ಕನ್ನಡಿ ಅಳವಡಿಕೆಯಿಂದ ಬದಲಾದೀತೆ ವಾಸ್ತು ಪ್ರಭಾವ?

ವಾಸ್ತುಶಾಸ್ತ್ರ
ವಾಸ್ತುಶಾಸ್ತ್ರ
Published on

ಹೆಚ್ಚು ಚರ್ಚಿತ ವಿಷಯ ಕನ್ನಡಿ: ವಾಸ್ತು ಸಲಹೆ, ಅಳವಡಿಕೆ ಹಿನ್ನೆಲೆಯಲ್ಲಿ ಹೆಚ್ಚು ಚರ್ಚಿತವಾಗುವ ವಸ್ತು ಕನ್ನಡಿ ಅಥವಾ ದರ್ಪಣ (ಮಿರರ್). ಮನೆಯಲ್ಲಿ ಕನ್ನಡಿಯನ್ನು ಅಳವಡಿಸುವ ಬಗ್ಗೆ ವಾಸ್ತು ಸಂಬಂಧವಾಗಿ ಪ್ರಾಯೋಗಿಕವಾಗಿ ಮತ್ತು ಅಪ್ರಯೋಗಿಕವಾಗಿ ಚರ್ಚೆಗಳು ನಡೆಯುತ್ತಲೇ ಇರುತ್ತದೆ. ಆದರೆ ಕಟ್ಟಡದ ಯಾವುದೇ ದಿಕ್ಕಿನಲ್ಲಿ ಅಳವಡಿಸಿದರೂ ಅದರಿಂದ ವಾಸ್ತು ಪ್ರಭಾವ ನಿರ್ಣಯವಾಗುವುದಿಲ್ಲ. ಆದರೆ ಮನೆಯ ಬಾಲ್ಕನಿ ಅಥವಾ ಕಟ್ಟಡದ ಹೊರಭಾಗದಲ್ಲಿ ಅಳವಡಿಸುವ ಕನ್ನಡಿಗಳಿಂದ ಲಾಭ-ನಷ್ಟದ ಪ್ರಭಾವ ಇದೆ. ಈ ರೀತಿ ಕಟ್ಟಡದ ಹೊರಗೆ ಅಳವಡಿಸುವ ದರ್ಪಣದಿಂದ ವಾಸ್ತು ಸುಧಾರಣೆ ಮಾಡಿ ಮನೆಯೊಳಗಿನ ಚಟುವಟಿಕೆಗೆ ಅಗತ್ಯವಿರುವ ಚೈತನ್ಯ ಹೆಚ್ಚಿಸಲು ಸಾಧ್ಯವಿದ್ದು, ಅಂತಹ ಸಾಕಷ್ಟು ಉದಾಹರಣೆಗಳು ನಮ್ಮಲ್ಲಿವೆ.

ಹೊರಗಿನ ಪರಿಸರದ ಚರ್ಚೆ ಅಪ್ರಸ್ತುತ: ಮನೆ ಅಥವಾ ನಿವೇಶನದ ಎದುರಿಗೆ ಮೂರು ರಸ್ತೆ ಕೂಡಿದ್ದರೆ, ಅದಕ್ಕೆ ವಾಸ್ತು ಸಂಬಂಧವನ್ನು ಕಲ್ಪಿಸುತ್ತಾರೆ. ಆದರೆ ನಿವೇಶನದ ಹೊರಗಿನ ರಸ್ತೆ ಅಥವಾ ದಾರಿಗೂ ಮನೆಯೊಳಗಿನ ವಾಸ್ತುಗೂ ಸಂಬಂಧವಿಲ್ಲ. ಹೊರಗೆ 1, 2, 3 ಎಷ್ಟೇ ರಸ್ತೆ ಹಾದು ಹೋಗಿದ್ದರೂ, ಮನೆಯೊಳಗಿನ ವಿನ್ಯಾಸವನ್ನು ವಾಸ್ತುಶುದ್ಧವಾಗಿ ಯಾವುದೇ ದುಷ್ಪರಿಣಾಮವಿಲ್ಲದಂತೆ ರೂಪಿಸಲು ಸಾಧ್ಯ. ಆಂಧ್ರ, ತೆಲಂಗಾಣದಲ್ಲಿ ಇಂತಹ ಹಲವು ಯೋಜನೆಗಳನ್ನು ಯಶಸ್ವಿಯಾಗಿ ಮಾಡಿದ್ದೇವೆ.

