

ದೇಶಾಂತರಪ್ರಾಪ್ತಿರೂಪಾವಾಹನಂ ವ್ಯಾಪಕಸ್ಯ ಮೇ | ನ ಸಂಭವೇತ್ ತಥಾಪಿ ಸ್ಯಾತ್ ಕರ್ತರ್ಭಾವನಯಾ ಪರಮ್ || ಲಿಂಗಾದ್ಯಭಿಮತೇ ದೇಶೇ ಯದಭಿವ್ಯಂಜನಂ ಮಮ | ತದೇವಾವಾಹನಮಿತಿ ಭಾವಯಸ್ವ ಮಹಾಮತೇ ||
ಆಕಾಶವು ಎಲ್ಲ ಕಡೆಯಲ್ಲೂ ಯಾವಾಗಲೂ ಇರುವುದರಿಂದ ಅದನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ತರುವುದಾಗಲಿ ಇನ್ನೊಂದು ಕಡೆಗೆ ಒಯ್ಯುವುದಾಗಲಿ ಸಾಧ್ಯವಾಗುವುದಿಲ್ಲ. ಇದಲ್ಲದೆ ಎಲ್ಲಿ ನಾವು ತರಬೇಕೆಂದು ಬಯಸುತ್ತೇವೆಯೋ ಅಲ್ಲಿ ಅದು ಮೊದಲೇ ಇರುವುದರಿಂದ ಅದನ್ನು ತರುವ ಅವಶ್ಯಕತೆಯೂ ಇರುವುದಿಲ್ಲ. ಇದರಂತೆ ಪರಶಿವನು ಕೂಡ ಸರ್ವವ್ಯಾಪಕನಾಗಿ, ಸರ್ವಾಂತ ರ್ಯಾಮಿ ಆಗಿರುವುದರಿಂದ ಭಗವಂತನನ್ನು ಅವನ ದೇಶಾಂತರ ರೂಪವಾದ ಆವಾಹನೆಯು ಸಾಧ್ಯವಾಗುವುದಿಲ್ಲ. ಆದರೆ ಸಾಧಕನಿಗೆ ಭಾವನಾತ್ಮಕವಾಗಿ ಸಮೀಪಿಸಿಕೊಳ್ಳುವುದಕ್ಕಾಗಿ ಆವಾಹನೆ ಮಾಡಲಾಗುತ್ತದೆ. ಇದಲ್ಲದೆ ಎಲ್ಲ ಕಡೆಗಳಲ್ಲಿ ಇರುವಂತೆ ಲಿಂಗ, ಮೂರ್ತಿ ಮುಂತಾದವುಗಳಲ್ಲಿ ಕೂಡ ಪರಶಿವನ ಶಕ್ತಿಯು ಮೊದಲೇ ಇರುತ್ತದೆ. ಆದರೆ ಅದು ಅವ್ಯಕ್ತವಾಗಿರುವುದರಿಂದ ಅದನ್ನು ಅಭಿವ್ಯಕ್ತಗೊಳಿಸುವ ಧಾರ್ವಿುಕ ಕ್ರಿಯೆಯನ್ನು ಆವಾಹನೆ ಎಂದು ತಿಳಿಯಬೇಕು.
| ಮುಕುಟಾಗಮ (5. 3-4) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.