

ನಚಿಕೇತನು ಶರೀರತ್ಯಾಗಪೂರ್ವಕವಾಗಿ ಮೃತ್ಯುಲೋಕಕ್ಕೆ ಹೊರಡಲು ನಿಶ್ಚಯಿಸುವಷ್ಟರಲ್ಲಿಯೇ ‘‘ವಾಗ್ದೇವತೆ’’ಯು ಅಶರೀರವಾಣಿಯಾಗಿ ಅವನಿಗೆ ಹೀಗೆ ಹೇಳಿಕೊಟ್ಟಿತು.
‘‘ಎಲೈ, ಗೌತಮಗೋತ್ರದಲ್ಲಿ ಹುಟ್ಟಿದ ಕುಮಾರನೇ! ನಿನ್ನ ತಂದೆಯು ನಿನ್ನನ್ನು ಯಮನಿಗೆ ದಾನ ಕೊಟ್ಟಿರುವನಷ್ಟೆ. ನೀನು ಹೊರಡು. (ಹಿಂದೆಮುಂದೆ ನೋಡಬೇಡ: ಇದರಿಂದ ಒಳ್ಳೆಯದೇ ಆಗುವುದೆಂದು ಭಾವ) ನೀನು ಯಮಸದನದ ದ್ವಾರದಲ್ಲಿ ಮೂರು ರಾತ್ರಿಗಳು ಉಪವಾಸ ಮಾಡಬೇಕಾಗಿ ಬರುವುದು. (ಇದೂ ನಿನ್ನ ಶ್ರೇಯಸ್ಸಿಗೇ!) ಯಮನು ನಿನ್ನನ್ನು ಕುರಿತು ‘‘ಈ ಮೂರು ರಾತ್ರಿಗಳೂ ಏನನ್ನು ತಿಂದೆ?’’ ಎಂದು ಕೇಳಿದರೆ ‘‘ಮೊದಲ ರಾತ್ರಿ ನಿನ್ನ ಮಕ್ಕಳನ್ನು’’ ಎಂದೂ, ಎರಡನೆಯ ರಾತ್ರಿ ‘‘ನಿನ್ನ ಪಶುಗಳನ್ನು’’ ಎಂದೂ ಮೂರನೆಯ ರಾತ್ರಿ ‘‘ನಿನ್ನ ಸಕಲ ಪುಣ್ಯ ಫಲಗಳನ್ನು’ ಎಂದೂ ಹೇಳತಕ್ಕದ್ದು.’’
‘‘ನಾನೇ ಏಕಾದಶರುದ್ರರೂಪದಿಂದಲೂ, ಅಷ್ಟವಸುಗಳ ರೂಪದಿಂದಲೂ, ದ್ವಾದಶಾದಿತ್ಯರ ರೂಪದಿಂದಲೂ ಸಮಸ್ತ ದೇವತೆಗಳ ರೂಪದಿಂದಲೂ ಸಂಚರಿಸುತ್ತೇನೆ. ಮಿತ್ರಾವರುಣರನ್ನು ಭರಿಸುವವಳೂ ನಾನೇ, ಇಂದ್ರಾಗ್ನಿಗಳನ್ನೂ, ಅಶ್ವಿನೀ ದೇವತೆಗಳನ್ನೂ ಪೋಷಿಸುವವಳೂ ನಾನೇ... ಸಮಸ್ತ ಜನರಿಗೂ ಒಡೆಯಳೂ (ರಾಷ್ಟ್ರೀ) ನಾನೇ. ಸಮಸ್ತ ಐಶ್ವರ್ಯಕ್ಕೂ ನಾನೇ ಸ್ವಾಮಿನಿ. ಪರಬ್ರಹ್ಮ ವಸ್ತುವನ್ನು ಅರಿತು ಸಾಕ್ಷಾತ್ಕರಿಸಿರುವವಳೂ ನಾನೇ. ಯಜ್ಞಸಂಬಂಧೀ ದೇವತೆಗಳಲ್ಲಿ ಮುಖ್ಯಳೂ, ಅನೇಕ ರೂಪದಿಂದ ಎಲ್ಲೆಲ್ಲೂ ನಿಂತಿರುವವಳೂ, ಚೃೆತನ್ಯಮಯೀ ಆಗಿ ಸಮಸ್ತ ಪ್ರಾಣಿಗಳಲ್ಲಿ ನೆಲೆಸಿರುವವಳೂ ಆದ ನನ್ನನ್ನು ದೇವತೆಗಳು ಅನೇಕ ಕ್ಷೇತ್ರಗಳಲ್ಲಿ ಸ್ಥಾಪಿಸುತ್ತಾರೆ, ಪೂಜಿಸುತ್ತಾರೆ...’’ ಇತ್ಯಾದಿ.
ಪಾಂಚರಾತ್ರ ಶಾಸ್ತ್ರದಲ್ಲಿ ಯಾವ ಪರಮಾತ್ಮನ ಸರ್ವವ್ಯಾಪಿನೀ ಶ್ರೀಯ ವೃೆಭವವನ್ನು ‘‘ಲಕ್ಷ್ಮೀದೇವಿ’’ ಎಂದು ವರ್ಣಿಸಿ ಕೊಂಡಾಡಲಾಗಿದೆಯೋ, ಅದನ್ನೇ ಪುರುಷಸೂಕ್ತದಲ್ಲಿಯೂ ‘‘ಹ್ರೀಶ್ಚ ತೇ ಲಕ್ಷ್ಮೀಶ್ಚ ಪತ್ನೌ್ಯಎಂದೂ ವರ್ಣಿಸಿರುವುದು ಗಮನೀಯ.