ನಾಳೆ ಸಾವರ್ಕರ್ ಸಭಾಂಗಣ ಉದ್ಘಾಟನೆ - ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ ನಿರ್ಮಾಣ

Published on

ಪುತ್ತೂರು: ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಗೆ ಹೊಸ ಸಭಾಂಗಣದ ಅವಶ್ಯಕತೆಯಿದ್ದು, ಮಾತೃಸಂಸ್ಥೆಯಾದ ವಿವೇಕಾನಂದ ವಿದ್ಯಾವರ್ಧಕ ಸಂಘ ಸುಮಾರು ೩ ಕೋಟಿ ವೆಚ್ಚದಲ್ಲಿ ಸುಸಜ್ಜಿತ ಹವಾನಿಯಂತ್ರಿತ ಸಭಾಂಗಣವನ್ನು ನಿರ್ಮಾಣ ಮಾಡಿದೆ. ಸಾವರ್ಕರ್ ಎಂಬ ಹೆಸರಿಟ್ಟಿರುವ ಸಭಾಂಗಣದ ಉದ್ಘಾಟನೆ ಡಿ.೧೪ರಂದು ಮಧ್ಯಾಹ್ನ ೧೨ಕ್ಕೆ ನಡೆಯಲಿದೆ ಎಂದು ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಟಿ. ಎಸ್. ಹೇಳಿದರು.

ಕಾಲೇಜಿನ ಆರು ಪದವಿ ವಿಭಾಗ ಹಾಗೂ ಎರಡು ಸ್ನಾತಕೋತ್ತರ ವಿಭಾಗದಲ್ಲಿ ಸುಮಾರು ೨ ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ನೀಡಲಾಗುತ್ತಿದ್ದು, ಸಮಾಜಕ್ಕೆ ಒಳಿತನ್ನು ಮಾಡುವ ರಾಷ್ಟ್ರಾಭಿಮಾನವನ್ನು ತುಂಬುವ ಕಾರ್ಯ ಮಾಡಲಾಗುತ್ತಿದೆ. ಉತ್ತಮ ಫಲಿತಾಂಶವನ್ನು ದಾಖಲಿಸುತ್ತಿರುವ ಸಂಸ್ಥೆಯಲ್ಲಿ ಪ್ರತಿಷ್ಠಿತ ಕಂಪನಿಗಳಿಂದ ನೇಮಕಾತಿಯೂ ನಡೆಯುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ. ಶ್ಯಾಮ್ ಭಟ್ ಉದ್ಘಾಟಿಸಲಿದ್ದು, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ, ಪದ್ಮಶ್ರೀ ಪುರಸ್ಕೃತ ಸೇತುಬಂಧು-ಬ್ರಿಜ್ ಮ್ಯಾನ್ ಆಫ್ ಇಂಡಿಯಾ ಖ್ಯಾತಿಯ ಗಿರೀಶ್ ಭಾರದ್ವಾಜ್, ಸಿಂಗಾಪುರ ಸ್ವಿಸ್ ಓವರ್‌ಸೀಸ್ ಎಂಟರ್‌ಪ್ರೈಸಸ್ ಮಾಜಿ ಅಧ್ಯಕ್ಷ ಚಂದ್ರಕಾಂತ್ ರಾವ್ ಐ. ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.

ಆಡಳಿತ ಮಂಡಳಿಯ ಕೋಶಾಽಕಾರಿ ಮುರಳೀಧರ ಭಟ್, ನಿರ್ದೇಶಕ ರವಿಕೃಷ್ಣ ಡಿ. ಕಲ್ಲಾಜೆ, ಪ್ರಾಂಶುಪಾಲ ಡಾ. ಮಹೇಶ್ ಪ್ರಸನ್ನ ಕೆ., ಮಾಧ್ಯಮ ವಿಭಾಗದ ಸಹ ಸಂಯೋಜಕ ಹರಿಪ್ರಸಾದ್ ಡಿ ಉಪಸ್ಥಿತರಿದ್ದರು.

ಕಾರಂಜಿ ಹಸ್ತಾಂತರ

ದಿ. ಜಿ.ಎಲ್. ಆಚಾರ್ಯ ಅವರ ೧೦೦ನೇ ಜನ್ಮದಿನಾಚರಣೆಯ ಸವಿ ನೆನಪಿಗಾಗಿ ಕಾಲೇಜಿನ ಮುಂಭಾಗದಲ್ಲಿ ನಿರ್ಮಾಣ ಮಾಡಿರುವ ಕಾರಂಜಿಯ ಹಸ್ತಾಂತರ ನಡೆಯಲಿದೆ. ಇದರ ಉದ್ಘಾಟನೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಬಲರಾಮ ಆಚಾರ್ಯ ನಡೆಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net