ಮೋಕ್ಷಾವಸ್ಥೆಯಲ್ಲಿ ಜೀವಾತ್ಮಸ್ವರೂಪ

Sudina 3 Veda Darshana 1
Published on

ಜನ್ಮ-ಮೃತ್ಯುಗಳನ್ನು ದಾಟಲು ಸಾಧ್ಯವಾದ ಅಗ್ನಿಯನ್ನಾಗಿ ಯಮದೇವನೇ ಕಂಠೋಕ್ತವಾಗಿ ನಚಿಕೇತನಿಗೆ ಹೇಳಿರುವುದು ಗಮನೀಯ. ಮುಂದಿನ ಮಂತ್ರದಲ್ಲಿ ನಾಚಿಕೇತಾಗ್ನಿಗೆ ಸಂಬಂಧಪಟ್ಟ ಅನುವಾಕಾದಿಗಳನ್ನು ಸಾಕ್ಷಾತ್ಕರಿಸಿದವನು ಶರೀರ ಬಿಡುವುದಕ್ಕೆ ಮೊದಲು ಮೃತ್ಯುಪಾಶಗಳಿಂದ ಮುಕ್ತನಾಗಿ ಶೋಕವನ್ನು ದಾಟಿ, ಶಾಶ್ವತ ಆನಂದವನ್ನು ಪರಮಪದದಲ್ಲಿ ಪಡೆಯುವನೆಂದೂ, ಇದೇ ಪುನರಾವೃತ್ತಿ ಸ್ವರೂಪವಾದ ಮೋಕ್ಷಸಾಧನವೆಂದೂ, ಇನ್ನೂ ಒಂದು ಮಂತ್ರದಲ್ಲಿ ಕಠೋಪನಿಷತ್ತಿನಲ್ಲಿಯೇ ಕೊಂಡಾಡಲಾಗಿದೆ. ಆದುದರಿಂದ ನಚಿಕೇತನ ಎರಡನೆಯ ಪ್ರಶ್ನೆಗೆ ಯಮನು ಅನುಗ್ರಹಿಸಿದ ಉತ್ತರ ಬ್ರಹ್ಮಪ್ರಾಪ್ತಿಗೆ ಸಾಧನವೇ ಆದ ನಾಚಿಕೇತಾಗ್ನಿಯ ಅನುಷ್ಠಾನ ಎಂಬುದು ನಿಸ್ಸಂದೇಹ.

ಮೂರನೆಯ ವರ: ಈಗ ಉಪನಿಷತ್ತಿನ ಹೃದಯವಾದ ಸಕಲ ವೇದದ ಸಾರಭೂತವಾದ ಮೂರನೆಯ ಪ್ರಶ್ನೆ ಮತ್ತು ಉತ್ತರ. ಈಗ ಯಮನು ಮೂರನೆಯ ವರವನ್ನು ಕೇಳುವಂತೆ, ನಚಿಕೇತನಿಗೆ ಬಿನ್ನವಿಸಿಕೊಳ್ಳುತ್ತಾನೆ. ಆಗ ನಚಿಕೇತನು ಕೇಳಿದ ಪ್ರಶ್ನೆ: ‘‘ಯಾವ ಮನುಷ್ಯನು ಸತ್ತಮೇಲೆ ಒಂದು ಸಂಶಯ ಇರುವುದು. ಅವನು ಇನ್ನೂ ಇದ್ದಾನೆ ಎಂದು ಕೆಲವರು, ಇನ್ನಿಲ್ಲ ಎಂದೂ ಮತ್ತೆ ಕೆಲವರು ಹೇಳುವುದುಂಟು. ಈಗ ನೀನೇ ಈ ವಿಷಯದಲ್ಲಿ ನಿಸ್ಸಂಶಯವಾಗಿ ಯಥಾರ್ಥವನ್ನು ನನಗೆ ಉಪದೇಶಿಸಬೇಕು. ಇದೇ ನೀನು ಅನುಗ್ರಹಿಸುವ ಮೂರನೆಯ ವರವಾಗಲಿ.’’

