

ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಸಿಸಿಬಿಯಿಂದ ಅರೆಸ್ಟ್ ಆಗಿರುವ ವೀರೇನ್ ಖನ್ನಾ ತಂದೆ ಶ್ರೀರಾಮ್ ಖನ್ನಾ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಮಗನ ಪಾರ್ಟಿಯಲ್ಲಿ ಯಾವುದೇ ಡ್ರಗ್ಸ್ ಇರುತ್ತಿರಲಿಲ್ಲ ಎಂದು ಹೇಳಿದ್ದಾರೆ.
ನಾನು ದೆಹಲಿಯ ಕಾಲೇಜ್ವೊಂದರಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದೆ. ನನ್ನ ಪುತ್ರ ಬೆಂಗಳೂರಿನ ಆರ್. ವಿ.ಕಾಲೇಜಿನಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿದ್ದಾನೆ. ಓದು ಮುಗಿಯುತ್ತಿದ್ದಂತೆ ಈವೆಂಟ್ ಮ್ಯಾನೇಜ್ಮೆಂಟ್ ಬಿಜಿನೆಸ್ ಮಾಡುತ್ತೇನೆ ಎಂದು ಹೇಳಿದ್ದ. ಅದರಂತೆ 2007ರಲ್ಲಿ ಬಿಜಿನೆಸ್ ಶುರು ಮಾಡಿದ. ಅವನು ಮಾಡುತ್ತಿದ್ದ ಈವೆಂಟ್ಗಳೆಲ್ಲ ಅನುಮತಿ ಪಡೆದಂತವೇ ಆಗಿದ್ದವು. ಸ್ಥಳೀಯ ಪೊಲೀಸರ ಅನುಮತಿಯ ಮೇರೆಗೇ ಪಾರ್ಟಿಗಳು ನಡೆಯುತ್ತಿದ್ದವು. ಆ ಪಾರ್ಟಿಗಯಲ್ಲಿ ಲಿಕ್ಕರ್ ಬಳಸಲು ಲೈಸೆನ್ಸ್ ಕೂಡ ಇತ್ತು. ಅದಕ್ಕೆ ತಕ್ಕಂತೆ ಎಲ್ಲ ಮಾಹಿತಿಯನ್ನೂ ನಾನು ನೀಡಲು ಸಿದ್ಧ ಎಂದು ಹೇಳಿದ್ದಾರೆ.
ನನ್ನ ಮಗ ಹೆಚ್ಚಾಗಿ ತಾಜ್ ಹೋಟೆಲ್ಗಳಲ್ಲಿ ಪಾರ್ಟಿ ಮಾಡುತ್ತಿದ್ದ. ಕೆಲವು ರೆಸ್ಟೋರೆಂಟ್ಗಳಲ್ಲೂ ಪಾರ್ಟಿ ಆಯೋಜಿಸುತ್ತಿದ್ದ. ಆದರೆ ಅವನು ಮಾಡುತ್ತಿದ್ದ ಪಾರ್ಟಿಗಳಲ್ಲಿ ಡ್ರಗ್ಸ್, ಗಾಂಜಾ ಇರುತ್ತಿರಲಿಲ್ಲ. ನನ್ನ ಮನೆಯಲ್ಲೂ ಸಿಸಿಟಿವಿ ಅಳವಡಿಸಿದ್ದೇನೆ ಎಂದು ಶ್ರೀರಾಮ್ ಖನ್ನಾ ತಿಳಿಸಿದ್ದಾರೆ. ಇದನ್ನೂ ಓದಿ: ದಂಗು ಬಡಿಸುತ್ತೆ ಜಮೀರ್ ಆಪ್ತನ ಮತ್ತೊಂದು ರಹಸ್ಯ! ಇದು ಕ್ಯಾಸಿನೋ ‘ಶೇಖ್’ನ ದೌಲತ್ತು…
ಪೊಲೀಸರು ಬಂದಾಗ ಯಾವುದೇ ಸರ್ಚ್ ವಾರಂಟ್ ತಂದಿರಲಿಲ್ಲ. ಎರಡನೇ ಬಾರಿ ಬರುವಾಗ ವಾರಂಟ್ ತಂದಿದ್ದರು. ವೀರೇನ್ ಖನ್ನಾ ಮಾಡ್ತಿದ್ದ ಪಾರ್ಟಿಯಲ್ಲಿ ಲಿಕ್ಕರ್ ಮಾತ್ರ ಇರುತ್ತಿತ್ತು..ಹಾಗೇ ಅದರಲ್ಲಿ ಪೊಲೀಸರು ಭಾಗವಹಿಸುತ್ತಿದ್ದರು. ಅದರ ಬಗ್ಗೆ ದಾಖಲೆಗಳೂ ನನ್ನಲ್ಲಿವೆ. ನನ್ನ ಮಗ ಮುಗ್ಧ. ಆದರೂ 9 ದಿನಗಳಿಂದಲೂ ಸಿಸಿಬಿ ವಶದಲ್ಲಿ ಇಟ್ಟುಕೊಳ್ಳಲು ಕಾರಣವೇನು ಎಂಬುದು ಗೊತ್ತಾಗುತ್ತಿಲ್ಲ. ಆತನ ವಿರುದ್ಧ ಯಾವುದೇ ದಾಖಲೆಗಳೂ ಇಲ್ಲ. ಪೊಲೀಸರು ಒಂದು ಕಡೆಯಿಂದ ಮಾತ್ರ ತನಿಖೆ ಮಾಡುತ್ತಿದ್ದಾರೆ ಎಂದೂ ಆರೋಪಿಸಿದ್ದಾರೆ.
