ವೇದ ದರ್ಶನ; ಹೃದಯಾಕಾಶದಲ್ಲಿನ ಸೃಷ್ಟಿತತ್ತ್ವ

Sudina 3 Veda Darshana 1
Published on
ಬೃಹದ್ದೇವತೆಯಲ್ಲಿ ಶೌನಕರು ವಾಗ್ದೇವತೆಯ ಸ್ವರೂಪವನ್ನು ವಿವರಿಸುವಾಗ, ಪ್ರಾಧಾನ್ಯದಿಂದ ‘‘ಪಾರ್ಥಿವೀ’’, ‘‘ಮಧ್ಯಮಾ’’, ‘‘ದಿವ್ಯಾ’’ ಎಂದು ಮೂರು ಲೋಕಗಳಲ್ಲಿ ವ್ಯಾಪಿಸಿರುವವಳೆಂದೂ, ಭೂಮಿಯಲ್ಲಿರುವ ನದಿಗಳ ಹೆಸರುಗಳೂ, ಉದಕಗಳೂ, ಔಷಧಿಗಳೂ ಇವುಗಳ ಸ್ವರೂಪ ವರ್ಣನೆಗಳೆಲ್ಲ ‘‘ವಾಗ್ದೇವತೆಯ’’ ವರ್ಣನೆಯೇ ಎಂದೂ, ‘‘ಅರಣ್ಯಾನೀ, ರಾತ್ರೀ, ಶ್ರದ್ಧಾ, ಉಷಾಃ, ಪೃಥ್ವೀ, ಅಪ್ವ’’ ಎಂಬ ದೇವತೆಗಳು ಋಕ್ಕುಗಳಲ್ಲಿ ವರ್ಣಿಸಲ್ಪಟ್ಟಾಗಲೂ, ಇವೂ ವಾಗ್ದೇವತೆಯ ವರ್ಣನೆಯೆಂದೂ, ವಾಕ್, ಅದಿತಿ, ಸರಸ್ವತೀ ಎಂಬ ನಾಮಗಳಿಂದ ಸ್ತುತಳಾದಾಗಲೂ, ವಾಗ್ದೇವತೆಯೇ ಸ್ತುತಿಸಲ್ಪಡುತ್ತಿರುವಳೆಂದು ತಿಳಿಯತಕ್ಕದ್ದೆಂದೂ ಹೇಳಿದ್ದಾರೆ.

‘‘ಬೆಳಗು’’ ಎಂಬ ಅರ್ಥ ಕೊಡುವ ‘‘ರುಚ್’’ ಧಾತುವಿನಿಂದ ‘‘ರೋಚತೇಃ ಜ್ವಲತಿ ಕರ್ಮಣಃ’’ ಎಂಬಂತೆ ಈ ವಾಗ್ದೇವತೆಯೇ ‘‘ಗೌರೀಃ’’ ಎಂದೂ ಋ.ಸಂ.1-164ರಲ್ಲಿ ವರ್ಣಿತಳಾಗಿದ್ದಾಳೆ. ‘‘ಸ್ವಕೀಯ ಕಾಂತಿಯಿಂದ ಬೆಳಗುವವಳು’’ ಎಂದು ಅರ್ಥ. ‘‘ಗೌರ’’ ವರ್ಣ ಉಳ್ಳವಳು ಎಂಬುದೂ ಅರ್ಥವಿದೆ. (ನಿರುಕ್ತ 11-40.)

ಇಂತಹ ವಾಗ್ದೇವಿಯು ಶಬ್ದ ಮಾಡುತ್ತಾ, ಸೃಷ್ಟಿ ಮೂಲದ್ರವ್ಯವಾದ ಉದಕಗಳನ್ನು ಸಂಪಾದಿಸಿ, ಒಂದು, ಎರಡು, ನಾಲ್ಕು, ಎಂಟು ಮತ್ತು ಒಂಬತ್ತು ಕಾಲುಗಳನ್ನುಳ್ಳವಳಾಗಿ ಉತ್ಕೃಷ್ಟವಾದ ಪರಮವ್ಯೋಮದಲ್ಲಿ ‘‘ಸಹಸ್ರಾಕ್ಷರೆ’’ಯಾಗಿ, ಸರ್ವವ್ಯಾಪಿನಿಯಾಗಿದ್ದಾಳೆ’’ ಎಂದೂ ವೇದವು ಕೊಂಡಾಡಿದೆ. (ಋ.ಸಂ.1-164) ‘‘ಗೌರೀ’’ ಎಂದರೆ ‘‘ಗರಣಶೀಲಾ, ಶಬ್ದಬ್ರಹ್ಮಾತ್ಮಿಕಾ ವಾಕ್’’ ಎಂಬಂತೆ, ಅವ್ಯಾಕೃತಾವಸ್ಥೆಯಲ್ಲಿ ಅದ್ವಿತೀಯವೂ ಅವಿಭಕ್ತವೂ ಆಗಿ ಏಕಪದಿಯಾಗಿದ್ದು, ನಾಮಪದ, ಕ್ರಿಯಾಪದ ಭೇದಗಳಿಂದ (ಸುಬಂತ ತಿಙಂತಗಳೆಂಬ) ದ್ವಿಪದಿಯಾಗಿ, ನಾಮ, ಆಖ್ಯಾತ, ಉಪಸರ್ಗ, ನಿಪಾತಗಳೆಂಬ ಚತುಷ್ಪದಿಯಾಗಿ, ಎಂಟು ವಿಭಕ್ತಿಗಳೊಡನೆ (ಸಂಬೋಧನೆಯೂ ಸೇರಿ) ಅಷ್ಟಾಪದಿಯಾಗಿ, ಅವಯಯವೂ ಕೂಡಿ ಒಂಬತ್ತಾಗಿ, ನವಪದಿಯಾಗಿ, ಹೃದಯಾಕಾಶವೆಂಬ ಪರಮವ್ಯೋಮದಲ್ಲಿ ಈ ಸೃಷ್ಟಿತತ್ತ್ವವು ಪ್ರತಿಷ್ಠಿತವಾಗಿದೆಯೆಂದು ವ್ಯಾಖ್ಯಾನಕಾರರು ವಿವರಿಸಿದ್ದಾರೆ. (ಬೃಹದಾರಣ್ಯಕ 6-1-2ನ್ನೂ ನೋಡಿ. ಅಕ್ಷರಮಾಲೆಯ ಉತ್ಪತ್ತಿ ಪ್ರಕಾರವು ಮಾರ್ವಿುಕವಾಗಿದ್ದು ಸೃಷ್ಟಿವಿಷಯಕವೂ ಆಗಿದೆ.)

