ಜನವರಿಯಲ್ಲಿ ಸಸ್ಯಾಹಾರಿ ಊಟ ದುಬಾರಿ, ಕಡಿಮೆಯಾದ ನಾನ್ ವೆಜ್ ಬೆಲೆ

food
Published on

ವಾರ್ಷಿಕ ಆಧಾರದ ಮೇಲೆ ಕಳೆದ ತಿಂಗಳು ವೆಜ್ ಥಾಲಿಯ ಬೆಲೆ ಶೇಕಡ ಐದರಷ್ಟು ಹೆಚ್ಚಾಗಿದೆ. ಇದೇ ವೇಳೆ ನಾನ್ ವೆಜ್ ಥಾಲಿ ಬೆಲೆಯಲ್ಲಿ ಇಳಿಕೆಯಾಗಿದೆ.

ನವದೆಹಲಿ: ಕಳೆದ ವರ್ಷಕ್ಕೆ ಹೋಲಿಸಿದರೆ ಸಸ್ಯಾಹಾರಿ ಆಹಾರದ ಬೆಲೆ ಜನವರಿಯಲ್ಲಿ 5 ಪ್ರತಿಶತದಷ್ಟು ಹೆಚ್ಚಾಗಿದೆ. ಇದೇ ಸಮಯದಲ್ಲಿ, ಇದೇ ಅವಧಿಯಲ್ಲಿ ಮಾಂಸಾಹಾರಿ ಥಾಲಿ ಅಗ್ಗವಾಗಿದೆ. ಬೇಳೆಕಾಳು, ಅಕ್ಕಿ ಮತ್ತಿತರ ವಸ್ತುಗಳ ಬೆಲೆ ಏರಿಕೆಯಾಗಿರುವುದು ಇದಕ್ಕೆ ಕಾರಣ ಎನ್ನಲಾಗಿದೆ. ಬುಧವಾರ ಬಿಡುಗಡೆ ಮಾಡಿರುವ ಖಾಸಗಿ ಸಂಸ್ಥೆಯ ಸಂಶೋಧನಾ ವರದಿಯಲ್ಲಿ ಈ ಮಾಹಿತಿ ನೀಡಲಾಗಿದೆ.

ಕ್ರಿಸಿಲ್ ಮಾರ್ಕೆಟ್ ಇಂಟೆಲಿಜೆನ್ಸ್ ಅಂಡ್ ಅನಾಲಿಟಿಕ್ಸ್ (ಎಂಐ&ಎ) ರಿಸರ್ಚ್ ಬಿಡುಗಡೆ ಮಾಡಿರುವ ‘ರೈಸ್ ರೊಟ್ಟಿ ದರ’ ಎಂಬ ವರದಿಯಲ್ಲಿ, ಕಳೆದ ತಿಂಗಳಿನಲ್ಲಿ ಬೇಳೆಕಾಳು, ಅಕ್ಕಿ, ಈರುಳ್ಳಿ, ಟೊಮ್ಯಾಟೊ ಮುಂತಾದ ವಸ್ತುಗಳ ಬೆಲೆ ಏರಿಕೆಯಿಂದಾಗಿ ವೆಜ್ ಥಾಲಿ ಬೆಲೆ ದುಬಾರಿಯಾಗಿದೆ. ಇದೇ ವೇಳೆ ಮಾಂಸಾಹಾರ ಥಾಲಿಯ ಬೆಲೆಯಲ್ಲಿ ಇಳಿಕೆಯಾಗಿದೆ.

