

ನವದೆಹಲಿ: ಸಂಸತ್ತಿನ ಕ್ಯಾಂಟೀನ್ ಶೀಘ್ರವೇ ಪೂರ್ತಿ ಸಸ್ಯಾಹಾರಿ ಕ್ಯಾಂಟೀನ್ ಆಗಿ ಬದಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇಷ್ಟುದಿನ ಭಾರತೀಯ ರೈಲ್ವೆಯ ಅಂಗಸಂಸ್ಥೆಯಾದ ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೋರೇಶನ್ (ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ-ಐಆರ್ಟಿಸಿ) ಈ ಕ್ಯಾಂಟೀನ್ ನಡೆಸುತ್ತಿತ್ತು. ಹಾಗಾಗಿ ಇಲ್ಲಿ ಸಸ್ಯಾಹಾರಿ, ಮಾಂಸಾಹಾರಿ ಆಹಾರಗಳು, ತಿನಿಸುಗಳು ಸಿಗುತ್ತಿದ್ದವು. ಆದರೆ ಇನ್ನೇನು ಕೆಲವೇ ದಿನಗಳಲ್ಲಿ ಕ್ಯಾಂಟೀನ್ ಗುತ್ತಿಗೆ ಐಆರ್ಟಿಸಿ ಕೈತಪ್ಪಲಿದ್ದು ಹಳ್ದಿರಾಮ್ ಅಥವಾ ಬಿಕಾನೇರ್ವಾಲಾ ಪಾಲಾಗಲಿದೆ ಎಂದು ಹೇಳಲಾಗುತ್ತಿದೆ.
ಬಿಕಾನೇರ್ವಾಲಾ ಹಾಗೂ ಹಳ್ದಿರಾಮ್ ಸಂಸ್ಥೆಗಳು ಖಾಸಗಿಯಾಗಿದ್ದು ಇವು ಬರೀ ಸಸ್ಯಾಹಾರವನ್ನು ಮಾತ್ರ ಪೂರೈಸುತ್ತವೆ. ಇವೆರಡರಲ್ಲಿ ಕ್ಯಾಂಟೀನ್ ನಡೆಸಲು ಯಾವುದೇ ಸಂಸ್ಥೆಯನ್ನೂ ಆಯ್ಕೆ ಮಾಡಿಕೊಂಡರೂ ಸಂಸದರಿಗೆ, ಸಂಸತ್ತಿನ ಸಿಬ್ಬಂದಿಗೆ ನಾನ್ ವೆಜ್ ಸಿಗುವುದಿಲ್ಲ ಎನ್ನಲಾಗಿದೆ.
ಇವೆರಡರೊಟ್ಟಿಗೆ ಇನ್ನೊಂದು ಸರ್ಕಾರಿ ಸಂಸ್ಥೆಯೊಂದು ಕೂಡ ಕ್ಯಾಂಟೀನ್ ನಡೆಸುವ ರೇಸ್ನಲ್ಲಿ ಇದೆ.
ಐಆರ್ಟಿಸಿ ಕ್ಯಾಂಟೀನ್ನಲ್ಲಿ ನೀಡುತ್ತಿದ್ದ ಆಹಾರದ ಗುಣಮಟ್ಟ ಸರಿಯಿಲ್ಲ ಎಂದು ಹಲವು ದೂರುಗಳು ಹೋದ ಹಿನ್ನೆಲೆಯಲ್ಲಿ ಅದರ ಗುತ್ತಿಗೆಯನ್ನು ರದ್ದುಪಡಿಸುವ ನಿರ್ಧಾರವನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ತೆಗೆದುಕೊಂಡಿದ್ದಾರೆ. ಹಾಗೇ ಹಳ್ದಿರಾಮ್ಗೆ ವಹಿಸಬೇಕೋ ಅಥವಾ ಬಿಕಾನೇರ್ವಾಲಾಗೋ ಎಂಬುದನ್ನೂ ಸ್ಪೀಕರ್ ಅವರೇ ತೀರ್ಮಾನಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಯಾಕೆಂದರೆ ಓಂ ಬಿರ್ಲಾ ಅವರೂ ಕೂಡ ಇದೆರಡು ಸಂಸ್ಥೆಗಳ ಮೇಲೆಯೇ ಒಲವು ಹೊಂದಿದ್ದಾರೆ ಎನ್ನಲಾಗಿದೆ.
ಇಷ್ಟುದಿನ ಈ ಕ್ಯಾಂಟೀನ್ನಲ್ಲಿ ಬಿರ್ಯಾನಿ, ಚಿಕನ್ ಕಟ್ಲೆಟ್, ಮೀನು ಸೇರಿ ಕೆಲವು ನಾನ್ವೆಜ್ ತಿನಿಸುಗಳೇ ಹೆಚ್ಚು ಮಾರಾಟವಾಗುತ್ತಿದ್ದವು. ಅಧಿಕ ಜನರ ಆದ್ಯತೆ ಅದೇ ಆಗಿತ್ತು. ಈಗ ಒಂದೊಮ್ಮೆ ಸಂಸತ್ತಿನ ಕ್ಯಾಂಟೀನ್ ಪೂರ್ತಿ ಸಸ್ಯಾಹಾರಿಯಾಗಿ ಪರಿವರ್ತನೆಯಾದರೆ ನಾನ್ ವೆಜ್ ಪ್ರಿಯರಿಗೆ ತೊಂದರೆಯಾಗುವುದು ಸಹಜ.
ಕಳೆದ ಕೆಲವು ತಿಂಗಳಿಂದಲೂ ಐಆರ್ಸಿಟಿಸಿ ವಿರುದ್ಧ ದೂರುಗಳನ್ನು ನೀಡಲಾಗುತ್ತಿತ್ತು. ಕಳಪೆ ಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ಸಂಸದರು, ಅಲ್ಲಿನ ಸಿಬ್ಬಂದಿ ಆರೋಪಿಸಿದ್ದರು.
ಅಷ್ಟೇ ಅಲ್ಲದೆ ಕ್ಯಾಂಟೀನ್ ತಮಗೆ ನೀಡುವ ಸಬ್ಸಿಡಿಯನ್ನು ತ್ಯಜಿಸಲು ಬಹುತೇಕ ಸದಸ್ಯರು ಕಳೆದ ಚಳಿಗಾಲದ ಅಧಿವೇಶನದಲ್ಲಿ ಒಮ್ಮತದಿಂದ ನಿರ್ಧರಿಸಿದ್ದರು. ಈ ಎಲ್ಲ ಕಾರಣಕ್ಕೆ ಕ್ಯಾಂಟೀನ್ ಗುತ್ತಿಗೆಯನ್ನು ಬದಲಿಸಲು ಸ್ಪೀಕರ್ ನಿರ್ಧರಿಸಿದ್ದಾರೆ ಎನ್ನಲಾಗಿದೆ.(ಏಜೆನ್ಸೀಸ್)