

ಮಾಹೇಶ್ವರರಲ್ಲಿ ಅವರವರು ಮಾಡುವ ವಿಶೇಷವಾದ ತಪಸ್ಸಿನಿಂದ ಮತ್ತು ಅಧ್ಯಯನಾದಿಗಳ ಮೂಲಕ ಅವರು ಸಂಪಾದನೆ ಮಾಡಿದ ಶ್ರೇಷ್ಠವಾದ ವಿದ್ಯೆಯಿಂದ ಉತ್ತಮವಾದ ಆಸನಕ್ಕೆ ಅರ್ಹರಾಗುತ್ತಾರೆ. ಆದರೆ ಪೂರ್ವಜರ ವಾರ್ಷಿಕ ಆರಾಧನೆಯ ಸಂದರ್ಭದಲ್ಲಿ ಮಾಹೇಶ್ವರರ ಪೂಜೆಗೆ ಅವರನ್ನು ಆಹ್ವಾನಿಸಿದಾಗ ಅವರಲ್ಲಿ ಯಾವುದೇ ತೆರನಾದ ಭೇದವನ್ನು ನೋಡುವುದು ಹಾಗೂ ದಾನ, ಭೋಜನ ಮತ್ತು ಪೂಜೆಯಲ್ಲಿ ತಾರತಮ್ಯ ಮಾಡುವುದು ಒಳ್ಳೆಯದಲ್ಲ. ಅಂದರೆ ದಾನ, ಭೋಜನ ಮತ್ತು ಪೂಜಾ ಸಂದರ್ಭಗಳಲ್ಲಿ ಮಾಹೇಶ್ವರರಲ್ಲಿ ಇವನು ವಿದ್ವಾಂಸ, ಇವನು ಅವಿದ್ವಾಂಸ ಎಂದು ಹಾಗೂ ಇವನು ತಪಸ್ವಿ, ಇವನು ಅತಪಸ್ವಿ ಎಂದು ತಾರತಮ್ಯ ಮಾಡದೆ ಎಲ್ಲರಿಗೂ ಸಮಾನವಾದ ಆಸನವನ್ನು ನೀಡಬೇಕು. ಯಾರೇ ಆಗಲಿ ಅವರವರು ಮಾಡಿದ ಉತ್ತಮ ಸಾಧನೆಯಿಂದ ಉತ್ತಮವಾದ ಫಲವನ್ನು ಅವಶ್ಯವಾಗಿ ಪಡೆದುಕೊಳ್ಳುತ್ತಾರೆ. ಆದರೆ ದಾನಾದಿಗಳನ್ನು ಮಾಡುವಾಗ ಜಂಗಮರಲ್ಲಿ ಯಾವುದೇ ಭೇದವನ್ನು ದೃಷ್ಡಿಯಲ್ಲಿ ಇರಿಸಿಕೊಳ್ಳುವುದು ಒಳ್ಳೆಯದಲ್ಲ.
| ಮುಕುಟಾಗಮ (ಚರ್ಯಾಪಾದ) -9. 9)/ ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.