ವಾಸದ ಮನೆಯ ಆಸುಪಾಸಿನಲ್ಲಿ ಮಠ-ಮಂದಿರ ಅಥವಾ ಧಾರ್ವಿುಕ ಸ್ಥಳಗಳಿದ್ದರೆ ಅದರ ಪ್ರಭಾವ ಆ ನಿವೇಶನ ಅಥವಾ ಮನೆಯ ಮೇಲೆ ಆಗುತ್ತದೆ ಎಂಬ ತಪು್ಪ ಕಲ್ಪನೆ ಹಲವರಲ್ಲಿದೆ. ಆದರೆ ವಾಸ್ತವದಲ್ಲಿ ವಾಸ್ತುಶಾಸ್ತ್ರದ ಪ್ರಕಾರ ಅದರಿಂದ ಯಾವ ಸತ್ಪರಿಣಾಮ ಅಥವಾ ದುಷ್ಪರಿಣಾಮಗಳು ಇರುವುದಿಲ್ಲ. ನಿಗದಿತ ನಿವೇಶನದೊಳಗಿನ ವಾಸ್ತು ವಿನ್ಯಾಸವನ್ನು ಸಮರ್ಪಕವಾಗಿ ಮಾಡಿ ಅಲ್ಲಿ ನಿರ್ವಣವಾಗುವ ಕಟ್ಟಡದಲ್ಲಿ ಯಾವುದೇ ನೋವು-ನಷ್ಟಗಳಿಲ್ಲದಂತೆ ವಾಸ ಮಾಡಲು ಸಾಧ್ಯವಿದೆ.

ದಿಕ್ಕುಗಳ ಬಗ್ಗೆ ಸರಿಯಾದ ತಿಳಿವಳಿಕೆ ಅಗತ್ಯ: ಸಾಮಾನ್ಯವಾಗಿ ವಾಸ್ತು ಎಂದ ತಕ್ಷಣ ದಿಕ್ಕುಗಳ ಬಗ್ಗೆ ಹೆಚ್ಚು ಚರ್ಚೆಗಳಿರುತ್ತವೆ. ಒಂದು ದೃಷ್ಟಿಯಲ್ಲಿ ಅದು ಸರಿ ಕೂಡಾ. ಆದರೆ ದಿಕ್ಕುಗಳ ಬಗ್ಗೆ ಸರಿಯಾದ ತಿಳಿವಳಿಕೆ ಅಗತ್ಯ. ಮನೆಯಲ್ಲಿ ವಾಸಿಸುವ ವ್ಯಕ್ತಿಗಳು ಎಚ್ಚರವಾಗಿದ್ದಾಗ ಒಂದೇ ಸ್ಥಳದಲ್ಲಿ ಹೆಚ್ಚುಕಾಲ ಇರುವುದಿಲ್ಲ. ಆದರೆ ರಾತ್ರಿ ವೇಳೆ ವಿಶ್ರಾಂತಿ ಪಡೆಯುವಾಗ 6 ರಿಂದ 8 ತಾಸು ಒಂದೇ ಸ್ಥಳದಲ್ಲಿ ಮಲಗಿರುತ್ತಾರೆ. ಆದ್ದರಿಂದ ವ್ಯಕ್ತಿ ಮಲಗುವ ದಿಕ್ಕು ವಾಸ್ತುಶಾಸ್ತ್ರದಲ್ಲಿ ಆತನ ಆರೋಗ್ಯಕ್ಕೆ ನೇರ ಸಂಬಂಧವನ್ನು ಸೂಚಿಸಿದೆ.

