

ಆಶೌಚೇ ವಿದ್ಯಮಾನೇಪಿ ನಾಂತರಾಯೋs—ರ್ಚನಸ್ಯ ತು |
ಮದರ್ಚಾ ವಿಘ್ನವಿಚ್ಛೇತ್ರಿ ದೀಕ್ಷಾ ಸಾಮರ್ಥ್ಯಯೋಗತಃ ||
ಅಶೌಚವಿದ್ದಾಗಲೂ ಸಹ ಇಷ್ಟಲಿಂಗದ ಪೂಜೆಗೆ ಯಾವುದೇ ವಿಘ್ನವುಂಟಾಗುವುದಿಲ್ಲ, ಏಕೆಂದರೆ ದೀಕ್ಷೆಯ ಸಾಮರ್ಥ್ಯದ ಯೋಗದಿಂದ ಶಿವ ಪೂಜೆಯು ಎಲ್ಲ ಬಗೆಯ ವಿಘ್ನಗಳನ್ನು ನಾಶಪಡಿಸುತ್ತದೆ. ಗುರುವು ಇಷ್ಟಲಿಂಗದ ದೀಕ್ಷೆಯನ್ನು ನೀಡುವಾಗ ಕೈಯಲ್ಲಿ ಇಷ್ಟಲಿಂಗವನ್ನು ಅನುಗ್ರಹಿಸಿ ಜನ್ಮದಾರಭ್ಯ ಮರಣ ಪರ್ಯಂತ ಈ ಇಷ್ಟ ಲಿಂಗವನ್ನು ದೇಹದ ಮೇಲೆ ಧರಿಸಿಕೊಂಡು ಪ್ರತಿನಿತ್ಯ ತಪ್ಪದೇ ಪೂಜೆ ಮಾಡಬೇಕು ಎಂಬುದಾಗಿ ಉಪದೇಶ ಮಾಡಿರುತ್ತಾನೆ.
ಆದ್ದರಿಂದ ಯಾವಾಗಲೂ ಇಷ್ಟಲಿಂಗವನ್ನು ದೇಹದ ಮೇಲೆ ಧರಿಸಿಕೊಂಡು ಪ್ರತಿದಿನ ತಪ್ಪದೆ ಪೂಜೆ ಮಾಡುವುದು ಈ ಧರ್ಮದ ಪ್ರತಿಯೊಬ್ಬ ವ್ಯಕ್ತಿಯ ಆದ್ಯ ಕರ್ತವ್ಯವಾಗಿರುತ್ತದೆ. ಇದಲ್ಲದೆ ಲಿಂಗ ಪೂಜೆಯು ಮಹಾವ್ರತವಾಗಿದೆ. ಇದನ್ನು ಯಾವುದೇ ಕಾರಣದಿಂದ ಮಧ್ಯದಲ್ಲಿ ನಿಲ್ಲಿಸುವಂತಿರುವುದಿಲ್ಲ. ಆದ್ದರಿಂದ ಈ ವ್ರತಾಚರಣೆಗೆ ಅಶೌಚ ಮುಂತಾದ ಯಾವುದೇ ದೋಷಗಳು ಪ್ರತಿಬಂದಕವಾಗುವುದಿಲ್ಲ.
| ಮುಕುಟಾಗಮ (ಚರ್ಯಾಪಾದ)--10. 8/ ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.