ಡಾ. ವೀರೇಂದ್ರ ಹೆಗ್ಗಡೆ ಪಟ್ಟಾಭಿಷೇಕ ವರ್ಧಂತ್ಯುತ್ಸವ ನಾಳೆ; ಚಂದ್ರನಾಥ ಸ್ವಾಮಿ ಬಸದಿ, ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜೆ

Heggade
Published on

ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ 54ನೇ ವರ್ಷದ ಪಟ್ಟಾಭಿಷೇಕ ವರ್ಧಂತ್ಯುತ್ಸವ ಅ.24ರಂದು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಕೋವಿಡ್ ನಿಯಮ ಪಾಲನೆಯೊಂದಿಗೆ ನಡೆಯಲಿದೆ.

ಬೆಳಗ್ಗೆ ಭಗವಾನ್ ಚಂದ್ರನಾಥ ಸ್ವಾಮಿ ಬಸದಿ, ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜೆ ನಡೆಯಲಿದ್ದು, ನಾಡಿನಾದ್ಯಂತ ಧಾರ್ವಿುಕ ಕ್ಷೇತ್ರಗಳ ಮುಖಂಡರು, ನಾಡಿನ ಗಣ್ಯರು, ಹೆಗ್ಗಡೆಯವರ ಅಭಿಮಾನಿಗಳು, ಕ್ಷೇತ್ರದ ಭಕ್ತರು, ಸಂಘ ಸಂಸ್ಥೆಯವರು, ಸರ್ಕಾರಿ ಅಧಿಕಾರಿಗಳು, ಊರ-ಪರವೂರ ನಾಗರಿಕರು, ಕ್ಷೇತ್ರಕ್ಕೆ ಬಂದು ಹೆಗ್ಗಡೆಯವರಿಗೆ ಅಭಿನಂದನೆ, ಗೌರವ ಸಲ್ಲಿಸಲಿದ್ದಾರೆ.

ಸಮಾಜಮುಖಿ ಸೇವೆ: ಶ್ರೀಕ್ಷೇತ್ರದಲ್ಲಿ ಪಾರಂಪರಿಕವಾಗಿ ನಡೆದುಕೊಂಡು ಬರುತ್ತಿರುವ ಚರ್ತವಿಧ ದಾನ ಪರಂಪರೆಯನ್ನು ಮುಂದುವರಿಸಿಕೊಂಡು ಕಾಲದ ಅಗತ್ಯತೆಗೆ ಅನುಗುಣವಾಗಿ ಈ ಪರಂಪರೆಗೆ ಹೊಸ ದಿಕ್ಕನ್ನು ನೀಡಿದವರು ಡಾ.ಹೆಗ್ಗಡೆಯವರು. ಶ್ರೀಕ್ಷೇತ್ರ ಧ.ಗ್ರಾ.ಯೋಜನೆ, ಸಮುದಾಯ ಅಭಿವೃದ್ಧಿ ಕಾರ್ಯಕ್ರಮ, ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮ, ಸಿರಿ ಗ್ರಾಮೋದ್ಯೋಗ ಸಂಸ್ಥೆ, ಜನಜಾಗೃತಿ ವೇದಿಕೆ, ಆರೋಗ್ಯ ಸುರಕ್ಷಾ, ನೈರ್ಮಲ್ಯ ಯೋಜನೆ, ಪರಿಸರ ಸಂಬಂಧಿ ಕಾರ್ಯಕ್ರಮಗಳು, ಪ್ರಗತಿಬಂಧು, ಸ್ವಸಹಾಯ ಸಂಘ, ರುಡ್​ಸೆಟ್ ಮೂಲಕ ಸ್ವ ಉದ್ಯೋಗ ತರಬೇತಿ ಸೇರಿ ಹಲವು ಕಾರ್ಯಕ್ರಮಗಳು ರಾಜ್ಯಾದ್ಯಂತ ನಡೆಯುತ್ತಿವೆ.

