

ಎರಡನೆಯ ಪ್ರಶ್ನೆಯ ಅರ್ಥ, ಮತ್ತು ಯಮನ ಅನುಗ್ರಹ: ಈಗ ಈ ಎರಡನೆಯ ಪ್ರಶ್ನೆಯಿಂದ ಪಾರಮಾರ್ಥಿಕವಾಗಿ, ಅಂತರಾರ್ಥದಲ್ಲಿ ಏನನ್ನು, ನಚಿಕೇತನು ಕೇಳಿದಂತಾಯಿತು? ಎಂದರೆ, ಅಮೃತತ್ತ್ವಪ್ರಾಪ್ತಿ ಎಂದು ಖ್ಯಾತವಾದ, ಜನನ-ಮರಣಶೂನ್ಯವಾದ, ಕ್ಷಯವಾಗುವ ಫಲಗಳನ್ನೇ ಕೊಡುವ ಕರ್ಮಗಳಿಲ್ಲದ, ಪರಮ ಪುರುಷಾರ್ಥವಾದ ಮೋಕ್ಷದ ಮಾರ್ಗವನ್ನೇ ಕೇಳಿದಂತಾಯಿತು. ಅಂದರೆ, ಮೊದಲನೆಯ ಪ್ರಶ್ನೆಯಲ್ಲಿ ಉಪೇತೃ ಸ್ವಭಾವವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಕೇಳಿದಂತೆ. ಇಲ್ಲಿ ಉಪಾಯ ಸ್ವರೂಪವನ್ನೂ ಕೇಳುತ್ತಿದ್ದಾನೆ.
ಆಗ ಯಮನು ‘‘ಹೇ ನಚಿಕೇತ, ನಿನಗೆ ಹೇಳುತ್ತೇನೆ, ಗಮನವಾಗಿ ಕೇಳಿ ತಿಳಿದುಕೋ, ಈಗ ನಾನು ಉಪದೇಶಿಸುವ ಅಗ್ನಿವಿದ್ಯೆಯನ್ನು ತಿಳಿದರೆ ಅನಂತಲೋಕವಾದ ಪರಮಪದವನ್ನು ಹೊಂದಿ ಅಪುನರಾವೃತ್ತಿ ಸ್ವರೂಪವಾದ ಶಾಶ್ವತ ಪ್ರತಿಷ್ಠೆಯನ್ನು ಹೊಂದುವೆ. ಈ ವಿದ್ಯೆಯು ಬಹಳ ಗುಹ್ಯವಾದುದು. ಇತರರು ತಮ್ಮ ಹೃದಯ ಗುಹೆಯಲ್ಲಿಯೇ ಇರುವ ಇದನ್ನು ನಿನ್ನಂತೆ ತಿಳಿಯಲಾರರು’’ ಎಂದು ಆ ಅಗ್ನಿಚಯನವನ್ನು ಸಾಂಗವಾಗಿ ಹೇಳಿಕೊಟ್ಟು ನಚಿಕೇತನಿಂದ ಪುನರುಚ್ಚಾರ ಮಾಡಿಸುತ್ತಾನೆ. ಇಲ್ಲಿ ಯಮನ ಮಾತುಗಳಲ್ಲಿ ಈ ಲೋಕವು ಅನಂತವೂ, ಶಾಶ್ವತ ಪ್ರತಿಷ್ಠಾಸ್ವರೂಪವುಳ್ಳದ್ದೂ ಎಂದು ಹೇಳಿರುವುದು, ರೂಢಿಯ ಅರ್ಥದ ಸ್ವರ್ಗವನ್ನಲ್ಲದೆ ಪರಮಪದವನ್ನೇ ಕುರಿತು ಹೇಳುತ್ತದೆಂಬುದು ಸ್ಪಷ್ಟ.