ಪೊಲೀಸರದು ತಪ್ಪು ಎಂದು ನಾನು ಹೇಳುತ್ತಿಲ್ಲ. ಅವರ ತನಿಖೆಗೆ ಸಹಕರಿಸಲು ನಾವು ಸಿದ್ಧರಿದ್ದೇವೆ. ನನ್ನ ಪುತ್ರನ ವಿರುದ್ಧ ಸಾಕ್ಷಿಗಳನ್ನು ಸಿದ್ಧಪಡಿಸುತ್ತಿದ್ದಾರೆ. ನಮಗೆ ಗೊತ್ತಿರುವಷ್ಟೂ ಮಾಹಿತಿಯನ್ನು ಅವರಿಗೆ ನೀಡುತ್ತೇವೆ. ವಿಚಾರಣೆಗೆ ಕರೆಸಲಿ. ಮಗನ ಪಾರ್ಟಿಯಲ್ಲಿ ಡ್ರಗ್ಸ್ ಇದ್ದಿದ್ದೇ ಆದರೆ ಅವನ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಸವಾಲು ಹಾಕಿದ್ದಾರೆ. ಇದನ್ನೂ ಓದಿ: ವಿಡಿಯೋ ಸಾಕ್ಷಿಗಳನ್ನು ಸಿಸಿಬಿಗೆ ಕೊಟ್ಟ ಪ್ರಶಾಂತ್ ಸಂಬರಗಿ: ಆದ್ರೆ ಅಧಿಕಾರಿಗಳು ಹೇಳಿದ್ದೇನು?
ಮನೆಯಲ್ಲಿ ಪೊಲೀಸ್ ಡ್ರೆಸ್ ಸಿಕ್ಕಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಪಾರ್ಟಿಗಳಲ್ಲಿ ಫ್ಯಾನ್ಸಿ ಡ್ರೆಸ್ ಪಾರ್ಟಿಗಳನ್ನೂ ಮಾಡುತ್ತಿದ್ದೆವು. ಅದು ತಪ್ಪಾ? ಸಿನಿಮಾ ನಟರೂ ಕೂಡ ಸಿನಿಮಾಗಳಲ್ಲಿ ಪೊಲೀಸ್ ಡ್ರೆಸ್ ಹಾಕುತ್ತಾರೆ. ಅವರ ಮೇಲೆ ಕ್ರಮ ಕೈಗೊಳ್ಳುತ್ತಾರಾ? ಇನ್ನು 10 ದೇಶಗಳ ಕರೆನ್ಸಿಗಳು ಸಿಕ್ಕಿವೆ. ಅವಕ್ಕೆಲ್ಲ ಇಲ್ಲಿ ಬೆಲೆ ಇಲ್ಲ. ಡ್ರಗ್ ಪೆಡ್ಲರ್ಗೂ, ವೀರೇನ್ಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು.
ಪೊಲೀಸರು ರವಿಶಂಕರ್ ಬಾಯಲ್ಲಿ ಬಲವಂತದಿಂದ ವೀರೇನ್ ಹೆಸರು ಹೇಳಿಸಿದ್ದಾರೆ. ವೀರೇನ್ ಪಾರ್ಟಿಯಲ್ಲಿ ಭಾಗಿಯಾದವರ ಬಳಿ ಒಂದು ಗ್ರಾಂ ಡ್ರಗ್ಸ್ ಕೂಡ ಸಿಕ್ಕಲ್ಲ. ಡ್ರಗ್ ದಂಧೆ ಮಟ್ಟ ಹಾಕಬೇಕು ಎಂದು ಸಿಎಂ ಸೂಚನೆ ಕೊಟ್ಟಿದ್ದಾರೆ. ಅದರ ಪ್ರಕಾರ ಅಮಾಯಕರನ್ನು ಕರೆದುಕೊಂಡು ಬಂದು, ವಿಚಾರಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.(ಏಜೆನ್ಸೀಸ್)