

ಭಸ್ಮ-ರುದ್ರಾಕ್ಷಗಳನ್ನು ಧರಿಸಿರುವ ಯಾವುದೇ ಪ್ರಾಣಿಯು ಒಂದು ವೇಳೆ ಸತ್ತರೆ, ಅದೂ ಕೂಡ ರುದ್ರತ್ವ ಪದವಿಯನ್ನು ಪಡೆಯುತ್ತದೆ. ಇನ್ನು ಜ್ಞಾನಿಯಾದ ಮನುಷ್ಯರ ವಿಷಯದಲ್ಲಿ ಮತ್ತೇನು ಹೇಳಬೇಕು?. ವಸ್ತುತಃ ಧಾರ್ವಿುಕವಾದ ಯಾವುದೇ ಧಾರಣೆ ಅಥವಾ ಕಾರ್ಯ ಇವುಗಳನ್ನು ಪ್ರಜ್ಞೆ ಮತ್ತು ಸದ್ಭಾವದೊಂದಿಗೆ ನಿರ್ವಹಿಸಿದಾಗ ಮಾತ್ರ ಅದರ ಪರಿಪೂರ್ಣ ಫಲವು ಪ್ರಾಪ್ತವಾಗುತ್ತದೆ. ಪ್ರಾಣಿಗಳಲ್ಲಿ ಪ್ರಜ್ಞೆ ಹಾಗೂ ಸದ್ಭಾವ ಎರಡೂ ಇರುವುದಿಲ್ಲ ಆದರೂ ಅವುಗಳಿಗೆ ಅದರ ಫಲ ಲಭಿಸುತ್ತದೆ ಎಂದ ಮೇಲೆ ಜ್ಞಾನ ಹಾಗೂ ಪ್ರಜ್ಞೆಗಳನ್ನು ಹೊಂದಿದ ಮನುಷ್ಯನಿಗೆ ನಿಶ್ಚಿತವಾಗಿ ಲಭಿಸುತ್ತದೆ ಎಂದರ್ಥ. ನೀರು ತುಂಬಿದ ಪಾತ್ರೆಯನ್ನು ಒಲೆಯ ಮೇಲಿಟ್ಟು ಕಾಯಿಸಿದಾಗ ಒಳಗಿನ ನೀರು ಸಹಜವಾಗಿ ಬಿಸಿಯಾಗುವಂತೆ ಜೀವಾತ್ಮನಿಂದ ತುಂಬಿಕೊಂಡಿರುವ ದೇಹಕ್ಕೆ ಭಸ್ಮ- ರುದ್ರಾಕ್ಷಾದಿಗಳನ್ನು ಧರಿಸಿಕೊಳ್ಳುವುದರಿಂದ ಒಳಗಿರುವ ಜೀವಾತ್ಮನು ಸಹಜವಾಗಿ ಸದ್ಗತಿಯನ್ನು ಹೊಂದುವನು.
| ಮುಕುಟಾಗಮ (ಚರ್ಯಾಪಾದ) 2. 4/ ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.