

ಪಂಚಾನಾಂ ಹೃದಯಾದೀನಾಂ ನಾನಾವರ್ಣಜುಷಾಮಪಿ | ಮದ್ವರ್ಣತಾನುಸಂಧಾನಮಮೃತೀಕರಣಂ ಹಿತತ್||
ಹೃದಯವೇ ಮೊದಲಾದ ಶರೀರದಲ್ಲಿರುವ ಐದು ಸ್ಥಾನಗಳ ನ್ಯಾಸದೊಂದಿಗೆ ಪಂಚಾಕ್ಷರೀ ಮಂತ್ರದ ಬೇರೆ ಬೇರೆ ವರ್ಣಗಳನ್ನು ಸೇರಿಸಿ, ಆ ಎಲ್ಲ ಐದು ಸ್ಥಾನಗಳಲ್ಲಿ ಶಿವನ ಸ್ವರೂಪದ ಭಾವನೆಯನ್ನು ಕಲ್ಪಿಸಿಕೊಳ್ಳುವುದೇ ಅಮೃತೀಕರಣವಾಗಿದೆ. ಶರೀರದ ಐದು ಸ್ಥಾನಗಳಾವುವೆಂದರೆ ಹೃದಯ, ಶಿರಸ್ಸು, ಶಿಖೆ, ಕವಚ ಮತ್ತು ನೇತ್ರ. ಶಿವನು ಜನನ ಮರಣ ರಹಿತನಾಗಿರುವುದರಿಂದ ಅವನನ್ನು ಅಮೃತ ಸ್ವರೂಪನೆಂದು ಕರೆಯಲಾಗುತ್ತದೆ. ‘ತಸ್ಯ ವಾಚಕಃ ಪ್ರಣವಃ’ ಎಂಬ ಪತಂಜಲಿ ಮಹರ್ಷಿಗಳ ಉಕ್ತಿಯಂತೆ ಮಂತ್ರವು ಪರಮಾತ್ಮನ ವಿಶಿಷ್ಟವಾದ ನಾಮವೇ ಆಗಿದೆ. ಇಂತಹ ಮಂತ್ರದ ಅಕ್ಷರಗಳನ್ನು ವಿಶಿಷ್ಟವಾದ ವಿಧಿಯ ಮೂಲಕ ನಮ್ಮ ದೇಹದ ಅವಯವಗಳಲ್ಲಿ ನ್ಯಾಸದ ಮೂಲಕ ಅಳವಡಿಸಿಕೊಳ್ಳುವುದರಿಂದ ಆ ಮಂತ್ರದ ಮೂಲಕ ಶಿವನೇ ನಮ್ಮಲ್ಲಿ ನಿವಾಸ ಮಾಡಿದ್ದಾನೆ ಎಂಬ ಭಾವವು ನಮ್ಮಲ್ಲಿ ಜಾಗೃತವಾಗುತ್ತದೆ. ಅಮೃತ ಸ್ವರೂಪನಾದ ಶಿವನೇ ಮಂತ್ರದ ಮೂಲಕ ನಮ್ಮಲ್ಲಿ ಸ್ಥಾಪನೆಗೊಳ್ಳುವುದರಿಂದ ಇದನ್ನು ಅಮೃತೀಕರಣ ಎಂದು ಕರೆಯಲಾಗಿದೆ.
| ಮುಕುಟಾಗಮ ( 5. 8) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.