

ತ್ರಿತ ಆಪ್ತೈನೆಂಬ ಋಷಿಗೆ ಇಬ್ಬರು ಸೋದರರಿದ್ದರು. ಹಣದಾಸೆಯಿಂದ ಒಮ್ಮೆ ಇವನ ಸೋದರರು ಇವನನ್ನು ಬಾವಿಯಲ್ಲಿ ತಳ್ಳಿ, ಇವನ ಹಣವನ್ನೂ ಗೋವುಗಳನ್ನೂ ಅಪಹರಿಸಿ ಓಡಿಹೋದರು.
ಸಕಲ ದೇವತೆಗಳೂ ಬಂದು ಹವಿಸ್ ಸ್ವೀಕಾರ ಮಾಡಿ ಅನುಗ್ರಹಿಸಿದರೆಂದು ವೇದವೇ ಹೇಳುತ್ತದೆ. (ತ್ರಿತ ಆಪ್ತ್ಯ ಋಷಿದೃಷ್ಟವಾದ ಅನೇಕ ಸೂಕ್ತಗಳು ಋಕ್ಸಂಹಿತೆಯಲ್ಲಿ, ಋ-105, 8-48, 9.10-33, 34, 10-1 ಮುಂತಾದ ಅನೇಕ ಕಡೆಗಳಲ್ಲಿವೆ.) ಆದುದರಿಂದ ಯಾಗಾಚರಣೆಗೆ ಶಕ್ತಿ ಮೀರಿದ ಖರ್ಚು, ಆಡಂಬರ ಅವಶ್ಯವಿಲ್ಲವೆಂದೂ, ಶ್ರದ್ಧೆಯೊಂದಿದ್ದರೆ ಹಾಳು ಬಾವಿಯಲ್ಲಾದರೂ ಯಾಗ ನಡೆಸಲು ಸಾಧ್ಯವೆಂದೂ ವೇದವೇ ಮಾರ್ವಿುಕವಾಗಿ ಸೂಚಿಸಿದೆ.
***
ವಾಜಶ್ರವಸನಿಗೆ ಈ ಮಾರ್ಗ ಹಿಡಿಸಲಿಲ್ಲವೆಂದು ಕಾಣುತ್ತದೆ. ಅಂದರೆ ನಿಜವಾದ ‘‘ಶ್ರದ್ಧೆ’’ ಅವನಲ್ಲಿರಲಿಲ್ಲ. ಯಾಗ ನಡೆಯಿತು. ದಾನಕಾಲ ಸಮೀಪಿಸಿತು. ಒಬ್ಬೊಬ್ಬರಾಗಿ ಬಂದಿದ್ದವರು ದಾನ ಸ್ವೀಕಾರ ಮಾಡಿ ಹೊರಡುತ್ತಿದ್ದರು. ಇದೆಲ್ಲವನ್ನೂ ಅಲ್ಲೇ ನಿಂತು ನೋಡುತ್ತಿದ್ದ ನಚಿಕೇತನಿಗೆ, ತನ್ನ ತಂದೆಗೆ ಆವರೆಗೆ ಬಾರದಿದ್ದ ‘‘ಶ್ರದ್ಧೆ’’, ಅರ್ಥಶೂನ್ಯವಾಗಿ ಮಾಡಿದ ದಾನಗಳನ್ನು ನೋಡಿದೊಡನೆಯೇ ಬಂದಿತಂತೆ - ‘‘ದಕ್ಷಿಣಾಸು ನೀಯಮಾನಾಸು ಶ್ರದ್ಧಾ ಆವಿವೇಶ.’’ ವಯಸ್ಸಾದ ತಂದೆಗೆ ಇನ್ನೂ ಬಾರದಿದ್ದ ‘‘ಶ್ರದ್ಧೆ’’ ಕೇವಲ ಕುಮಾರನಾಗಿದ್ದ ನಚಿಕೇತನಿಗೆ ಬಂದಿತೆಂದು ‘‘ತಂ ಹ ಕುಮಾರಂ ಸಂತಂ’’ ಎಂಬ ಶ್ರುತಿವಾಕ್ಯ ಭಾಗ ಸೂಚಿಸುತ್ತದೆ. ಶ್ರದ್ಧೆಗೆ ವಯಸ್ಸಿಲ್ಲವೆಂಬುದು ತಾತ್ಪರ್ಯ.