ಈ ವರದ ಅರ್ಥವೇನು?: ಈಗ ನಚಿಕೇತನ ಈ ಪ್ರಶ್ನೆಯಲ್ಲಿ ಏನನ್ನು ಕೇಳಿದಂತಾಯಿತು ಎಂಬುದನ್ನು ತಿಳಿಯುವುದು ಆವಶ್ಯಕ. ಒಂದು ದೃಷ್ಟಿಯಿಂದ ಸಮಸ್ತ ವೇದಾಂತಕ್ಕೂ ಮಹಾಪೂರ್ವಪಕ್ಷವೇ ಇಲ್ಲಿ ಅಡಗಿರುವಂತಿದೆ. ಶರೀರಕ್ಕಿಂತ ಆತ್ಮವೆಂಬುದು ಒಂದು ಭಿನ್ನವಾದ, ವಿಲಕ್ಷಣವಾದ, ಅವಿನಾಶಿಯಾದ, ವಸ್ತು ಇಲ್ಲವೇ ಇಲ್ಲವೆಂದು ವಾದಿಸುತ್ತಿದ್ದ ಚಾರ್ವಾಕರ ಪಕ್ಷವು ಒಂದು ದೃಷ್ಟಿಯಿಂದ ಹಳೆಯದೇ. ವೇದಾಂತಕ್ಕೆ ಪ್ರತಿಪಕ್ಷವಾದ ಮತಗಳಲ್ಲಿ ಇದಕ್ಕೇ ಅಗ್ರಸ್ಥಾನ. ಆದರೆ ನಚಿಕೇತನ ಪ್ರಶ್ನೆಯೂ ಇದಷ್ಟನ್ನೇ ಕುರಿತದ್ದೇ ಎಂಬುದು ಇಲ್ಲಿ ಬುದ್ಧಿವಂತರು ಕೇಳಿಕೊಳ್ಳಬೇಕಾದ ಪ್ರಶ್ನೆ. ಶರೀರಕ್ಕಿಂತ ಭಿನ್ನವಾದ ಆತ್ಮವೇ ಇಲ್ಲವೆಂದೋ, ಅಥವಾ ಅದು ಇದ್ದರೂ ತನಗೆ ಅದು ತಿಳಿಯದೆಂದೋ, ಅಥವಾ ಅದರಲ್ಲಿ ತನಗೆ ನಂಬಿಕೆ ಇಲ್ಲವೆಂದೋ, ಇಲ್ಲಿ ನಚಿಕೇತನ ಪ್ರಶ್ನೆಯ ಆಶಯವಾಗಿದ್ದರೆ, ಹಿಂದಿನ ಪ್ರಶ್ನೆಯಲ್ಲಿ ತಾನೇ ಶರೀರಾತೀತ ಆತ್ಮನನ್ನು ಕುರಿತು, ಅವನು ಪರಮಪದಕ್ಕೆ ಹೋಗುವ ಉಪಾಯವನ್ನು ಉಪದೇಶಿಸಲು ಯಮನನ್ನು ಕೇಳಿದನೇಕೆ? ಚಾರ್ವಾಕರಿಗೆ ಲೋಕಾಂತರದಲ್ಲಿ ನಂಬಿಕೆ ಇಲ್ಲವಷ್ಟೆ! ನಚಿಕೇತನಾದರೋ ಪರಮಪದದಲ್ಲಿ ತನ್ನ ದೃಢ ನಂಬಿಕೆಯನ್ನು ತೋರ್ಪಡಿಸಿರುವುದಲ್ಲದೆ, ಶರೀರಾತೀತನಾದ ಆತ್ಮನ ಗಮ್ಯಸ್ಥಾನವು ಅದೇ ಎಂದೂ ತಿಳಿದುಕೊಂಡ ಮೇಲೆ ತಾನೇ, ಅಲ್ಲಿಗೆ ತೆರಳುವ ಉಪಾಯದ ಮಾತು ಉದ್ಭವಿಸುವುದು? ಆದುದರಿಂದ ಎಲ್ಲರ ಕಣ್ಣಿಗೂ ಕಾಣುವ ಮನುಷ್ಯನ ಶರೀರದಲ್ಲಿ, ಆತ್ಮವೆಂಬುದೊಂದು ಇದೆಯೋ ಎಂದಷ್ಟೇ ನಚಿಕೇತನ ಪ್ರಶ್ನೆಯ ಅರ್ಥ ಎಂದು ಅರ್ಥ ಮಾಡುವುದು ಅಷ್ಟೇನೂ ಸಮಂಜಸವಾಗಲಾರದು. ಹಾಗಾದರೆ ಈ ಪ್ರಶ್ನೆಗೆ ಮತ್ತೇನು ಅರ್ಥ?

ಮೋಕ್ಷಾವಸ್ಥೆಯಲ್ಲಿ ಜೀವಾತ್ಮಸ್ವರೂಪ ವಿಷಯವಾಗಿ ಪ್ರಶ್ನೆ: ಶರೀರ ನಶ್ವರವೆಂದೂ, ಆತ್ಮ ಅದರಿಂದ ಭಿನ್ನವೆಂದೂ ಒಪ್ಪಿದ ಜ್ಞಾನಿಗಳು ನಚಿಕೇತನ ಕಾಲದಲ್ಲೂ ಅಲ್ಲಲ್ಲಿದ್ದರೂ, ಶರೀರಪಾತಾನಂತರ ಆ ಆತ್ಮನ ಇರುವಿಕೆಯ ಅವಸ್ಥೆಯ ಕುರಿತು ನಾನಾ ಮತಭೇದಗಳೂ, ಊಹಾಪೋಹಗಳೂ ಇದ್ದೇ ಇದ್ದವು. ಅಂದರೆ ಮೋಕ್ಷದ ಕಲ್ಪನೆಯಲ್ಲಿ ವೈವಿಧ್ಯವಿತ್ತು. ಉದಾಹರಣೆಗೆ, ಈಗ ಪ್ರಚಲಿತವಿರುವ ಅನೇಕ ಮತಗಳಲ್ಲೂ ಇಂದಿಗೂ ವೈವಿಧ್ಯ ಇದ್ದೇ ಇದೆ. ನಿರೀಶ್ವರ ಸಾಂಖ್ಯಮತದಲ್ಲಿ ಮತ್ತು ಇಂತಹ ಮತಗಳಲ್ಲಿ ಆತ್ಮನು ನಿರ್ಲೆಪನಾಗಿ, ಗುಣಶೂನ್ಯನಾಗಿ, ಕೇವಲ ಸಾಕ್ಷಿಮಾತ್ರನಾಗಿ ಇರುತ್ತಾನೆಂದೂ ತಿಳಿಯುತ್ತಾರೆ. ಈಗ ಆತ್ಮನು ಇಲ್ಲಿ ‘‘ಇದ್ದಂತಾ’’ಯಿತೇ? ಅವರು ಹೇಳುವ ಮೋಕ್ಷ ಲಕ್ಷಣಗಳು ಆತ್ಮನ ‘‘ಇರುವಿಕೆ’’ಯನ್ನು ಎತ್ತಿ ಹಿಡಿದಂತಾಯಿತೇ ಅಥವಾ, ‘‘ಇಲ್ಲದಿರುವಿಕೆ’’ಯನ್ನೇ ರೂಪಾಂತರದಿಂದ ಹೇಳಿದಂತಾಯಿತೇ?

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net