ಪಂ. ಪಂಚಾಕ್ಷರ ಹಾಗೂ ಪಂ. ಪುಟ್ಟರಾಜ ಗವಾಯಿಗಳ ಪುಣ್ಯಸ್ಮರಣೋತ್ಸವ

IMG-20230609-WA0011
Published on

ಗದಗ:

ಶಿವಪೂಜೆ, ಲಿಂಗಪೂಜೆ ಮತ್ತು ಕಲಾದೇವಿಯ ಆರಾಧನೆ ಮಾಡುವ ಮೂಲಕ ಅಂಧ ಅನಾಥರಿಗೆ ಸಂಗೀತ, ಶಿಕ್ಷಣ, ಊಟ ನೀಡುವ ಮೂಲಕ ಜಗತ್ತಿನ ಅಪರೂಪದ ವ್ಯಕ್ತಿಗಳ ಸಾಲಿನಲ್ಲಿ ಉಭಯ ಗವಾಯಿಗಳು ನಿಲ್ಲುತ್ತಾರೆ ಎಂದು ಹುಬ್ಬಳ್ಳಿಯ ಮೂರುಸಾವಿರಮಠದ ಜ. ಗುರುಸಿದ್ಧರಾಜಯೋಗಿಂದ್ರ ಮಹಾಸ್ವಾಮೀಜಿ ಮಾತನಾಡಿದರು.

ನಗರದ ವೀರೇಶ್ವರ ಪುಣ್ಯಾಶ್ರಮದದಲ್ಲಿ ಪಂ. ಪಂಚಾಕ್ಷರ ಗವಾಯಿಗಳ 79ನೇ ಪುಣ್ಯಸ್ಮರಣೋತ್ಸವ, ಡಾ| ಪಂಡಿತ ಪುಟ್ಟರಾಜ ಗವಾಯಿಗಳ 13ನೇ ಪುಣ್ಯಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ನಡೆದ ಧರ್ಮೋತ್ತೇಜಕ ಮಹಾಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಬೆಳ್ಳಿ-ಬಂಗಾರ ಕೂಡಿಡಲಿಲ್ಲ. ಆಸ್ತಿ ಮಾಡಲಿಲ್ಲ. ಅಂಧ ಅನಾಥರಿಗೆ ಸಂಗೀತ ಶಿಕ್ಷಣ ನೀಡುವ ಮೂಲಕ ಅಂಧರ ಬಾಳಿಗೆ ಬೆಳಕಾದರು. ದೇಶದಲ್ಲಿ ಅನೇಕರು ಕೋಟ್ಯಾಧೀಶರಿದ್ದಾರೆ, ದುಡ್ಡು, ಬಂಗಾರ, ವೈಡುರ್ಯಗಳನ್ನು ಹೊಂದಿರುವವರು ಮತ್ತು ಸಿರಿವಂತ ಮಠಾಧೀಶರು ಮಾಡದಂತಹ ಕೆಲಸವನ್ನು ಪಂ. ಪಂಚಾಕ್ಷರ ಹಾಗೂ ಪಂ. ಪುಟ್ಟರಾಜ ಗವಾಯಿಗಳು ಮಾಡಿ ತೋರಿಸಿದ್ದಾರೆ ಎಂದು ಹೇಳಿದರು.

ವೀರೇಶ್ವರ ಪುಣ್ಯಾಶ್ರಮದಲ್ಲಿನ ಸಂಗೀತ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಇಂದು ಭಾರತದ ಮೂಲೆಮೂಲೆಗಳಲ್ಲಿ ಸಂಗೀತದಲ್ಲಿ ಸಾಧನೆ ಮಾಡುವ ಮೂಲಕ ಪುಣ್ಯಾಶ್ರಮದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ತೋಂಟದಾರ್ಯ ಮಠದ ಡಾ| ತೋಂಟದ ಸಿದ್ಧರಾಮ ಮಹಾಸ್ವಾಮೀಜಿ ಮಾತನಾಡಿ, ಪಂ. ಪಂಚಾಕ್ಷರ ಗವಾಯಿಗಳು ಹಾಗೂ ಪಂ. ಪುಟ್ಟರಾಜ ಗವಾಯಿಗಳು ಸಮಾಜದಲ್ಲಿ ಸಾವಿರಾರು ಅಂಧ ಅನಾಥರಿಗೆ ಶಿಕ್ಷಣ, ಸಂಗೀತ ನೀಡುವ ಮೂಲಕ  ವೀರೇಶ್ವರ ಪುಣ್ಯಾಶ್ರಮವನ್ನು ಬೆಳೆಸಿ ನಾಡಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದರು.

