5 ಲಕ್ಷ ರೂ. ಕೊಡದ ಇನ್ನಿಬ್ಬರಿಗೂ ಕಾದಿತ್ತು ಗಂಡಾಂತರ! ಶಾಕಿಂಗ್​ ವಿಚಾರ ಬಾಯ್ಬಿಟ್ಟ ಐವರ ಕೊಲೆ ಆರೋಪಿ | Mass Murder

ವಿಜಯವಾಣಿ - 2025-03-02T125435.670
Published on

Kerala Mass Murder: ಕೇರಳದ ತಿರುವನಂತಪುರಂನಲ್ಲಿ ಯುವಕನೊಬ್ಬನಿಂದ ನಡೆದ ಸಾಮೂಹಿಕ ಹತ್ಯೆ ಪ್ರಕರಣ ಸದ್ಯ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ತನ್ನ ಪ್ರೇಯಸಿಯೂ ಸೇರಿದಂತೆ ಕುಟುಂಬದ ಐವರನ್ನು 23 ವರ್ಷದ ಅಫಾನ್​ ಕೇರಳದ ವೆಂಜರಮೂಡಿನಲ್ಲಿ ಬರ್ಬರವಾಗಿ ಹತ್ಯೆಗೈದ ಘಟನೆ ಸ್ಥಳೀಯರ ನಿದ್ದೆಯನ್ನೇ ಕೆಡಿಸಿದೆ. ಈ ಕೊಲೆಯ ಹಿಂದಿರುವ ಕಾರಣವೇನು? ತನ್ನವರನ್ನೇ ಇಷ್ಟೂ ಕ್ರೂರವಾಗಿ ಹತ್ಯೆಗೈಯುವ ಉದ್ದೇಶ ಏನಿತ್ತು ಎಂಬುದನ್ನು ತಿಳಿದುಕೊಳ್ಳಲು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದು, ಕೊನೆಗೂ ಸಾಮೂಹಿಕ ಹತ್ಯೆ ಹಿಂದಿದ್ದ ಕಾರಣವನ್ನು ಆರೋಪಿ ಅಫಾನ್​ನಿಂದ ಬಾಯ್ಬಿಡಿಸಿದ್ದಾರೆ.

ಇನ್ನಷ್ಟು ಮಾಹಿತಿ ಅಗತ್ಯ

ತನ್ನದೇ ಕುಟುಂಬದ ಐವರನ್ನು ಒಂದೇ ಸುತ್ತಿಗೆಯಿಂದ ಬರ್ಬರವಾಗಿ ಹತ್ಯೆಗೈದ ಆರೋಪಿ ಅಫಾನ್​, ಸಂಪೂರ್ಣವಾಗಿ ಗುಣಮುಖನಾಗಿ ಆಸ್ಪತ್ರೆಯಿಂದಲೇ ಪೊಲೀಸರ ಮತ್ತೊಂದು ಮಾರ್ಗದ ವಿಚಾರಣೆಯಲ್ಲಿ ಭಾಗಿಯಾಗಿದ್ದಾನೆ. ವಿಷ ಸೇವಿಸಿ ಇಷ್ಟು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಆರೋಪಿಯ ಬಾಯಿಂದ ಸತ್ಯ ಸಂಗತಿಯನ್ನು ತಿಳಿಯಲು ತನಿಖೆಗಾಗಿ ಕಾದಿದ್ದ ಖಾಕಿ ಪಡೆ, ಕೊನೆಗೂ ಆತನಿಂದ ನಡೆದ ಘಟನೆ, ಉದ್ದೇಶವನ್ನು ತಿಳಿದುಕೊಂಡಿದ್ದಾರೆ.