ಕೆಲವರು ವಯಸ್ಸು ಕಳೆದು, ಉದ್ಯೋಗಗಳಿಂದ ನಿವೃತ್ತರಾಗುವ ತನಕ ‘‘ಪಾರಲೌಕಿಕ’’ ಸಾಧನೆಗೆ ತಮಗೆ ಅರ್ಹತೆ ಬಂದಿಲ್ಲವೆಂದು ಹೇಳಿಕೊಂಡು ತಿರುಗಾಡುವುದು - ಅವರಿಗೆ ಅದರಲ್ಲಿ ‘‘ಶ್ರದ್ಧೆ’’ ಇಲ್ಲವೆಂದೂ, ದೈನಂದಿನ ಜೀವನದಲ್ಲೇ ಮಾತ್ರ ‘‘ಶ್ರದ್ಧೆ’’ ಇದೆಯೆಂದೂ ಅಷ್ಟೇ ಸೂಚಿಸುತ್ತದೆ. ಮಹಾಜ್ಞಾನಿಗಳು, ಧ್ರುವನಂತೆ, ಪ್ರಹ್ಲಾದನಂತೆ, ವಾಮದೇವರಂತೆ, ಆಂಗೀರಸರಂತೆ ಅತಿ ಚಿಕ್ಕ ವಯಸ್ಸಿನಲ್ಲೇ ಬ್ರಹ್ಮಾನುಭವ ಪಡೆದುದಕ್ಕೆ ಅವರವರ ಶ್ರದ್ಧೆಯೇ ಕಾರಣ.
ಭಗವಂತನು ಗೀತೆಯಲ್ಲಿ ‘‘ಶ್ರದ್ಧಾವಾನ್ ಲಭತೇ ಜ್ಞಾನಂ, ತತ್ಪರಃ ಸಂಯತೇಂದ್ರಿಯಃ’’ ಎಂದಿರುತ್ತಾನೆ. ಅಲ್ಲದೇ, ಆಧ್ಯಾತ್ಮಿಕ ಶ್ರದ್ಧೆಯಿಲ್ಲದಿದ್ದರೂ ಪ್ರತಿಯೊಬ್ಬನಿಗೂ ಯಾವುದಾದರೊಂದು ವಿಷಯದಲ್ಲಿ ಶ್ರದ್ಧೆ ಇದ್ದೇ ಇರುವುದು. ಇದಿಲ್ಲದೆ ಬದುಕುವುದೇ ಸಾಧ್ಯವಿಲ್ಲ. ಭಗವಂತನೂ ಇದನ್ನೇ ‘‘ಶ್ರದ್ಧಾಮಯೊ—ಯಂ ಪುರುಷಃ ಯೋ ಯಚದ್ಧಃ ಸ ಏವ ಸಃ’’ | (17-3) ಎಂದು ಗೀತೆಯಲ್ಲಿ ಹೇಳಿದ್ದಾನೆ.
‘‘ಪ್ರತಿಯೊಂದು ಜೀವಿಯೂ ಶ್ರದ್ಧಾಮಯನೇ. ಯಾವುದರಲ್ಲಿ ಶ್ರದ್ಧೆಯೋ ಅದೇ ಅವನ ಸ್ವರೂಪಸೂಚಕ.’’ ಕಳ್ಳನಿಗೆ ಅವರಿವರ ಶ್ರಮದಿಂದ ತಾನು ಸುಲಭವಾಗಿ ಜೀವಿಸಬೇಕೆಂಬ ‘‘ಶ್ರದ್ಧೆ’’. ಬ್ರಹ್ಮಜ್ಞಾನಿಗೆ ಶಾಶ್ವತ ಆನಂದದಲ್ಲಿ ‘‘ಶ್ರದ್ಧೆ.’’ ಈಗಿನ ರಾಜಕಾರಣಿಗಳಿಗೆ ಹೇಗಾದರೂ ಜನರನ್ನು ವಂಚಿಸಿ ಅಧಿಕಾರದಲ್ಲಿ ಉಳಿಯುವ ಶ್ರದ್ಧೆ ಇತ್ಯಾದಿ. ಇವುಗಳನ್ನು ಸಾತ್ತಿ್ವಕ, ರಾಜಸ, ತಾಮಸ ರೀತಿಯಲ್ಲಿ ವಿಭಜಿಸಿ ನೋಡಿಕೊಳ್ಳಬೇಕು. ವಿವರಗಳಿಗೆ ನೋಡಿ. (ಗೀತಾ 17, 18ನೇ ಅಧ್ಯಾಯಗಳು)