

ಬೆಂಗಳೂರು:
ಎಂದೂ ಹಮ್ಮು ಬಿಮ್ಮಿನಿಂದ ಬೀಗದ ಅಪ್ಪಟ ತುಂಬಿದ ಕೊಡದಂತೆ ನಡೆದುಕೊಂಡ ವಸಂತ ನಾಡಿಗೇರ್ ಅವರು ಒಬ್ಬ ಸಜ್ಜನ ಹಿರಿಯ ಪತ್ರಕರ್ತರಾಗಿ ಸುದ್ದಿ ಮನೆಯಲ್ಲಿ ಅಚ್ಚಳಿಯದ ನೆನಪಿನ ಬುತ್ತಿ ಬಿಟ್ಟು ಹೋಗಿದ್ದಾರೆ. ಸುದ್ದಿಗಳಿಗೆ ತಲೆಬರಹ ಕೊಡುವುದರಲ್ಲಿ ಅವರಿಗೆ ಸರಿಸಾಟಿ ಯಾರಿರಲಿಲ್ಲ. ಅವರ ವೃತ್ತಿ ಬದುಕಿನ ಒಡನಾಟಗಳು ಯುವ ಪೀಳಿಗೆಗೆ ಆದರ್ಶವಾಗಲಿ ಎಂದು ಹಿರಿಯ ಪತ್ರಕರ್ತರು ಆಶಿಸಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಮತ್ತು ಕಿರಿಯ ಸಹೋದ್ಯೋಗಿಗಳು ಮತ್ತು ವೃತ್ತಿ ಬಾಂಧವರು ಅವರ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿದರು.
ವಸಂತ ನಾಡಿಗೇರರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಬಳಿಕ ಅವರ ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸಿದ ಬಳಿಕ ಗಣ್ಯರು ಮಾತನಾಡಿದರು.
ಶೀರ್ಷಿಕೆಯ ಮಾಂತ್ರಿಕ ನಾಡಿಗೇರ್
ವಿಜಯ ಕರ್ನಾಟಕ ದಿನಪತ್ರಿಕೆ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ ಮಾತನಾಡಿ, ನಾಡೀಗೇರ್ ಅವರು ತಮ್ಮ ಕಿರಿಯ ಸಹೋದ್ಯೋಗಿಗಳಿಗೆ ಅಚ್ಚುಮೆಚ್ಚಿನ ಮಾರ್ಗದರ್ಶಕರಾಗಿದ್ದರು, ವೃತ್ತಿ ಸಂಸ್ಥೆಗಳಲ್ಲಿ ಅವರು ತೋರುತ್ತಿದ್ದ ತಾಳ್ಮೆ ಮತ್ತು ಸಂಯಮವು ನಿಜಕ್ಕೂ ಅನುಕರಣೀಯ ಎಂದರು.
ನಾಡಿಗೇರರು ಪತ್ರಿಕೋದ್ಯಮದಲ್ಲಿ ಸೃಷ್ಟಿಸಿದ್ದ ಅತ್ಯಾಕರ್ಷಕ ಶೀರ್ಷಿಕೆಗಳು ಅವರ ಚಾಕಚಕ್ಯತೆಗೆ ಹಿಡಿದ ಕೈಗನ್ನಡಿ. ಒಂದು ರೀತಿಯಲ್ಲಿ ಶೀರ್ಷಿಕೆಯ ಮಾಂತ್ರಿಕತೆ ಅವರಲ್ಲಿತ್ತು. ಭಾಷೆಯ ಮೇಲಿದ್ದ ಅಗಾಧ ಪ್ರಭುತ್ವದಿಂದಾಗಿ ಕನ್ನಡ ಪತ್ರಿಕೋದ್ಯಮಕ್ಕೆ ಅವರಿಂದ ಬಹುಮುಖ್ಯ ಕೊಡುಗೆ ಲಭಿಸಿದೆ ಎಂದು ಹೇಳಿದರು.
ಸರಳ ಸಜ್ಜನಿಕೆ ವ್ಯಕ್ತಿತ್ವ
’ಕಸ್ತೂರಿ’ ಮಾಸಪತ್ರಿಕೆಯ ಸಂಪಾದಕಿ ಶಾಂತಲಾ ಧರ್ಮರಾಜ್ ಮಾತನಾಡಿ, ಸರಳ ಮತ್ತು ಸಜ್ಜನ ವ್ಯಕ್ತಿತ್ವವನ್ನು ವಸಂತ ನಾಡಿಗೇರರು ಮೈಗೂಡಿಸಿಕೊಂಡಿದ್ದರು, ಅವರು ಪತ್ರಿಕಾ ಸಂಸ್ಥೆಗಳಲ್ಲಿರುವ ಪತ್ರಕರ್ತರ ನಡುವೆ ಒಗ್ಗಟ್ಟನ್ನು ಕಾಯ್ದುಕೊಂಡಿದ್ದರಲ್ಲದೇ, ಅವರು ದುಡಿದ ಪತ್ರಿಕಾ ಸಂಸ್ಥೆಗಳಲ್ಲಿ ಸಂಪರ್ಕ ಸೇತುವೆಯಂತೆ ಕಾರ್ಯನಿರ್ವಹಿಸಿದ್ದರು ಎನ್ನುವುದನ್ನು ಘಟನೆಗಳ ಸಹಿತ ನೆನಪಿಸಿದರು.