"ಆ ಐದು ಮಂದಿ ಜತೆಗೆ ಕುಟುಂಬದ ಇನ್ನಿಬ್ಬರನ್ನೂ ಕೊಲೆಗೈಯುವ ಉದ್ದೇಶ ನನ್ನದಾಗಿತ್ತು. ಥಟ್ಟಮಲದಲ್ಲಿರುವ ನಮ್ಮ ಸಂಬಂಧಿಕರ ತಾಯಿ ಮತ್ತು ಅವರ ಮಗಳನ್ನು ಹತ್ಯೆಗೈಯಲು ಸಂಚು ಹೂಡಿದ್ದೆ" ಎಂದು ಅಫಾನ್​ ಹೇಳಿದ್ದಾನೆ. ಆಸ್ಪತ್ರೆಯಲ್ಲಿ ಅಫಾನ್‌ನನ್ನು ಭೇಟಿಯಾದ ಮಾನಸಿಕ ಆರೋಗ್ಯ ತಜ್ಞರು, ಈ ವಿಷಯವನ್ನು ಪೊಲೀಸರ ಮುಂದೆ ಬಹಿರಂಗಪಡಿಸಿದ್ದಾರೆ. ತನ್ನ ಸಂಬಂಧಿಕರಿಂದ 5 ಲಕ್ಷ ರೂಪಾಯಿ ಸಾಲ ಕೇಳಿದ್ದ ಅಫಾನ್​, ಆ ಹಣ ಕೊಡದಿದ್ದಕ್ಕೆ ಅವರ ಮೇಲಿನ ಕೋಪದಿಂದ ಕೊಲೆಗೈಯಲು ಸಂಚು ಹೂಡಿದ್ದ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.

ಕಸ್ಟಡಿಗೆ ಬಂದ ನಂತರ

ಮೃತರನ್ನು ಅಜ್ಜಿ ಸಲ್ಮಾಬೀಬಿ, ಸಹೋದರ ಅಫ್ಸಾನ್ (13), ಯುವಕನ ತಂದೆಯ ಸಹೋದರ ಲತೀಫ್, ಲತೀಫ್ ಪತ್ನಿ ಶಾಹಿದಾ ಮತ್ತು ಓರ್ವ ಯುವತಿ ಎಂಬುದು ತನಿಖೆಯಲ್ಲಿ ಬಯಲಾಗಿದೆ. ಈ ಪೈಕಿ ಯುವತಿ ಫರ್ಸಾನಾಳ ಆರೋಪಿ ಅಫಾನ್​ ಪ್ರೇಯಸಿ ಎಂಬುದು ದೃಢವಾಗಿದೆ. ಫೆ.24ರ ಮುಂಜಾನೆ, ಪೊಲೀಸರಿಗೆ ಕರೆ ಮಾಡಿದ ಅಫಾನ್​, ತನ್ನ ಕುಟುಂಬದ ಐದು ಮಂದಿಯನ್ನು ಭೀಕರವಾಗಿ ಹಲ್ಲೆಗೈದು ನಂತರ ಕೊಲೆ ಮಾಡಿರುವುದಾಗಿ ಹೇಳಿಕೊಂಡಿದ್ದ. ಪ್ರಸ್ತುತ ಆರೋಪಿಯನ್ನು ಹಂತ ಹಂತವಾಗಿ ವಿಚಾರಣೆ ನಡೆಸುತ್ತಿರುವ ಪೊಲೀಸರು, ಆತನ ಚಲನವಲನದ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.

ಸದ್ಯ ಆಸ್ಪತ್ರೆಯಲ್ಲೇ ಉಳಿದಿರುವ ಅಫಾನ್​ನನ್ನು ಇಂದು ಅಥವಾ ನಾಳೆ ಆಸ್ಪತ್ರೆಯಿಂದ ಜೈಲಿಗೆ ಸ್ಥಳಾಂತರಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆತನ ಆರೋಗ್ಯ ಸುಧಾರಿಸಿದ್ದರಿಂದ ವೈದ್ಯರ ಸಲಹೆಯ ಮೇರೆಗೆ ಜೈಲಿಗೆ ಸ್ಥಳಾಂತರಿಸಲಾಗುವುದು, ಆ ನಂತರ ಹೆಚ್ಚಿನ ಮಾಹಿತಿ ಕಲೆಹಾಕಲಾಗುವುದು ಎಂದು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net