ವೇದೋಪಾಸನೆ ಮತ್ತು ಭಗವತ್ಸಾಕ್ಷಾತ್ಕಾರ

Sudina 3 Veda Darshana 1
Published on

ಸಿಷ್ಠರ ಅನೇಕ ಸೂಕ್ತಗಳು ಸಾಂಕೇತಿಕ ಭಾಷೆಯಲ್ಲಿ ಆಧ್ಯಾತ್ಮಿಕ ಅರ್ಥ ತುಂಬಿದ ಅನುಭವಗಳನ್ನು ಹೇಳುತ್ತವೆ. ವರುಣನ ಸ್ವರೂಪ, ಸ್ಥಾನ, ಕರ್ಮಗಳನ್ನು ಹೀಗೆ ಮಾರ್ವಿುಕವಾಗಿ ತಿಳಿಯಬೇಕು. ಇದನ್ನೊಂದನ್ನೂ ಅರಿಯದ ಪಾಶ್ಚಾತ್ಯರು, ದುರುದ್ದೇಶ ಪ್ರೇರಿತರೂ ಆಗಿ, ಮನಸ್ಸಿಗೆ ಬಂದಂತೆ ಬರೆದಿರುವುದೆಲ್ಲ ಅವರ ಯೋಗ್ಯತೆಗೆ ಸಾಕ್ಷಿ ಮಾತ್ರ. ವರುಣದೇವತೆಯ ಪ್ರಭಾವ ವೇದಕಾಲದಲ್ಲಿಯೇ ಕಮ್ಮಿಯಾಗುತ್ತ ಹೋಯಿತಂತೆ, ಅವರ ಪ್ರಕಾರ!

(ಈ ಮಾತಿಗೆ ನಮ್ಮಲ್ಲಿ ಅರ್ಥವೇ ಇಲ್ಲ! ಪ್ರತಿಯೊಂದು ದೇವತೆಗೂ ಗುಡಿಗೋಪುರ ಕಟ್ಟದಿದ್ದ ಮಾತ್ರಕ್ಕೆ, ಆ ದೇವತೆಗಳೇ ಇಲ್ಲವೆಂದಾಗಲಿ, ಅವರ ಅಧಃಪತನವಾಯಿತು ಎಂದಾಗಲೀ ಭಾವಿಸುವುದು ಅವಿವೇಕವಲ್ಲವೇ?) ಕೊನೆಗೆ ಕೆರೆಕುಂಟೆ ಕೊಳಗಳ ಅಧಿಪತಿಯಾದ, ಅಲ್ಪ ದೇವತೆಯಾದನಂತೆ! ಬ್ರಹ್ಮವಾದವು ಮೇಲಾಗುತ್ತ ಉಳಿದ ದೇವತೆಗಳು ಬಿದ್ದರಂತೆ. (ಪರಮಾತ್ಮ, ಬ್ರಹ್ಮ, ತತ್ತ್ವವು ಇತರ ದೇವತೆಗಳನ್ನೂ ಒಳಗೊಂಡೇ ಇದೆಯೆಂಬುದನ್ನು ಅವರು ಮರೆತರು.) ಆದರೆ ಹೀಗೆ ಬರೆದದ್ದರಲ್ಲಿ ಅವರ ಉದ್ದೇಶವೇ ಬೇರ! ಇಲ್ಲಿ ‘‘ಬಿದ್ದ’’ ವರುಣನು ಅವರಲ್ಲಿ ‘‘ಕ್ರಿಸ್ತ’’ನಾಗಿ ‘‘ಮೇಲೆದ್ದ’’ನೆಂದೂ, ಅವನನ್ನು ಭಾರತೀಯರು ಆಶ್ರಯಿಸಬೇಕೆಂದೂ, ಇದೇ ವೇದಕ್ಕೆ ಸಮ್ಮತವೆಂದೂ ಮುಂದೆ ಈ ‘‘ಮಹಾನುಭಾವ’’ರು ಬರೆದಿರುವುದನ್ನು ಹಿಂದಿನ ಅಧ್ಯಾಯದಲ್ಲಿ ಎತ್ತಿ ತೋರಿಸಲಾಗಿದೆ.

