

ಪಟ್ನ : ಮದುವೆಯ ಮೊದಲ ಶಾಸ್ತ್ರವಾದ ವರನಿಗೆ 'ತಿಲಕ್' ಹಚ್ಚುವ ಶಾಸ್ತ್ರ ಮುಗಿಸಿ ವಾಪಸಾಗುತ್ತಿದ್ದಾಗ ವಾಹನವು ಗಂಗಾ ನದಿಗೆ ಬಿದ್ದು, ಎಂಟು ಜನ ಮಸಣದ ಹಾದಿ ಹಿಡಿದಿರುವ ಘಟನೆ ಬಿಹಾರದಿಂದ ವರದಿಯಾಗಿದೆ. ಒಟ್ಟು 25 ಜನ ಪ್ರಯಾಣ ಮಾಡುತ್ತಿದ್ದ ವಾಹನವು ಸೇತುವೆಯ ಮೇಲಿನಿಂದ ಆಯತಪ್ಪಿ ನೀರಿಗೆ ಬಿದ್ದಿದ್ದು, ಉಳಿದ ಪ್ರಯಾಣಿಕರ ಪತ್ತೆ ಕಾರ್ಯ ನಡೆಯುತ್ತಿದೆ.
ಇಂದು ಬೆಳಿಗ್ಗೆ 25 ಜನರು ಪ್ರಯಾಣಿಸುತ್ತಿದ್ದ ಪ್ಯಾಸೆಂಜರ್ ವಾಹನವೊಂದು ಪಟ್ನಾದ ದಾನಾಪುರದಲ್ಲಿ ಪೀಪಾ ಸೇತುವೆ ದಾಟುತ್ತಿದ್ದಾಗ ಈ ದುರಂತ ನಡೆದಿದೆ. ನೀರುಪಾಲಾಗಿ ಸಾವಪ್ಪಿದ ಮೂವರು ಮಕ್ಕಳೂ ಸೇರಿದಂತೆ ಎಂಟು ಜನರ ಮೃತದೇಹಗಳನ್ನು ಈವರೆಗೆ ಹೊರತೆಗೆಯಲಾಗಿದೆ.
ಮೃತರನ್ನು ರಮಾಕಾಂತ್ ಸಿಂಗ್ (75), ಗೀತಾ ದೇವಿ (60), ಅರವಿಂದ್ ಸಿಂಗ್ (50), ಸರೋಜ್ ದೇವಿ (65), ಅನುರಾಧಾ ದೇವಿ (75) ಮತ್ತು ಆಶಿಶ್ (8) ಎಂದು ಗುರುತಿಸಲಾಗಿದೆ. 12 ಮತ್ತು 14 ವರ್ಷ ವಯಸ್ಸಿನ ಇತರ ಇಬ್ಬರು ಮಕ್ಕಳ ಶವಗಳನ್ನು ಇನ್ನೂ ಗುರುತಿಸಲಾಗಿಲ್ಲ. ನೀರಿಗೆ ಬಿದ್ದ ಇತರರ ಪತ್ತೆ ಕಾರ್ಯ ಮುಂದುವರಿದಿದೆ. (ಏಜೆನ್ಸೀಸ್)