

ಶಿವಭಕ್ತರ ಮೃತಶರೀರಗಳಿಗೆ ‘ಸಮಾಧಿ’ ವಿಧಿಯನ್ನು ನೆರವೇರಿಸಬೇಕೆಂದು ಶಿವನೇ ಹೇಳಿರುವನು. ಪ್ರಪಂಚದಲ್ಲಿ ಶಿವನು ಹೇಳಿದ ಈ ಅಂತ್ಯ ಸಂಸ್ಕಾರದ ವಿಧಿಗಳ ವಿಷಯದಲ್ಲಿ ಯಾರಿಗೆ ಸುತರಾಂ ನಂಬಿಕೆಯಿರುವುದಿಲ್ಲವೋ, ಅಂಥವರು ಅವಶ್ಯವಾಗಿಯೂ ನರಕವೆಂಬ ಸಮುದ್ರದಿಂದ ಹೊರಬರಲಾರರು. ಸಾಮಾನ್ಯವಾಗಿ ಮನುಷ್ಯನಿಗೆ ಗೊತ್ತಿರುವುದಕ್ಕಿಂತಗೊತ್ತಿಲ್ಲದೇ ಇರುವ ಸಂಗತಿಗಳೇ ಅತ್ಯಧಿಕವಾಗಿರುತ್ತವೆ. ಆದ್ದರಿಂದ ಗೊತ್ತಿರುವ ಸಂಗತಿಗಳ ಬಗ್ಗೆ ಅಭಿಮಾನ ತಾಳಿ ದುರಹಂಕಾರಿಯಾಗದೆ ಗೊತ್ತಿಲ್ಲದೆ ಇರುವ ಸಂಗತಿಗಳನ್ನು ಶಾಸ್ತ್ರ ಗ್ರಂಥಗಳ ಅಧ್ಯಯನದಿಂದ ತಿಳಿದು ಕೊಂಡು ಅವುಗಳಲ್ಲಿ ವಿಶ್ವಾಸವನ್ನು ಇರಿಸಿಕೊಂಡು ಮುಂದುವರಿಯಬೇಕು.ತಸ್ಮಾಚ್ಛಾಸ್ತ್ರಂ ಪ್ರಮಾಣಂ ತೇ ಕಾರ್ಯಾಕಾರ್ಯವ್ಯವಸ್ಥಿತೌ ಎಂಬ ಭಗವದ್ಗೀತೆಯ ಉಕ್ತಿಯಂತೆ ಯಾವುದನ್ನು ಮಾಡಬೇಕು ಮತ್ತು ಯಾವುದನ್ನು ಮಾಡಬಾರದು ಎಂಬ ವಿಷಯದಲ್ಲಿ ಶಾಸ್ತ್ರ ಗ್ರಂಥಗಳು ಆಧಾರ ಭೂತಗಳು. ಶಾಸ್ತ್ರಗಳಲ್ಲಿ ಹೇಳಲಾದ ವಿಧಾನವನ್ನು ಅನುಸರಿಸಿ ಪ್ರತಿಯೊಂದು ಕಾರ್ಯವನ್ನು ಮಾಡಬೇಕು.
| ಮುಕುಟಾಗಮ (ಚರ್ಯಾಪಾದ) 1. 24/ ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.