

ಉತ್ಕ್ರಾಂತಾಸುಂ ಪರೀಕ್ಷ್ಯಾಥ ಕರ್ತಾ ಸಂಶುದ್ಧಚೇತನಃ |
ಸ್ನಾತ್ವಾ ಧೃತತ್ರಿಪುಂಡ್ರಶ್ಚ ರುದ್ರಾಕ್ಷಸಮಲಂಕೃತಃ ||
ಕರ್ವಧಿಕಾರಸಿದ್ಧ್ಯರ್ಥ ಕೃತ್ವಾ ಗಣನಮಸ್ಕೃತಿಮ್ |
ತದಭ್ಯನುಜ್ಞಾಂ ಗೃಹ್ಣೀಯಾದ್ ಯಥಾಶಕ್ತಿಪ್ರದಾನತಃ ||
ಉತ್ಕ್ರಾಂತಿಯನ್ನು (ಪ್ರಾಣ ಬಿಡುವುದನ್ನು) ನೋಡಿದ ನಂತರ ಅಂತ್ಯಸಂಸ್ಕಾರ ವನ್ನು ಮಾಡುವ ವ್ಯಕ್ತಿಯ ಕರ್ತವ್ಯವೇನು? ಎಂಬ ರುದ್ರನ ಪ್ರಶ್ನೆಗೆ ಉತ್ತರಿಸುತ್ತ ಶಿವನು ದೇಹದಲ್ಲಿ ಪ್ರಾಣವು ಮೇಲ್ನೋಟಕ್ಕೆ ಹೋದಂತೆ ಕಂಡರು ಒಮ್ಮೊಮ್ಮೆ ಇನ್ನೂ ಇರುವ ಸಾಧ್ಯತೆ ಇರುವುದರಿಂದ ಮೊದಲು ಪ್ರಾಣ ಹೋಗಿರುವುದನ್ನು ಸರಿಯಾಗಿ ಪರೀಕ್ಷಿಸಬೇಕು. ನಂತರ ಅಂತ್ಯಸಂಸ್ಕಾರ ಮಾಡುವ ವ್ಯಕ್ತಿಯು ಶುದ್ಧವಾದ ಮನಸ್ಸಿನಿಂದ ಸ್ನಾನ ಮಾಡಿ, ತ್ರಿಪುಂಡ್ರ ಮತ್ತು ರುದ್ರಾಕ್ಷ ಮಾಲೆ ಧರಿಸಿಕೊಂಡು, (ಮೃತ ವ್ಯಕ್ತಿಯ) ಅಂತಿಮ ಕರ್ಮಗಳ ಅಧಿಕಾರ ಸಿದ್ಧಿಗಾಗಿ ಶಿವಗಣಗಳಿಗೆ (ಜಂಗಮರಿಗೆ) ನಮಸ್ಕರಿಸಿ, ತನ್ನ ಶಕ್ತ್ಯಾನುಸಾರ ದಾನಮಾಡಿ ಮೊದಲು ಅವರ ಅನುಮತಿಯನ್ನು ಪಡೆಯಬೇಕು ಎಂಬುದಾಗಿ ಹೇಳುತ್ತಾನೆ. ಅಂತ್ಯ ವಿಧಿಯನ್ನು ನೆರವೇರಿಸುವವನು ತನ್ನವರನ್ನು ಕಳೆದುಕೊಂಡು ತೀವ್ರವಾದ ದುಃಖದಲ್ಲಿ ಇರುವುದರಿಂದ ಅವರ ಅಂತ್ಯವಿಧಿಯನ್ನು ನೆರವೇರಿಸಲು ಧೈರ್ಯ ಮತ್ತು ಶಕ್ತಿ ಬರುವ ಸಲುವಾಗಿ ಇಲ್ಲಿ ಮೊದಲು ಶಿವಗಣರಿಂದ ಅನುಜ್ಞೆ ಮತ್ತು ಅನುಗ್ರಹವನ್ನು ಪಡೆದುಕೊಳ್ಳಲು ತಿಳಿಸಲಾಗಿದೆ.
| ಮುಕುಟಾಗಮ (ಚರ್ಯಾಪಾದ)3. 2-3/ ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.