ಯಮನು ಈ ಅಗ್ನಿವಿದ್ಯೆಗೆ ನಾಚಿಕೇತಾಗ್ನಿ ಎಂದೇ ಇನ್ನು ಮುಂದೆ ಹೆಸರಾಗುವಂತೆ ಹೊಸ ವರವನ್ನು ಅನುಗ್ರಹಿಸುತ್ತಾನೆ. ಇದರ ವಿಸ್ತಾರವಾದ ಅನುಷ್ಠಾನಕ್ರಮವು ತೈತ್ತಿರೀಯ ಬ್ರಾಹ್ಮಣದಲ್ಲಿ (3.11.7.9) ಉಕ್ತವಾಗಿದೆ. ಬ್ರಹ್ಮೋಪಾಸನೆಗೆ ಇದು ಅಂಗವೆಂದೂ ಮೋಕ್ಷಕ್ಕೆ ಕಾರಣವೆಂದೂ ವೇದಾಭಿಜ್ಞರು ಅಭಿಪ್ರಾಯಪಡುತ್ತಾರೆ. ಈ ಸಂಬಂಧದ ಮೂರು ಅನುವಾಕಗಳನ್ನು ಅಧ್ಯಯನ ಮಾಡಿ, ಯಜ್ಞ, ಅಧ್ಯಯನ, ದಾನ ಎಂಬ ಮೂರು ಕರ್ಮಗಳನ್ನು (ಅಥವಾ ಪಾಕಯಜ್ಞ, ಹವಿರ್ಯಜ್ಞ ಮತ್ತು ಸೋಮಯಜ್ಞಗಳನ್ನು) ಅನುಷ್ಠಾನ ಮಾಡುತ್ತ, ಮೂರಾವರ್ತಿ ಚಯನ ಮಾಡಲ್ಪಟ್ಟ ಅಗ್ನಿಗಳ ಜೊತೆಗೂ, ತನ್ಮೂಲಕ ಪರಮಾತ್ಮನ ಒಡನೆಯೂ ಸಂಧಿಯನ್ನು (ಸಮಾಗಮನವನ್ನು) ಹೊಂದಿದವನು ಹುಟ್ಟು-ಸಾವುಗಳನ್ನು ದಾಟಿ, ಅಮರನಾಗುತ್ತಾನೆ. ಪರಮಾತ್ಮನಿಂದಲೇ ಹುಟ್ಟಿದ ಜೀವಾತ್ಮನು ಆ ಪರಮಾತ್ಮನನ್ನು ತಿಳಿಯುವುದರಿಂದಲೇ ಬ್ರಹ್ಮಜ್ಞನಾಗುತ್ತಾನೆ. ಇದೇ ಸರಿಯಾದ ಜ್ಞಾನ. ಇದಿಲ್ಲದವನಿಗೆ ತನ್ನ ಸ್ವರೂಪಜ್ಞಾನವೇ ಇಲ್ಲವೆಂದು ಅರ್ಥ. ಹೀಗೆ ತನ್ನ ಸ್ವರೂಪವನ್ನು ತಿಳಿದು ತನ್ನಲ್ಲೂ ಅಂತರ್ಯಾಮಿಯಾಗಿರುವ ಪರಮಾತ್ಮನನ್ನು ಸ್ತುತ್ಯರ್ಹನೆಂದು ಅರಿತು ಉಪಾಸಿಸಿ, ಪ್ರತ್ಯಕ್ಷ ಮಾಡಿಕೊಂಡು ಆತ್ಯಂತಿಕವಾದ ಶಾಂತಿಯನ್ನು ಹೊಂದುತ್ತಾನೆ. ಇದು ಸ್ವಯಂ ಯಮನೇ ನಾಚಿಕೇತಾಗ್ನಿಯನ್ನು ಪ್ರಶಂಸೆ ಮಾಡಿರುವ ರೀತಿ.
ಕೇವಲ ಇಂದ್ರಾದಿ ದೇವತೆಗಳ ಭೋಗಸ್ಥಾನರೂಪವಾದ ಸ್ವರ್ಗಕ್ಕೆ ಹೋಗುವ ಒಂದು ಅಗ್ನಿಚಯನವನ್ನು ಮಾತ್ರ ಇಲ್ಲಿ ಉಪದೇಶಿಸಿದ್ದರೆ ಇಷ್ಟೊಂದು ಪ್ರಸಂಶೆಯನ್ನು ಮಾಡುವ, ಇಂಥ ಮಾರ್ವಿುಕ ಭಾಷೆಯಲ್ಲಿ ಮಾಡುವ ಅಗತ್ಯವಿರಲಿಲ್ಲ ಎಂಬುದು ಸ್ಪಷ್ಟ.