ಹಿಂದಿನ ಕಾಲದಲ್ಲಿ ಯಾವುದೇ ವ್ಯಕ್ತಿ ತನ್ನ ಕೊನೇ ಘಳಿಗೆಯಲ್ಲಿ ಒದ್ದಾಡುತ್ತಿದ್ದರೆ; ವೈದ್ಯರು ಅವರನ್ನು ಪರೀಕ್ಷಿಸಿ ಉತ್ತರ - ದಕ್ಷಿಣ ದಿಕ್ಕಿಗೆ ಮಲಗಿಸುತ್ತಿದ್ದರು. ಇದರರ್ಥ ಅವರಿನ್ನು ಮೇಲೇಳುವುದಿಲ್ಲ ಎಂದು. ಆತನ ರಕ್ತದಲ್ಲಿನ ಕಬ್ಬಿಣಾಂಶವನ್ನು ಗುರುತ್ವಾಕರ್ಷಣೆ ಶಕ್ತಿ ಏರುಗತಿಯಲ್ಲಿ ಸೆಳೆದು ಆತ ಕೊನೆಯುಸಿರೆಳೆಯುತ್ತಿದ್ದ. ಆದರೆ ಆರೋಗ್ಯವಂತನಾಗಿ, ದೀರ್ಘಾಯುವಾಗಿ ಇರಬೇಕಾದ ವ್ಯಕ್ತಿ ಕಡ್ಡಾಯವಾಗಿ ಉತ್ತರ-ದಕ್ಷಿಣಾಭಿಮುಖವಾಗಿ ಮಲಗದೆ, ಪೂರ್ವ ಅಥವಾ ಪಶ್ಚಿಮಾಭಿಮುಖವಾಗಿ ಮಲಗಬೇಕು.

ಯಾರು ಯಾವುದೇ ವಾಸ್ತು ಸಲಹೆಯನ್ನು ದಿಕ್ಕರಿಸಿದರೂ ತಮ್ಮ ಮನೆಯ ಈಶಾನ್ಯಕ್ಕೆ ದೇವರ ಮನೆ ಮಾಡಬೇಕೆಂದು ಬಯಸುತ್ತಾರೆ. ಇದು ಅತ್ಯಂತ ಗಂಭೀರ ಸಮಸ್ಯೆಗೆ ಕಾರಣವಾಗುತ್ತದೆ. ಯಾಕೆಂದರೆ ಉತ್ತರ-ಪೂರ್ವದಿಂದ ಬರುವ ಬೇಸಿಗೆ ಕಾಲದ ಸೂರ್ಯನ ನೇರಳೆ ಕಿರಣಗಳು ಮನೆಯೊಳಗೆ ಬರುವುದನ್ನು ಪೂಜಾಮಂದಿರದ ಗೋಡೆಗಳು ತಡೆಗಟ್ಟುತ್ತವೆ. ಆ ಕಿರಣಗಳು ಮನೆಯೊಳಗಿರುವವರ ದೇಹದ ಮೇಲೆ ಬಿದ್ದಾಗ ಕ್ಯಾಲ್ಸಿಪೆರೋಲ್ ಎಂಬ ಹಾರ್ವೆನ್ ಸೃಷ್ಟಿಯಾಗಿ, ಇದು ವಿಟಮಿನ್-ಡಿ ಉತ್ಪತ್ತಿಗೆ ಕಾರಣವಾಗುತ್ತದೆ.

ಇದರಿಂದ ಆತನ ಮಿದುಳು ಚುರುಕಾಗುತ್ತದೆ. ಹಾಗೂ ಆತನ ಆರೋಗ್ಯಕ್ಕೂ ಸಹಾಯವಾಗುತ್ತದೆ. ಆ ಕಿರಣಗಳ ನಷ್ಟದಿಂದ ಆರೋಗ್ಯ ಹದಗೆಡುವುದಷ್ಟೇ ಅಲ್ಲದೆ ಆತನ ಮಾನಸಿಕ, ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ. ಒಂದು ದೃಷ್ಟಿಯಿಂದ ಇಡೀ ಮನೆಯ ನೆಮ್ಮದಿ ಇದರಿಂದ ಹಾಳಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net