

ಮನಸ್ಸಿನಲ್ಲಿ ಮಹಾಲಿಂಗವು, ಶ್ರೋತ್ರ(ಕಿವಿ)ರೂಪ ಅಂಗದಲ್ಲಿ ಪ್ರಸಾದಲಿಂಗವು, ಚರ್ಮರೂಪ ಅಂಗದಲ್ಲಿ ಚರಲಿಂಗವು ದೃಷ್ಟಿರೂಪ ಅಂಗದಲ್ಲಿ ಶಿವಲಿಂಗವು, ಜಿಹ್ವಾರೂಪ ಅಂಗದಲ್ಲಿ ಗುರುಲಿಂಗವು ಮತ್ತು ನಾಸಿಕರೂಪ ಅಂಗದಲ್ಲಿ ಆಚಾರಲಿಂಗವು ಸದಾ ಪ್ರತಿಷ್ಠಿತವಾಗಿರುತ್ತವೆ. ಹೀಗೆ ಅಂತರಿಂದ್ರಿಯವಾದ ಮನಸ್ಸನ್ನೇ ಮೊದಲ್ಗೊಂಡು ಎಲ್ಲ ಜ್ಞಾನೇಂದ್ರಿಯಗಳಲ್ಲೂ ಒಂದೊಂದು ಹೆಸರಿನ ಲಿಂಗಗಳು ನೆಲೆಗೊಂಡಿರುತ್ತವೆ. ಮನುಷ್ಯನು ತನ್ನ ಜ್ಞಾನೇಂದ್ರಿಯಗಳ ಮತ್ತು ಮನಸ್ಸಿನ ಮೂಲಕ ಅನುಭವಿಸುವ ಶಬ್ದ ಸ್ಪರ್ಶಾದಿ ಎಲ್ಲ ವಿಷಯಗಳು ಮನುಷ್ಯನ ಮನಸ್ಸಿನಲ್ಲಿ ವಾಸನೆಯನ್ನು ಬಿಡುತ್ತವೆ. ಈ ವಿಷಯಗಳ ಈ ವಾಸನೆಯಿಂದ ಮುಕ್ತನಾಗಬೇಕಾದರೆ ಅವುಗಳನ್ನು ಅನುಭವಿಸುವ ಮೊದಲು ಆಯಾ ಇಂದ್ರಿಯಗಳಲ್ಲಿ ನೆಲೆಗೊಂಡ ವಿಶಿಷ್ಟವಾದ ಲಿಂಗಗಳಿಗೆ ಸಮರ್ಪಿಸಿ ಅವುಗಳ ಪ್ರಸಾದ ರೂಪದಲ್ಲಿ ಸಾಕ್ಷಿ ಭಾವದಿಂದ ಅವುಗಳನ್ನು ಅನುಭವಿಸುವ ಮೂಲಕ ಅವುಗಳ ವಾಸನೆ ಜನಿಸದಂತೆ ನೋಡಿಕೊಳ್ಳಬೇಕಾಗುತ್ತದೆ.
| ಮುಕುಟಾಗಮ (ಚರ್ಯಾಪಾದ)2. 27-28/ ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.