ಪರಮಾತ್ಮನಿಗೆ ಅನಂತ ಮುಖಗಳು. ‘‘ವಿಶ್ವತೋ ಮುಖಃ.’’ ವರುಣನು ಒಂದು ಮುಖ ಮಾತ್ರ. ನಮ್ಮ ಒಳಜೀವನದಲ್ಲೂ ಅಂತರ್ಯಾಮಿಯಾಗಿರುವ ಭಗವಂತನ ಮುಖಗಳನ್ನು ಪತ್ತೆ ಹಚ್ಚಿ ಸಾಕ್ಷಾತ್ಕರಿಸಿಕೊಳ್ಳಲು, ಹಿಂದಿನ ಅಧ್ಯಾಯದ ಪ್ರಾರಂಭದಲ್ಲಿ ಶೌನಕರ ಬೃಹದ್ದೇವತೆಯಿಂದಾಯ್ದ ಶ್ಲೋಕಗಳನ್ನು ಕೊಟ್ಟಿರುವುದನ್ನು ಮತ್ತೆ ಓದಿ, ಆ ಗುಣಗಳನ್ನು ಸಂಪಾದಿಸಿ ಪ್ರಯತ್ನಿಸಬೇಕು. ಪರಮಾತ್ಮನನ್ನು ತಿಳಿಯದವನಿಗೆ ವೇದದಿಂದೇನು ಪ್ರಯೋಜನ? ‘‘ಯಸ್ತನ್ನ ವೇದ ಕಿಂ ಋಚಾ ಕರಿಷ್ಯತಿ?’’ ಮತ್ತು ವೇದವನ್ನು ತಿಳಿಯದವನು ಭಗವಂತನನ್ನು ತಿಳಿಯಲಾರ - ‘‘ನಾವೇದವಿನ್ಮನುತೇ ತಂ ಬೃಹಂತಂ’’ ಎಂಬ ಅನ್ಯೋನ್ಯಾಶ್ರಯದ ವೇದಬ್ರಹ್ಮೋಪಾಸನೆಯಿಂದ ಮಾತ್ರ, ವರುಣಾದಿ ಭಗವನ್ಮುಖಗಳ ಸಾಕ್ಷಾತ್ಕಾರ ಸಾಧ್ಯವಾದೀತು.

ಕಸ್ಮೈ  ದೇವಾಯ (ಆತ್ಮಾರ್ಪಣೆ ಯಾರಿಗೆ?):

ಪರಮಾತ್ಮನು ಒಬ್ಬನೇ ಆದರೂ ಅವನ ಮಹಿಮೆ ಅನಂತವಾದುದು. ಅವನ ಮಹಿಮೆಯ ಒಂದೊಂದು ಅಂಶಗಳೇ ದೇವತೆಗಳಾದರೆಂದು ಈ ಹಿಂದೆ ವಿವರಿಸಿದೆ. ಮರವೊಂದರಲ್ಲಿ ಅಸಂಖ್ಯಾತ ಎಲೆಗಳೂ, ಹೂವುಗಳೂ, ಹಣ್ಣುಗಳೂ, ಬೇರು, ಕಾಂಡ, ಉಪಶಾಖೆಗಳು ಇರುವಂತೆಯೇ ಈ ಬ್ರಹ್ಮವೃಕ್ಷದಲ್ಲಿ ದೇವತೆಗಳೂ ಚರಾಚರ ವಸ್ತುಗಳೂ, ಅವಿಭಾಜ್ಯ ಭಾಗಗಳಾಗಿ ಇರುವರು; ಒಂದು ಎಲೆಯನ್ನೋ, ಹೂವನ್ನೋ, ಕಿತ್ತು, ‘‘ಇದು ಮರವೇ?’’ ಎಂದು ಕೇಳಿದರೆ ‘‘ಹೌದು; ಇದೂ ಮರವೇ, ಆದರೆ ಮರದಲ್ಲಿ ಇನ್ನೂ ಇಂಥ ಅನೇಕ ಅಂಶಗಳಿವೆ. ಇಷ್ಟೇ ಅಲ್ಲ, ‘ನೇತಿ ನೇತಿ’ ಎಂಬ ಉಪನಿಷದ್ವಾಕ್ಯದಂತೆ’’ ಎಂದು ಉತ್ತರ ಕೊಡಬೇಕಾಗುತ್ತದೆ. ಎಲ್ಲ ಎಲೆ, ಹೂ, ಹಣ್ಣು ಮುಂತಾದ ಒಂದೊಂದೇ ಅಂಗಗಳನ್ನೂ ಇವು ಮರವಲ್ಲವೆಂದು ಭ್ರಮಿಸಿ, ಕಿತ್ತು ಬಿಸಾಡಿ ‘‘ಮರ ಇನ್ನೆಲ್ಲಿದೆ?’’ ಎಂದು ಕೇಳಿದರೆ ‘‘ಮರವೆಂಬುದು ಬರಿಯ ಭ್ರಾಂತಿ; ಕೇವಲ ನಾಮ-ರೂಪ ಮಾತ್ರ, ವ್ಯವಹಾರದಲ್ಲಿ ಮರ ಇದ್ದರೂ ಪರಮಾರ್ಥದಲ್ಲಿ ಅದು ಇಲ್ಲ, ಶೂನ್ಯ’’ ಎಂಬ ಬೌದ್ಧರ ‘ಮಿಳಿಂದಪ್ರಶ್ನಾದಿ’ ಗ್ರಂಥಗಳಲ್ಲಿ ಮಾಡಿರುವ ಕುತರ್ಕದಂತೆ, ಕೇವಲ ಶೂನ್ಯವಾದವೇ ಉದಯಿಸಿ ಸ್ಥಾಪಿತವಾಗುವುದು. ಇದು ವೇದವಿರುದ್ಧ ಕುತರ್ಕ. ವೇದದ ದೃಷ್ಟಿ, ವಾದಸರಣಿ ಇದಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net