ಕೆಯುಡಬ್ಲೂೃಜೆ ದತ್ತಿನಿಧಿ ಪ್ರಶಸ್ತಿ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆ.ಯೂ.ಡಬ್ಲ್ಯೂ.ಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ವಸಂತ ನಾಡಿಗೇರರು ಕನ್ನಡ ಪತ್ರಿಕೋದ್ಯಮದಲ್ಲಿ ವಿಭಿನ್ನ ವ್ಯಕ್ತಿತ್ವವನ್ನು ಮೈಗೂಡಿಸಿ ಸದಾ ವೃತ್ತಿ ಬದ್ಧತೆಯನ್ನು ಮೆರೆದವರು. ಪ್ರಾರಂಭದ ದಿನಗಳಲ್ಲಿ ವಿಜಯ ಕರ್ನಾಟಕ ರೂಪಿಸುವಲ್ಲಿ ಅವರ ಪಾತ್ರವೂ ದೊಡ್ಡದಿದೆ ಎಂದರು.
ನಾಡಿಗೇರ್ ಅವರ ವೃತ್ತಿ ಸೇವೆಯನ್ನು ಸ್ಮರಿಸಿ ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್.ವಿ.ಜಯಶೀಲರಾವ್ ಹೆಸರಿನ ಕೆಯುಡಬ್ಲೂೃಜೆ ದತ್ತಿನಿಧಿ ಪ್ರಶಸ್ತಿಯನ್ನು ಅವರಿಗೆ ಪ್ರದಾನ ಮಾಡಲಾಗಿತ್ತು. ಕೆಯುಡಬ್ಲೂೃಜೆ ಜೊತೆಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದರು ಎಂದು ನೆನಪಿಸಿಕೊಂಡರು.
ಅಪರೂಪದ ವ್ಯಕ್ತಿತ್ವ
ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷೆ ಆಯೀಷಾ ಖಾನಂ ಮಾತನಾಡಿ, ಮರೆಯಲಾಗದ ಅಪರೂಪದ ವ್ಯಕ್ತಿತ್ವ ವಸಂತ ನಾಡಿಗೇರ ಅವರದಾಗಿತ್ತು. ಅವರ ಅಗಲಿಕೆಯು ಕನ್ನಡ ಪತ್ರಿಕೋದ್ಯಮಕ್ಕೆ ತುಂಬಲಾರದ ನಷ್ಟ ಎಂದರು.
ಹಿರಿಯ ಪತ್ರಕರ್ತ ಶ್ರೀಧರ ನಾಯಕ್, ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ, ಸಂಯುಕ್ತ ಕರ್ನಾಟಕ ಪತ್ರಿಕೆಯ ಕೆ.ವಿ. ಪರಮೇಶ್, ಕವಿ-ಪವಿ ಸಂಘಟನೆಯ ಹಾಲಸ್ವಾಮಿ, ರಾಣಿಬೆನ್ನೂರಿನ ಶಿವಯೋಗಿ ಮಹಾನುಭಾವಿಮಠ ಮುಂತಾದವರು ವಸಂತ ನಾಡಿಗೇರರ ಅಪರೂಪದ ವ್ಯಕ್ತಿತ್ವ ಕುರಿತು ಮಾತನಾಡಿದರು.
ಸಮಾರಂಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ, ಖಜಾಂಚಿ ವಾಸುದೇವ ಹೊಳ್ಳ, ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಪದ್ಮ ಶಿವಮೊಗ್ಗ, ಬೆಂಗಳೂರು ನಗರ ಘಟಕದ ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರೆಕಟ್, ಪದಾಧಿಕಾರಿಗಳಾದ ಎಚ್.ಕೆ.ಬಸವರಾಜ್, ಎ.ಬಿ. ಶಿವರಾಜ್, ಶಶಿಕಲಾ, ವಿಜಯ ಕರ್ನಾಟಕ ದಿನಪತ್ರಿಕೆಯ ಸಂಪಾದಕೀಯ ವಿಭಾಗದ ರಾಜೀವ್, ರಾಜ್ಯ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಶಂಭುಲಿಂಗ ಸೇರಿದಂತೆ ಹಲವಾರು ಹಿರಿಯ-ಕಿರಿಯ ಪತ್ರಕರ್ತರು ವಸಂತ ನಾಡಿಗೇರ್ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿದ್ದರು.