ ಬಂದಿದ್ದಾರೆ. ಆರೋಪಿ ಅಫಾನ್ ಕುಟುಂಬವು ಲಕ್ಷಾಂತರ ರೂಪಾಯಿ ಸಾಲ ಮಾಡಿತ್ತು. ಇದೇ ಸಾಲ ಸಾಮೂಹಿಕ ಹತ್ಯೆಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಫಾನ್ ಅವರ ತಂದೆಯ ವಿದೇಶಿ ಸಾಲಗಳ ಜೊತೆಗೆ, ಅವರ ಕುಟುಂಬವು 65 ಲಕ್ಷ ರೂ. ಸಾಲವನ್ನು ಹೊಂದಿದೆ. ಅನೇಕ ಮಂದಿಗೆ ದೊಡ್ಡ ಮೊತ್ತವನ್ನು ಪಾವತಿಸಬೇಕಾಗಿತ್ತು. ಆದರೆ, ತಾವು ಪಡೆದ ಸಾಲವನ್ನು ಮರುಪಾವತಿಸಲು ಅವರಿಂದ ಸಾಧ್ಯವಾಗಲಿಲ್ಲ. ಜೀವನ ನಡೆಸಲೆಂದೇ ಅಫಾನ್​ ಕುಟುಂಬ ಹಣವನ್ನು ಸಾಲವಾಗಿ ಪಡೆಯುತ್ತಿತ್ತು. ಯಾರಾದರೂ ಸಾಲದ ಹಣವನ್ನು ವಾಪಸ್​ ಕೇಳಿದಾಗ, ಮತ್ತೊಬ್ಬರಿಂದ ಸಾಲು ಪಡೆದು ಅವರಿಗೆ ಹಿಂತಿರುಗಿಸುತ್ತಿದ್ದರು. ಸಾಲದ ಮೇಲೆ ಸಾಲ ಮಾಡುತ್ತಿದ್ದರಿಂದ ಸಾಲದ ಮೊತ್ತ ಬೆಟ್ಟದಷ್ಟು ಬೆಳೆಯಿತು. ಇದರಿಂದ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದರು. ಅಲ್ಲದೆ, ಅಫಾನ್​ ಕುಟುಂಬದ ಬಗ್ಗೆ ಗೊತ್ತಾದಾಗ ಜನರು ಸಾಲ ಕೊಡುವುದನ್ನು ಕೂಡ ನಿಲ್ಲಿಸಿದರು.

ಅಫ್ಫಾನ್ ತಂದೆ ರಹೀಮ್, ಸೌದಿ ಅರೇಬಿಯಾದಲ್ಲಿ ವ್ಯವಹಾರ ನಡೆಸುತ್ತಿದ್ದಾಗಲೇ ಭಾರಿ ಸಾಲದಲ್ಲಿದ್ದರು. ಅವರು ಕೂಡ ಏಳು ತಿಂಗಳಿಗಿಂತ ಹೆಚ್ಚು ಕಾಲ ಕುಟುಂಬಕ್ಕೆ ಹಣವನ್ನು ಕಳುಹಿಸಿರಲಿಲ್ಲ. ಅಲ್ಲದೆ, ತನ್ನ ಮನೆಯನ್ನು ಮಾರಿ ಹಣವನ್ನು ಸೌದಿ ಅರೇಬಿಯಾಕ್ಕೆ ಕಳುಹಿಸುವಂತೆ ಕೇಳಿಕೊಂಡಿದ್ದ. ಈ ಬಗ್ಗೆ ಕುಟುಂಬದಲ್ಲಿ ಜಗಳಗಳು ಸಹ ನಡೆಯುತ್ತಿದ್ದವು. ಇತ್ತ ಅಫಾನ್ ಅವರ ತಾಯಿ ಶಮಿ ಕೂಡ ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಚಿಕಿತ್ಸೆಗೂ ಕೂಡ ಹಣವಿರಲಿಲ್ಲ.

ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಾಗ ಇಡೀ ಕುಟುಂಬ ಆರಂಭದಲ್ಲಿ ಸಾಮೂಹಿಕ ಆತ್ಮಹತ್ಯೆಗೆ ಯೋಜಿಸಿತ್ತು. ಒಂದು ವೇಳೆ ಎಲ್ಲರೂ ಸಾಯದಿದ್ದರೆ ಏನು ಮಾಡುವುದು ಎಂಬ ಆ ಕ್ಷಣದ ಆಲೋಚನೆಯೇ ಸಾಮೂಹಿಕ ಹತ್ಯಗೆ ಕಾರಣವಾಯಿತು ಎಂದು ತಿಳಿದುಬಂದಿದೆ. ಕೊಲೆಗೆ ಸಂಚು ರೂಪಿಸಿದ್ದೇ ಅಫಾನ್​ ಎಂಬುದು ಬಯಲಾಗಿದೆ.

ಘಟನೆ ನಡೆದ ದಿನ ಅಫಾನ್​ನಿಂದ ಮೊದಲು ದಾಳಿಗೆ ಒಳಗಾದ ವ್ಯಕ್ತಿ ಅವರ ತಾಯಿ ಉಮ್ಮಾ ಶೆಮಿ. ಬೆಳಿಗ್ಗೆ 11 ಗಂಟೆ ಸುಮಾರಿಗೆ ಉಮ್ಮಾ ಶೆಮಿಯ ಕುತ್ತಿಗೆಗೆ ಶಾಲುವಿನಿಂದ ಬಿಗಿದು ಕೊಲ್ಲಲು ಅಫಾನ್​ ಪ್ರಯತ್ನಿಸಿದನು. ಆಕೆ ಪ್ರಜ್ಞೆ ತಪ್ಪಿದಾಗ, ಅವಳು ಸತ್ತಿದ್ದಾಳೆಂದು ಭಾವಿಸಿ ಕೋಣೆಯಲ್ಲಿ ಬೀಗ ಹಾಕಿ ಹೊರಗೆ ಹೋದನು. ನಂತರ, ಇತರರನ್ನು ಕೊಲ್ಲಲು ಆಯುಧವನ್ನು ಸಿದ್ಧಪಡಿಸಲು ಮುಂದಾದನು. ಇದಕ್ಕಾಗಿ, ಆತ ವೆಂಜರಮೂಡಿನಲ್ಲಿರುವ ಹಣಕಾಸು ಸಂಸ್ಥೆಗೆ ಹೋಗಿ 1,500 ರೂ. ಸಾಲ ಪಡೆದನು. ಬಳಿಕ ಸಮೀಪದ ಅಂಗಡಿಗೆ ಹೋಗಿ ಭಾರವಾದ ಸುತ್ತಿಗೆಯನ್ನು ಖರೀದಿಸಿದನು.

ಇದಾದ ನಂತರ, ಅಫಾನ್​ ಬೇರೆ ಅಂಗಡಿಗಳಿಗೆ ಹೋಗಿ ಒಂದು ಚೀಲ ಮತ್ತು ಇಲಿ ಪಾಷಣವನ್ನು ಖರೀದಿಸಿದನು. ಇಷ್ಟೆಲ್ಲ ಮಾಡಿ ಮನೆಗೆ ತಲುಪಿದಾಗ, ಅಫಾನ್ ತನ್ನ ತಾಯಿ ತಲೆ ಎತ್ತಿ ತನ್ನನ್ನು ನೋಡುತ್ತಿರುವುದನ್ನು ನೋಡಿದನು. ತಕ್ಷಣ ತನ್ನ ತಾಯಿಯ ತಲೆಗೆ ಸುತ್ತಿಗೆಯಿಂದ ಹೊಡೆದನು. ಅವಳು ಸತ್ತಿದ್ದಾಳೆಂದು ಭಾವಿಸಿ ಮನೆಯಿಂದ ಹೊರಗೆ ಹೋದನು. ನಂತರ, ಅವನು ಪಾಂಗೋಡ್‌ನಲ್ಲಿರುವ ತನ್ನ ಅಜ್ಜಿಯ ಮನೆಗೆ ಹೋಗಿ ಅದೇ ಸುತ್ತಿಗೆಯಿಂದ ಅವಳನ್ನು ಕೊಂದನು. ನಂತರ, ತನ್ನ ಅಜ್ಜಿಯ ಚಿನ್ನದ ಹಾರವನ್ನು ತೆಗೆದುಕೊಂಡು ವೆಂಜಾರಮೂಡ್​ಗೆ ಹೋಗಿ ಮಾರಿದನು. ಬಳಿಕ ಎಸ್​.ಎನ್​ ಪುರಂನಲ್ಲಿದ್ದ ತನ್ನ ತಂದೆಯ ಸಹೋದರ ಲತೀಫ್​ (69), ಆತನ ಪತ್ನಿ ಶಾಹೀದಾ (59) ಅವರನ್ನು ಕೊಂದಿದ್ದಾನೆ. ಇದಾದ ನಂತರ ಪೆರುಮಾಳದಲ್ಲಿ ತನ್ನ ಸಹೋದರ ಅಫ್ಸಾನ್​ (13) ಮತ್ತು ತನ್ನ ಗರ್ಲ್​ಫ್ರೆಂಡ್​ ಫರ್ಸಾನಾಳನ್ನು ಅಫಾನ್​ ಭೀಕರವಾಗಿ ಹತ್ಯೆ ಮಾಡಿದ್ದಾನೆ.

ಸುತ್ತಿಗೆಯಿಂದ ತಲೆಯ ಹಿಂಭಾಗಕ್ಕೆ ಹೊಡೆದು ಹೆಚ್ಚು ಶಬ್ದ ಮಾಡದೇ ಸುಲಭವಾಗಿ ಕೊಲೆ ಮಾಡಬಹುದು ಎಂಬುದನ್ನು ಇಂಟರ್ನೆಟ್​ನಲ್ಲಿ ನೋಡಿ ಆರೋಪಿ ಅಫಾನ್​, ಕೊಲೆಗೆ ಸಂಚು ರೂಪಿಸಿದ್ದಾನೆಂದು ಪೊಲೀಸರು ಶಂಕಿಸಿದ್ದಾರೆ. ಅಫಾನ್​ನ ಫೋನ್ ಮತ್ತು ಟ್ಯಾಬ್​ನಲ್ಲಿರುವ ಡೇಟಾವನ್ನು ರಿಟ್ರೈವ್​ ಮಾಡಿದರೆ ಅವನು ಇಂಟರ್ನೆಟ್​ನಲ್ಲಿ ಇದಕ್ಕಾಗಿ ಹುಡುಕಿದ್ದಾನೆಯೇ ಎಂಬುದು ಸ್ಪಷ್ಟವಾಗಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಅಫಾನ್​ನಿಂದ ಪಾಸ್​ವರ್ಡ್ ಸಂಗ್ರಹಿಸಿ ಫೋನ್ ಮತ್ತು ಟ್ಯಾಬ್ ನಲ್ಲಿರುವ ಮಾಹಿತಿಯನ್ನು ಮರುಪಡೆಯಲು ನಿರ್ಧರಿಸಲಾಗಿದೆ.

ಕೊಲೆ ಮಾಡಿದ ಬಳಿಕ ತಾನು ವಿಷ ಸೇವನೆ ಮಾಡಿರುವುದಾಗಿ ಅಫಾನ್​ ಪೊಲೀಸರಿಗೆ ಕರೆ ಮಾಡಿ ಹೇಳಿದ್ದ. ತಕ್ಷಣ ಆತನನ್ನು ತಿರುವನಂತಪುರದ ಮೆಡಿಕಲ್​ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ಕು ದಿನಗಳ ವೀಕ್ಷಣೆಯ ನಂತರ, ಅಫಾನ್​ನನ್ನು ಆಸ್ಪತ್ರೆಯಲ್ಲಿ ಬಂಧಿಸಲಾಗುವುದು ಎಂದು ಎಸ್ಪಿ ಕೆ.ಎಸ್. ಸುದರ್ಶನನ್ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net