ಆಯುರ್ವೆದ, ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಕ್ಕೆ ಪ್ರೋತ್ಸಾಹ, ಶಾಂತಿವನ ಟ್ರಸ್ಟ್ ಮೂಲಕ ಶಾಲೆಗಳಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಅನುಷ್ಠಾನ, ಧಮೋತ್ಥಾನ ಟ್ರಸ್ಟ್ ಮೂಲಕ ರಾಜ್ಯ-ಹೊರರಾಜ್ಯದ ನೂರಾರು ದೇವಸ್ಥಾನ, ಬಸದಿ, ಸ್ಮಾರಕಗಳನ್ನು ಶಾಸ್ತ್ರಬದ್ಧವಾಗಿ ನವೀಕರಿಸಲಾಗಿದೆ. ಭಜನಾ ತರಬೇತಿ ಕಮ್ಮಟ, ಯಕ್ಷಗಾನ ತರಬೇತಿ, ವಸ್ತು ಸಂಗ್ರಹಾಲಯ, ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನ ಮೊದಲಾದ ಸಂಸ್ಥೆಗಳ ಮೂಲಕ ಸಂಸ್ಕೃತಿ ರಕ್ಷಣೆ ನಡೆಯುತ್ತಿವೆ. ಸಾಮೂಹಿಕ ವಿವಾಹ ಕಾರ್ಯಕ್ರಮ ಬಡವರಿಗೆ ಆಧಾರ. ಮದ್ಯವರ್ಜನ ಶಿಬಿರಗಳಿಗೆ ಸೇರಿ ಮದ್ಯಮುಕ್ತರಾದವರು ಹಲವರು. ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣಾ ತಂಡ ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿದೆ.

ಸರಳ ಸಮಾರಂಭ: 24ರಂದು ಸಂಜೆ 5 ಗಂಟೆಗೆ ಮಹೋತ್ಸವ ಸಭಾಭವನದಲ್ಲಿ ಸರಳ ಸಮಾರಂಭ ನಡೆಯಲಿದ್ದು, ತುಮಕೂರಿನ ನಿವೃತ್ತ ಜಿಲ್ಲಾಧಿಕಾರಿ ಸಿ.ಸೋಮಶೇಖರ್ ಅಭಿನಂದನಾ ಭಾಷಣ ಮಾಡಲಿದ್ದಾರೆ. ಬಳಿಕ ಹೆಗ್ಗಡೆಯವರು ಮುಂದಿನ ವರ್ಷದ ಹೊಸ ಯೋಜನೆಗಳನ್ನು ಪ್ರಕಟಿಸಲಿದ್ದಾರೆ. ಹಿರಿಯ ನೌಕರರಾದ ಶುಭಚಂದ್ರರಾಜ ಮತ್ತು ತೋಟಗಾರಿಕಾ ವಿಭಾಗದ ಮುಖ್ಯಸ್ಥ ಬಾಲಕೃಷ್ಣ ಪೂಜಾರಿ ಅವರನ್ನು ಹೆಗ್ಗಡೆಯವರು ಸನ್ಮಾನಿಸಲಿದ್ದಾರೆ.

ಧರ್ಮಸ್ಥಳ ಮಾದರಿ ಕ್ಷೇತ್ರ: 1968 ಅ.24ರಂದು ಶ್ರೀಕ್ಷೇತ್ರ ಧರ್ಮಸ್ಥಳದ 21ನೇ ಧರ್ವಧಿಕಾರಿಯಾಗಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಪಟ್ಟಾಭಿಷಿಕ್ತರಾಗಿದ್ದರು. ಬಳಿಕ ಅವರು ಕ್ಷೇತ್ರದ ಹಾಗೂ ಸಮಾಜದ ಸರ್ವತೋಮುಖ ಪ್ರಗತಿಗೆ ಅನೇಕ ಪರಿವರ್ತನೆಗಳನ್ನು, ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದು ಇಂದು ಶ್ರೀಕ್ಷೇತ್ರ ಧರ್ಮಸ್ಥಳ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾದರಿ ಕ್ಷೇತ್ರವಾಗಿ ಜನಮನ್ನಣೆಗೆ ಪಾತ್ರವಾಗಿದೆ. ಸ್ವಚ್ಛ ಧಾರ್ವಿುಕ ಕ್ಷೇತ್ರ ಎಂಬ ಹಿರಿಮೆಗೂ ಪಾತ್ರವಾಗಿರುವ ಶ್ರೀಕ್ಷೇತ್ರ ಧರ್ಮಸ್ಥಳದಿಂದ ನಡೆಯುತ್ತಿರುವ ಎಲ್ಲ ಕ್ರಾಂತಿಕಾರಕ ಕಾರ್ಯಕ್ರಮಗಳು ಅಪಾರ ಜನಮನ್ನಣೆ ಹಾಗೂ ಹಿರಿಮೆಗೆ ಪಾತ್ರವಾಗಿದ್ದು, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಪುರಸ್ಕಾರಗಳೊಂದಿಗೆ ಡಾ.ಹೆಗ್ಗಡೆಯವರಿಗೆ ಪದ್ಮವಿಭೂಷಣ ಗೌರವವೂ ಪ್ರಾಪ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net