ಅಂದರೆ, ಇಂದಿನ ಸಾಮಾನ್ಯ ಕಲ್ಪನೆಯಂತೆ ‘‘ವಾಗ್ದೇವತೆ’’ ಬರಿಯ ‘‘ಸರಸ್ವತಿ’’ಯಲ್ಲ. ‘‘ಸರಸ್ವತಿ’’ಯೂ ಈ ವಾಗ್ದೇವತೆಯ ಅಂಶ ಮಾತ್ರ. ಮೂಕವಾದ ವನಸ್ಪತಿಗೂ, ವಾಕ್ ಶಕ್ತಿಯುಳ್ಳವರಲ್ಲಿ ಶ್ರೇಷ್ಠವಾಗಿ ವಾಚಸ್ಪತಿ ಎನಿಸಿಕೊಂಡ ಬೃಹಸ್ಪತಿಗೂ ಇರುವ ವಾಙ್ಮೂಲಕವಾದ ತಾರತಮ್ಯವು ಯಾವ ದೇವಿಯಾದ ಸರಸ್ವತಿಯಿಂದ, ಎಂದು, ತಿಳಿದವರು ಹೇಳುವರೋ, ಅಂತಹ ಭಗವತಿಯಾದ ಭಾರತಿಯೇ ಯಾವ ದೇವದೇವಮಹಿಷಿಯಾದ ‘‘ಶ್ರೀ’’ದೇವಿಯ ದಾಸಿಯೋ, ಇಂತಹ ‘‘ಶ್ರೀ’’ಯನ್ನೇ ಪರ್ಯಾಯವಾಗಿ ಈವರೆಗೆ ವಾಗ್ದೇವತೆಯ ರೂಪಕದಲ್ಲಿ ವಿವರಿಸಿದಂತಾಗಿದೆ: ಲೋಕೇ ವನಸ್ಪತಿ ಬೃಹಸ್ಪತಿ ತಾರತಮ್ಯಂ ಯಸ್ಯಾಃ ಪ್ರಸಾದಪರಿಣಾಮಮುದಾಹರಂತಿ | ಸಾ ಭಾರತೀ ಭಗವತೀ ತು ಯದೀಯ ದಾಸೀ ತಾಂ ದೇವದೇವ ಮಹಿಷೀಂ ಶ್ರೀಯಮಾಶ್ರಯಾಮಃ || (ಶ್ರೀಸ್ತವ, ಶ್ರೀವತ್ಸಚಿಹ್ನಮಿಶ್ರರು)

ಈ ತತ್ತ್ವವನ್ನೇ ವಿಷ್ಣುಪುರಾಣದಲ್ಲಿ ‘‘ನಿತ್ಯೆವೈಷಾ ಜಗನ್ಮಾತಾ’’ ಎಂದು ಆರಂಭಿಸಿ; ‘ದೇವತಿರ್ಯಙ್ಮನುಷ್ಯೇಷು ಪುನ್ನಾಮಾ ಭಗವಾನ್ ಹರಿಃ | ಸ್ತ್ರೀನಾಮ್ನೀ ಶ್ರೀಶ್ಚ ವಿಜ್ಞೇಯಾ ನಾನಯೋರ್ವಿದ್ಯತೇ ಪರಮ್ ||’ ಎಂದು ವರ್ಣಿಸಿದೆ. ‘ದೇವತೆಗಳಲ್ಲಿ, ಮನುಷ್ಯರಲ್ಲಿ, ಮೂಕಪ್ರಾಣಿಗಳಲ್ಲಿ ಪುಲ್ಲಿಂಗದಲ್ಲಿ ವ್ಯವಹರಿಸಲ್ಪಡುವುದೆಲ್ಲ ಶ್ರೀಹರಿಯ ಅಂಶಗಳು. ಸ್ತ್ರೀನಾಮಗಳಲ್ಲಿ ವ್ಯವಹರಿಸಲ್ಪಡುವುದೆಲ್ಲ ‘ಶ್ರೀ’ ಅಂಶ. ಇವರಿಬ್ಬರಿಗಿಂತ ಮೇಲ್ಪಟ್ಟ ಇನ್ನೊಂದಿಲ್ಲ.’ ಹೀಗೆ ‘ವಾಗ್ದೇವತೆ’ ಎಂದರೂ, (ಹಿಂದೆ ವಿವರಿಸಿದ ‘ಶ್ರದ್ಧಾ’ದೇವಿಯಂತೆ) ಶ್ರೀದೇವಿಯ ಅಪರಸ್ವರೂಪವೇ ಆಯಿತು. ಮೇಲ್ಕಂಡ ವಿವರಣೆಗಳೆಲ್ಲ ಹೀಗೆ ಹೊಂದಾಣಿಕೆ ಪಡೆದಿರುವುದನ್ನು ಕಾಣಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net