

ಗುಡಿಗೆ ಹೋಗೋಣವೆಂದು ಹೇಳಿ ಹೋಟೆಲಿಗೋ ಸಿನಿಮಾ ಮಂದಿರಕ್ಕೋ ಕರೆದುಕೊಂಡು ಹೋದರೆ, ‘‘ಇದು ಅದಲ್ಲ. ಸುಳ್ಳು ಹೇಳಿ ಕರೆತಂದಿರುವೆ!’’ ಎಂದು ವ್ಯತ್ಯಾಸ ತಿಳಿಯಲು ಅನುಕೂಲವಾಗುವುದು ಅನುಭೂತಿಯು ಸವಿಕಲ್ಪವಾದುದರಿಂದಲೇ. ‘‘ಇದು ವ್ಯವಹಾರದಲ್ಲಿ ಸರಿ. ಬ್ರಹ್ಮವಸ್ತುವಿಗೆ ಇದು ಹೇಗೆ ಅನ್ವಯ?’’ ಎಂದು ಕೇಳಿದರೆ, ಹೀಗಿದೆ ಉತ್ತರ. ಲೋಕದಲ್ಲಿ ಬ್ರಹ್ಮವಸ್ತುವಿಗೆ ಇರುವಷ್ಟು ಲಕ್ಷಣಗಳು ಇನ್ನಾವ ವಸ್ತುವಿಗೂ ಇಲ್ಲವೆಂಬ ಅರ್ಥದಲ್ಲಿ ಅದು ಇಂದ್ರಿಯಾದಿ ಸರ್ವ ಕರಣಗಳಿಗೂ ಮೀರಿದೆ. ಲಕ್ಷಣವೇ ಇಲ್ಲವೆಂಬ ಅರ್ಥದಲ್ಲಿ ಅಲ್ಲ. ವೇದವ್ಯಾಸರು ಬ್ರಹ್ಮಸೂತ್ರದ ಪ್ರಾಸ್ತಾವಿಕ ಮೊದಲ ಸೂತ್ರದ ನಂತರ ಎರಡನೆಯದರಲ್ಲಿಯೇ ಉಪನಿಷದುಕ್ತವಾದ ಬ್ರಹ್ಮಲಕ್ಷಣವನ್ನು ತೋರಿಸಿದ್ದಾರೆ: ‘‘ಜನ್ಮಾದ್ಯಸ್ಯ ಯತಃ’’ - ‘‘ಜಗತ್ತಿನ ಸೃಷ್ಟಿ, ಸ್ಥಿತಿ, ಲಯಗಳು ಯಾವ ಪರವಸ್ತುವಿನಿಂದ ಆಗುತ್ತವೆಯೋ ಅದು (ಪರಬ್ರಹ್ಮ)’’ ಎಂಬುದಾಗಿ. ಇದು ಬೇರೆ ಯಾವ ವಸ್ತುವಿಗೂ ಅನ್ವಯವಾಗದ ಕಾರಣ ಅವ್ಯಾಪ್ತಿ-ಅತಿವ್ಯಾಪ್ತಿ ಮೊದಲಾದ ದೋಷಗಳಿಲ್ಲದೆ ಬ್ರಹ್ಮವಸ್ತುವಿಗೆ ಮಾತ್ರ ವಿಶಿಷ್ಟ ಲಕ್ಷಣವಾಗಿರುವುದು. ಇಂಥ ವಸ್ತು ಸಾಕ್ಷಾತ್ಕಾರ ಮಾಡಿದವನೇ ಬ್ರಹ್ಮಜ್ಞಾನಿ, ಎಂಬುದು ವೇದಸಮ್ಮತವಾದ ಮಾರ್ಗ.