ಹಾನಗಲ್ ಕುಮಾರಶಿವಯೋಗಿಗಳು ಶಿವಯೋಗ ಮಂದಿರ ಸ್ಥಾಪಿಸಿ ವಟುಗಳಿಗೆ ತರಬೇತಿ ನೀಡುವ ಮೂಲಕ ಮಠಗಳಿಗೆ ಮಠಾಧೀಶರನ್ನು ಕೊಡುಗೆ ನೀಡಿದರು. ಪಂ. ಪಂಚಾಕ್ಷರ ಹಾಗೂ ಪಂ. ಪುಟ್ಟರಾಜ ಗವಾಯಿಗಳು ಸಂಗೀತ ಲೋಕಕ್ಕೆ ಅಗಾಧ ಸೇವೆ ಸಲ್ಲಿಸುವುದರ ಜೊತೆಗೆ ಸಂಗೀತ ಸಾಧಕರಿಗೆ ಪ್ರೇರಣೆಯಾದರು. ಸಂಗೀತ ಪಾಠಶಾಲೆ ಮೂಲಕ ಆರಂಭವಾದ ಪುಣ್ಯಾಶ್ರಮವು ಸಂಗೀತ ಮಹಾವಿದ್ಯಾಲಯವಾಗಿ ಬೆಳೆದಿರುವುದು ಶ್ಲಾಘನೀಯ ಎಂದು ಹೇಳಿದರು.

ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಇಂದಿನ ವಿಜ್ಞಾನಿಗಳು ಆಕಾಶದಲ್ಲಿ ಅದ್ಭುತಗಳಿರುವುದನ್ನು ಒಪ್ಪುವುದಾದರೆ ಭೂಮಿಯಲ್ಲೂ ಪಂಚಾಕ್ಷರ ಹಾಗೂ ಪುಟ್ಟರಾಜ ಗವಾಯಿಗಳಂತಹ ಮುತ್ತುರತ್ನಗಳು ಇರುವುದು ಅಷ್ಟೇ ಸತ್ಯ. ಕಣ್ಣಿಲ್ಲದೇ ಉಭಯ ಗುರು ಶಿಷ್ಯರು ಸಾಧನೆಯನ್ನು ಸಾಧಿಸಿದರು. ಗದುಗಿನ ವೀರೇಶ್ವರ ಪುಣ್ಯಾಶ್ರಮಕ್ಕೆ ಚಂದ್ರನಂತಹ ಬೆಳಕನ್ನು ಕರುಣಿಸಿದ್ದಾರೆ ಎಂದು ಹೇಳಿದರು.

ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು ಮಾತನಾಡಿದರು. ಬಳಗಾನೂರಿನ ಚಿಕೇನಕೊಪ್ಪದ ಶಿವಶಾಂತವೀರ ಶರಣರು, ಮಡಿವಾಳೇಶ್ವರ ಗದ್ದಗಿಮಠದ ಮಡಿವಾಳೇಶ್ವರ ಸ್ವಾಮೀಜಿ, ಗಂಗಾವತಿ ಕಲ್ಮಠದ ಡಾ| ಕೊಟ್ಟೂರ ಸ್ವಾಮೀಜಿ, ಅಡ್ನೂರ ಬೃಹನ್ಮಠದ ಅಭಿನವ ಪಂಚಾಕ್ಷರ ಸ್ವಾಮೀಜಿ, ನಾಗಣಸೂರು ಬಸವಲಿಂಗೇಶ್ವರ ತುಪ್ಪಿನ ವಿರಕ್ತಮಠದ ಡಾ| ಅಭಿನವ ಬಸವಲಿಂಗ ಸ್ವಾಮೀಜಿ  ಸೇರಿ ಹಲವರು ಇದ್ದರು.

ಕುಮಾರೇಶ್ವರ ಕೃಪಾಪೋಷಿತ ಪಂ. ಪಂಚಾಕ್ಷರ ಗವಾಯಿಗಳ ಸಂಗೀತ ಪಾಠಶಾಲೆ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವೀರೇಶ್ವರ ಪುಣ್ಯಾಶ್ರಮ ಮ್ಯಾನೇಜರ್ ಹೇಮರಾಜಶಾಸ್ತ್ರೀ ಹೆಡಿಗ್ಗೊಂಡ, ಸಹ ವ್ಯವಸ್ಥಾಪಕ ಶರಣಯ್ಯ ಹಿಡ್ಕಿಮಠ ನಿರ್ವಹಿಸಿದರು. ಸಿದ್ದೇಶ್ವರಶಾಸ್ತ್ರಿ ಹಿರೇಮಠ ನಿರೂಪಿಸಿದರು.

ಕುಮಾರಶ್ರೀ ಹಾಗೂ ಪದ್ಮಭೂಷಣ ಪಂ. ಪುಟ್ಟರಾಜ ಪ್ರಶಸ್ತಿ ವಿತರಣೆ: ಪ್ರವಚನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬಳುಂಡಗಿಯ ವೇ. ವೀರಯ್ಯಶಾಸ್ತ್ರಿಗಳು ಹಿರೇಮಠ ಅವರಿಗೆ, ಗಾಯನ ಕ್ಷೇತ್ರದಲ್ಲಿ ಪುಣೆಯ ಉತ್ತಮಕುಮಾರ ಲಾಥೋರ್ ಅವರಿಗೆ ಹಾಗೂ ವಾದನ ಕ್ಷೇತ್ರದಲ್ಲಿ ಬೆಂಗಳೂರಿನ ಮಲ್ಲಿಕಾರ್ಜುನ ಅನಂತಪುರ ಅವರಿಗೆ ಕುಮಾರಶ್ರೀ ಪ್ರಶಸ್ತಿ ವಿತರಿಸಲಾಯಿತು. ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬರದೂರಿನ ಡಾ| ಮಹದೇವಪ್ಪ ಹಳ್ಳಿ ಅವರಿಗೆ ಪದ್ಮಭೂಷಣ ಪುಟ್ಟರಾಜ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net