

ಚಿಕ್ಕಮಗಳೂರು: ನಗರಸಭೆಯ ಅಧಿಕಾರಿಗಳು ಶುಕ್ರವಾರ ನಗರದಲ್ಲಿ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿ ಸುಮಾರು 600 ಕೆಜಿ ಪ್ಲಾಸ್ಟಿಕ್‌ನ್ನು ವಶಪಡಿಸಿಕೊಂಡರು.
ನಗರದ ಎಂಜಿ ರಸ್ತೆ, ಐಜಿ ರಸ್ತೆಯ ಅಂಗಡಿಗಳ ಮೇಲೆ ದಾಳಿ ನಡೆಸಿ ಅಂಗಡಿಗಳಲ್ಲಿ ಇದ್ದ ಪ್ಲಾಸ್ಟಿಕ್‌ನ್ನು ವಶಪಡಿಸಿಕೊಂಡಿದ್ದಾರೆ. ಚಿಕ್ಕಮಗಳೂರು ನಗರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ಕ್ರಮಕೈಗೊಂಡಿದ್ದು, ಈ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಿದರೂ ವರ್ತಕರು ಕದ್ದು ಮುಚ್ಚಿ ಪ್ಲಾಸ್ಟಿಕ್ ಮಾರಾಟ ಮಾಡಿದರೆ ಹೇಗೆ. ವರ್ತಕರಿಗೆ ಕೊನೆ ಅವಕಾಶ ನೀಡಲಾಗಿದ್ದು, ಇನ್ನು ಮುಂದೆ ಬಳಕೆ ಮಾಡುವ ಗ್ರಾಹಕರಿಗೂ ದಂಡ ವಿಧಿಸಲಾಗುವು ಎಂದು ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಎಚ್ಚರಿಕೆ ನೀಡಿದರು.
ನಗರದ ವಿವಿಧ ಸ್ಟೋರ್‌ಗಳಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ನಗರಸಭೆಗೆ ದೂರು ಬಂದಿತ್ತು, ಮಾಹಿತಿ ಆಧರಿಸಿ ನಗರಸಭೆಯಿಂದ ದಾಳಿ ಮಾಡಿ ಸುಮಾರು 600 ಕೆ.ಜಿ ಪ್ಲಾಸ್ಟಿಕ್‌ನ್ನು ವಶಪಡಿಸಿಕೊಳ್ಳಲಾಗಿದೆ. ಪ್ಲಾಸ್ಟಿಕ್ ಮಾರಾಟ ಮಾಡಿದರೆ ವರ್ತಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಅಂಗಡಿ ಪರವಾನಗಿ ರದ್ದು ಮಾಡಲಾಗುವುದು ಎಂದು ಹೇಳಿದರು.
ನಗರಸಭೆ ಪೌರಾಯುಕ್ತ ಬಿ.ಸಿ ಬಸವರಾಜ್ ಮಾತನಾಡಿ, ಎಂ.ಜಿ ರಸ್ತೆಯಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡದಂತೆ ಅರಿವು, ಜಾಗೃತಿ ಮೂಡಿಸಲಾಗಿದೆ. ಹಲವು ಬಾರಿ ಜಾಗೃತಿ ಜಾಥಾಗಳನ್ನು ನಡೆಸಲಾಗಿದೆ. ನಗರಸಭೆಗೆ ಸವಾಲಾಗಿ ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದರು.