ಪ್ರೇಯಸಿ ಸೇರಿ ಸಂಬಂಧಿಕರನ್ನು ಸಾಮೂಹಿಕ ಹತ್ಯೆಗೈದ ಯುವಕ: ಐವರ ಕೊಲೆಗೆ ಕೊನೆಗೂ ಕಾರಣ ಬಹಿರಂಗ | Venjaramoodu murders

Venjaramoodu murders
Published on

Venjaramoodu murders : ಯುವಕನೊಬ್ಬನಿಂದ ನಡೆದ ಸಾಮೂಹಿಕ ಹತ್ಯೆ ಪ್ರಕರಣ ಇಡೀ ಕೇರಳವನ್ನೇ ಬೆಚ್ಚಿ ಬೀಳಿಸಿದೆ. ಪ್ರೇಯಸಿಯೂ ಸೇರಿದಂತೆ ತನಗೆ ಸಂಬಂಧಪಟ್ಟ ಐವರನ್ನು ಬರ್ಬರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಕೇರಳದ ವೆಂಜರಮೂಡಿನಲ್ಲಿ ನಡೆದಿದೆ.

ಆರಂಭದಲ್ಲಿ ಈ ಕೊಲೆಗೆ ಕಾರಣ ಏನೆಂಬುದೇ ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು. ಕೊಲೆ ಮಾಡಿದ ಯುವಕ ತಾನಾಗಿಯೇ ಪೊಲೀಸರಿಗೆ ಶರಣಾದನು. ಈ ವೇಳೆ ಕೊಲೆ ಮಾಡಿದ್ದೇಕೆ ಎಂದು ಪ್ರಶ್ನೆ ಮಾಡಿದಾಗ, ನನಗೆ ಗೊತ್ತಿಲ್ಲ ಎಂದು ಹೇಳಿದ್ದನು. ಹೀಗಾಗಿ ಈ ಪ್ರಕರಣ ಪೊಲೀಸರನ್ನು ಗೊಂದಲಕ್ಕೆ ದೂಡಿತ್ತು. ಆದರೆ, ಪೊಲೀಸರು ಕೊನೆಗೂ ಕಾರಣವನ್ನು ಪತ್ತೆಹಚ್ಚಿದ್ದಾರೆ. ಉದ್ಯಮದಲ್ಲಿ ತೀವ್ರ ಕುಸಿತದ ನಂತರ ಉಂಟಾದ ಹಣಕಾಸಿನ ಸಮಸ್ಯೆಯಿಂದಾಗಿ ಈ ರೀತಿ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.

ಆರೋಪಿ ಯುವಕನ ಹೆಸರನ್ನು ಅಫಾನ್ (23)​ ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ಬಳಿಕ ಅಫಾನ್​, ನೇರವಾಗಿ ವೆಂಜರಮೂಡು ಪೊಲೀಸ್​ ಠಾಣೆಗೆ ತೆರಳಿ ಶರಣಾಗಿದ್ದಾನೆ. ತಿರುವನಂತಪುರದ ಪಂಗೋಡ್​, ಆರ್​.ಎನ್​​​. ಪುರಂ​ ಮತ್ತು ಪೆರುಮಾಳದ ಮೂರು ಮನೆಯಲ್ಲಿ ಐದು ಮಂದಿಯನ್ನು ಕೊಲೆ ಮಾಡಿದ್ದಾನೆ. ಅಲ್ಲದೆ, ಹಲ್ಲೆಯಿಂದ ಆರೋಪಿಯ ತಾಯಿ ಶಮೀನಾ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕೊಲೆ ಮಾಡಿದ ಬಳಿಕ ಪೊಲೀಸ್​ ಠಾಣೆಗೆ ತೆರಳಿದ ಅಫಾನ್​, ತಾನು ವಿಷ ಸೇವನೆ ಮಾಡಿರುವುದಾಗಿ ಹೇಳಿದ್ದ. ತಕ್ಷಣ ಆತನನ್ನು ತಿರುವನಂತಪುರದ ಮೆಡಿಕಲ್​ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ತನ್ನ ಅಜ್ಜಿ ಸಲ್ಮಾ ಬೀವಿ (88), ಪಾಂಗೋಡ್​ ಮನೆಯಲ್ಲಿರುವಾಗ ಅಫಾನ್​ ಕೊಲೆ ಮಾಡಿದ್ದಾನೆ. ಬಳಿಕ ಎಸ್​.ಎನ್​ ಪುರಂನಲ್ಲಿದ್ದ ತನ್ನ ತಂದೆಯ ಸಹೋದರ ಲತೀಫ್​ (69), ಆತನ ಪತ್ನಿ ಶಾಹೀದಾ (59) ಅವರನ್ನು ಕೊಂದಿದ್ದಾನೆ. ಇದಾದ ನಂತರ ಪೆರುಮಾಳದಲ್ಲಿ ತನ್ನ ಸಹೋದರ ಅಫ್ಸಾನ್​ (13) ಮತ್ತು ತನ್ನ ಗರ್ಲ್​ಫ್ರೆಂಡ್​ ಫರ್ಸಾನಾಳನ್ನು ಅಫಾನ್​ ಭೀಕರವಾಗಿ ಹತ್ಯೆ ಮಾಡಿದ್ದಾನೆ. ತಾಯಿ ಶಮೀನಾ ಮೇಲೆಯೂ ಹಲ್ಲೆ ಮಾಡಿದ್ದು, ಗಂಭೀರ ಸ್ಥಿತಿಯಲ್ಲಿರುವ ಆಕೆಗೆ ತಿರುವನಂತಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಆರೋಪಿ ಅಫಾನ್​, ತನ್ನ ತಂದೆಯೊಂದಿಗೆ ವಿಸಿಟಿಂಗ್ ವೀಸಾದಲ್ಲಿ ವಿದೇಶದಲ್ಲಿದ್ದನು. ಇತ್ತೀಚೆಗಷ್ಟೇ ಕೇರಳಕ್ಕೆ ಆಗಮಿಸಿದ್ದನು. ಆತನ ತಾಯಿ ಶಮೀನಾ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು. ಮೃತ ಕಿರಿಯ ಸಹೋದರ ಅಫ್ಸಾನ್ ವೆಂಜರಮೂಡು ಶಾಲೆಯಲ್ಲಿ ಒಂಬತ್ತನೇ ತರಗತಿ ವಿದ್ಯಾರ್ಥಿ. ಮೃತ ಲತೀಫ್ ನಿವೃತ್ತ ಸಿಆರ್‌ಪಿಎಫ್ ಅಧಿಕಾರಿಯಾಗಿದ್ದರು. ​

ಕೊಲೆಗೆ ಕಾರಣವೇನು?

ಅಪರಾಧ ಎಸಗುವಾಗ ಅಫಾನ್ ಡ್ರಗ್ಸ್​ ಪ್ರಭಾವಕ್ಕೆ ಒಳಗಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪರೀಕ್ಷೆಗಾಗಿ ಆತನ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ತನಿಖಾ ತಂಡವು ಇಂದು ಆತನನ್ನು ವಿಚಾರಣೆ ನಡೆಸುವ ಸಾಧ್ಯತೆಯಿದೆ. ಇನ್ನು ಪೊಲೀಸ್​ ವಿಚಾರಣೆಯಲ್ಲಿ ಆಘಾತಕಾರಿ ಮಾಹಿತಿಗಳು ಹೊರಬಿದ್ದಿವೆ. ಅಫಾನ್ ಸಾಕಷ್ಟು ಜನರಿಂದ ಹಣವನ್ನು ಸಾಲ ಪಡೆದಿದ್ದ. ಆರ್ಥಿಕ ತೊಂದರೆಗಳು ಅವರ ಕುಟುಂಬವನ್ನು ತೀವ್ರ ಕಾಡುತ್ತಿತ್ತು ಎಂದು ನೆರೆಹೊರೆಯವರು ಮತ್ತು ಆತನ ಪರಿಚಯಸ್ಥರು ಪೊಲೀಸರಿಗೆ ತಿಳಿಸಿದ್ದಾರೆ.

ಇತ್ತೀಚೆಗೆ, ಹಣಕಾಸಿನ ಸಮಸ್ಯೆ ತೀವ್ರಗೊಂಡಿತ್ತು. ಸಾಲಗಳನ್ನು ತೀರಿಸಲು ಅಫಾನ್​ ತನ್ನ ಸಂಬಂಧಿಕರಿಂದ ಹಣವನ್ನು ಸಹ ಕೇಳಿದ್ದನು. ಆದರೆ, ಹಣ ಕೊಡಲು ಸಂಬಂಧಿಕರು ನಿರಾಕರಿಸಿದ್ದರು. ಇದರಿಂದ ತೀವ್ರ ಅಸಮಾಧಾನಗೊಂಡಿದ್ದ ಅಫಾನ್​, ಕೊನೆಗೆ ಕೊಲೆ ಮಾಡಿದ್ದಾನೆಂದು ತಿಳಿದುಬಂದಿದೆ. ಕೊಲೆ ನಡೆಯುವ ಎರಡು ದಿನಗಳ ಮೊದಲು, ಅಫಾನ್ ತನ್ನ ಗೆಳತಿ ಫರ್ಸಾನಾಳನ್ನು ಮನೆಗೆ ಕರೆತಂದಿದ್ದ. ಈ ವೇಳೆ ಆತನ ಕುಟುಂಬಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಫರ್ಸಾನಾ ಅಂಚಲ್‌ನ ಕಾಲೇಜಿನಲ್ಲಿ ಬಿಎಸ್ಸಿ ರಸಾಯನಶಾಸ್ತ್ರ ವಿದ್ಯಾರ್ಥಿನಿಯಾಗಿದ್ದಳು.

ಪ್ರಸ್ತುತ ಕೊಲೆಗೆ ಹಣಕಾಸಿನ ಸಮಸ್ಯೆಗಳಿರಬಹುದು ಎಂದು ನಾವು ಶಂಕಿಸುತ್ತೇವೆ. ಇತರ ಎಲ್ಲಾ ಆಯಾಮಗಳಿಂದಲೂ ತನಿಖೆ ಮಾಡಬೇಕಾಗಿದೆ ಎಂದು ಅಟ್ಟಿಂಗಲ್ ಡಿವೈಎಸ್ಪಿ ಮಂಜುಲಾಲ್ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net