

ಹಾವೇರಿ: ವೇಗ ನಿಯಂತ್ರಿಸಲಾಗದೆ ಬೋಲೆರೊ ವಾಹನ ಪಲ್ಟಿಯಾದ ಪರಿಣಾಮ ಮೂವರು ಕುರಿಗಾಹಿಗಳು ಮತ್ತು 10 ಕುರಿಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಸಿಮ್ಲಾ ದಾಬಾ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.
ಮೈಲಾರಪ್ಪ ಕೈದಾಳ (40), ಗುಡ್ಡಪ್ಪ ಕೈದಾಳ (42), ಶಿವಕುಮಾರ ಹೊಳೆಯಪ್ಪನವರ (22) ಮೃತಪಟ್ಟ ಕುರಿಗಾಹಿಗಳು. ಮೃತರು ರಾಣೆಬೆನ್ನೂರ ತಾಲೂಕಿನ ಕಾಕೋಳ ಗ್ರಾಮದ ನಿವಾಸಿಗಳು ಎಂದು ವರದಿಯಾಗಿದೆ. ಬಾಗಲಕೋಟೆಯಿಂದ ಖರೀದಿಸಿದ ಕುರಿಗಳೊಂದಿಗೆ ಊರಿಗೆ ಬರುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.
ಮೃತರು ಕುರಿಗಳ ಮಾರಾಟ ಮಾಡುವ ವ್ಯಾಪಾರಿಗಳಾಗಿದ್ದರು ಎನ್ನಲಾಗಿದೆ. ವೇಗದಲ್ಲಿ ಬಂದ ಬೊಲೆರೊ ವಾಹನ ಮುಂದಿನ ವಾಹನಕ್ಕೆ ಡಿಕ್ಕಿ ಹೊಡೆದ ಕೂಡಲೇ ಪಲ್ಟಿಯಾಗಿದೆ. ಘಟನೆಯ ಪರಿಣಾಮ ಗಾಡಿಯಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಪೋಲಿಸರು ಭೇಟಿ ನೀಡಿದ್ದು, ಸ್ಥಳವನ್ನು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.