ಈರುಳ್ಳಿ, ಟೊಮ್ಯಾಟೊ ಬೆಲೆಯಲ್ಲಿ ಏರಿಕೆ
ಕಳೆದ ತಿಂಗಳು ವಾರ್ಷಿಕವಾಗಿ ಈರುಳ್ಳಿ ಮತ್ತು ಟೊಮ್ಯಾಟೊ ದರದಲ್ಲಿ ಕ್ರಮವಾಗಿ ಶೇಕಡ 35 ಮತ್ತು 20 ರಷ್ಟು ಏರಿಕೆಯಾದ ಕಾರಣ ವೆಜ್ ಥಾಲಿಯ ಬೆಲೆ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ. ಈ ವರದಿಯ ಪ್ರಕಾರ, ಶೇಕಡ 12 ರಷ್ಟಿರುವ ಅಕ್ಕಿಯ ಬೆಲೆಯು ಜನವರಿ ತಿಂಗಳಲ್ಲಿ ಶೇಕಡ 14 ರಷ್ಟು ಏರಿಕೆಯಾಗಿದೆ, ಹಾಗೆಯೇ ಒಂಬತ್ತು ಪ್ರತಿಶತ ಹೊಂದಿರುವ ಬೇಳೆಕಾಳುಗಳ ಬೆಲೆ ಶೇಕಡ 21 ರಷ್ಟು ಹೆಚ್ಚಾಗಿದೆ.

ಮಾಂಸಾಹಾರವನ್ನು ಇಷ್ಟಪಡುವ ಜನರಿಗೆ, ಕಳೆದ ತಿಂಗಳು ವೆಚ್ಚದ ವಿಷಯದಲ್ಲಿ ಸಮಾಧಾನ ತಂದಿದೆ. ಕಳೆದ ವರ್ಷ ಇದೇ ತಿಂಗಳಿಗೆ ಹೋಲಿಸಿದರೆ ಉತ್ಪಾದನೆ ಹೆಚ್ಚಾದ ಕಾರಣ ಈ ವರ್ಷದ ಜನವರಿಯಲ್ಲಿ ಬಾಯ್ಲರ್ ಚಿಕನ್ ಬೆಲೆ ಶೇ.26ರಷ್ಟು ಕುಸಿದಿದ್ದರಿಂದ ಮಾಂಸಾಹಾರಿ ಥಾಲಿಯ ಬೆಲೆ ಇಳಿಕೆಯಾಗಿದೆ. ಆದರೆ ಡಿಸೆಂಬರ್ 2023 ಕ್ಕೆ ಹೋಲಿಸಿದರೆ 2024 ರ ಜನವರಿಯಲ್ಲಿ ಸಸ್ಯಾಹಾರಿ ಮತ್ತು ಮಾಂಸಾಹಾರಿ ಥಾಲಿಗಳ ಬೆಲೆಗಳು ಕ್ರಮವಾಗಿ ಶೇಕರ ಆರು ಮತ್ತು ಶೇಕಡ ಎಂಟು ಕಡಿಮೆಯಾಗಿದೆ. 

ವರದಿಯ ಪ್ರಕಾರ, ಮಾಸಿಕ ಆಧಾರದ ಮೇಲೆ ಈರುಳ್ಳಿ ಮತ್ತು ಟೊಮೆಟೊ ಬೆಲೆಯಲ್ಲಿ ಕ್ರಮವಾಗಿ ಶೇಕಡ 26 ಮತ್ತು 16 ರಷ್ಟು ಕುಸಿತ ಹಾಗೂ ಟೊಮೆಟೊಗಳ ಆಗಮನದ ಹೆಚ್ಚಳದಿಂದಾಗಿ ಡಿಸೆಂಬರ್‌ಗೆ ಹೋಲಿಸಿದರೆ ವೆಜ್ ಥಾಲಿಯ ಬೆಲೆ ಕಡಿಮೆಯಾಗಿದೆ. ಮಾಂಸಾಹಾರಿ ಥಾಲಿಯಲ್ಲಿ ಮಾಸಿಕ ಆಧಾರದ ಮೇಲೆ ಕೋಳಿಯ ಬೆಲೆಯಲ್ಲಿ 8-10 ಪ್ರತಿಶತದಷ್ಟು ಕಡಿತದಿಂದಾಗಿ ಥಾಲಿಯ ಬೆಲೆ ವೇಗವಾಗಿ ಕಡಿಮೆಯಾಗಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net