ಎಂಐಟಿ ವಿದ್ಯಾರ್ಥಿಗಳಿಂದ ವಿವಿಧ ಆವಿಷ್ಕಾರ

college Experiment
Published on

ನಂಜನಗೂಡು: ತಾಲೂಕಿನ ತಾಂಡವಪುರ ಎಂಐಟಿ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಏಡಿ ಹಾಗೂ ಕೋಳಿಮೊಟ್ಟೆಯ ಚಿಪ್ಪಿನಿಂದ ತಯಾರಿಸಿದ ಪೌಡರ್‌ನಿಂದ ಎಲೆಕ್ಟ್ರಿಕ್ ವಾಹನಗಳ ಬಾಡಿ ಫ್ರೇಮ್, ನೀರೆತ್ತುವ ಕೈಪಂಪ್, ಸಿಎನ್‌ಸಿ ಮಿಲ್ಲಿಂಗ್ ಯಂತ್ರ, ಡ್ರೈನೇಜ್ ಕ್ಲೀನಿಂಗ್ ಯಂತ್ರ, ಸೌರ ವಿದ್ಯುತ್ ಬಳಕೆಯ ಉಳುಮೆ ಯಂತ್ರಗಳನ್ನು ಅವಿಷ್ಕರಿಸಿದ್ದಾರೆ.

ಈ ಸಂಬಂಧ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳು ತಯಾರಿಸಿರುವ ಯಂತ್ರಗಳ ಪ್ರಾತ್ಯಕ್ಷಿಕೆ ಆಯೋಜಿಸಲಾಗಿತ್ತು. ನಂತರ ವಿದ್ಯಾರ್ಥಿಗಳ ಮಾಡಿರುವ ಆವಿಷ್ಕಾರಗಳ ಬಗ್ಗೆ ಕಾಲೇಜಿನ ಪ್ರಾಂಶುಪಾಲ ವೈ.ಟಿ.ಕೃಷ್ಣೇಗೌಡ ಮಾಹಿತಿ ನೀಡಿದರು.

ಏಡಿ ಹಾಗೂ ಕೋಳಿಮೊಟ್ಟೆಯ ಚಿಪ್ಪಿನಿಂದ ತಯಾರಿಸಿರುವ ಕ್ರಾಪ್ಟಲ್ ಪೌಡರ್ ಹಗುರ ಹಾಗೂ ಧೃಡವಾಗಿದ್ದು, ಇದನ್ನು ಎಲೆಕ್ಟ್ರಿಕ್ ವಾಹನಗಳ ಬಾಡಿ ಪ್ರೇಮ್ ತಯಾರಿಕೆಗೆ ಬಳಸಬಹುದಾಗಿದೆ. ವಿದ್ಯುತ್ ಬಳಸದೆ ಕೈಪಂಪ್ ಬಳಸಿ ಕೃಷಿ ಹೊಂಡ, ಬಾವಿಯಿಂದ 3 ಇಂಚಿನವರೆಗೆ ನೀರನ್ನು ಪಂಪ್ ಮಾಡಬಹುದಾಗಿದೆ. ಸಿಎನ್‌ಸಿ ಮಿಲ್ಲಿಂಗ್ ಯಂತ್ರ ಮರದ ವಿವಿಧ ಮಾದರಿಯ ಉಪಕರಣ ತಯಾರಿಕೆಗೆ ಸೂಕ್ತವಾಗಿದೆ. ಮುಖ್ಯವಾಗಿ ಸೌರ ಶಕ್ತಿಯಿಂದ ಚಲಿಸುವ ಉಳುಮೆ ಯಂತ್ರ ರೈತರ ಉಳುಮೆ, ನಾಟಿ ಮುಂತಾದ ಕೃಷಿ ಕೆಲಸಗಳಿಗೆ ಬಳಸಬಹುದಾಗಿದೆ. ಅಲ್ಲದೆ ಉಳುಮೆ ಯಂತ್ರಕ್ಕೆ ಸೌರಶಕ್ತಿ ಫಲಕ ಅಳವಡಿಸಲಾಗಿದ್ದು, ಸೌರಶಕ್ತಿಯಿಂದ ಬ್ಯಾಟರಿ ಚಾರ್ಚ್ ಆಗಿ ಸತತವಾಗಿ 25 ಎಕರೆ ಪ್ರದೇಶದಲ್ಲಿ ಉಳುಮೆ ಮಾಡಬಹುದಾಗಿದೆ ಎಂದು ವಿವರಿಸಿದರು.
ಇನ್ನು ಡ್ರೈನೇಜ್ ಕ್ಲಿನಿಂಗ್ ಯಂತ್ರ ಏರಿ ನೀರಿನ ಘನತ್ಯಾಜ್ಯವನ್ನು ಬೇರ್ಪಡಿಸಿ ತ್ಯಾಜ್ಯವನ್ನು ಬಕೇಟ್‌ಗಳಲ್ಲಿ ಸಂಗ್ರಹಿಸುತ್ತದೆ. ಪೌರ ಕಾರ್ಮಿಕರು ದೈಹಿಕ ಶ್ರಮ ಬಳಸಿ ಡ್ರೈನೇಜ್ ಶುಚಿಗೊಳಿಸುವಾಗ ,ಕೊಳಚೆ ನೀರಿನ ಸಂಪರ್ಕದಿಂದ ಉಂಟಾಗುವ ಸೋಂಕು ರೋಗಗಳಿಂದ ಅವರನ್ನು ರಕ್ಷಿಸುತ್ತದೆ ಎಂದು ಹೇಳಿದರು.

ಹೊಸ ಬಹುಪಯೋಗಿ ಯಂತ್ರಗಳನ್ನು ಅವಿಷ್ಕರಿಸಿದ ಕಾಲೇಜಿನ ಮೆಕ್ಯಾನಿಕ್ ವಿಭಾಗದ ವಿದ್ಯಾರ್ಥಿಗಳಾದ ಪ್ರಮೋದ್,ವೈ.ಕೆ.ದರ್ಶನ್,ಅಮೃತ್ ಗೌಡ, ಎಂ.ನಂದಿಶ್, ರಾಘವೇಂದ್ರ, ಮಂಜುನಾಥ್, ಸುಪರ್ಣ, ಚಂದ್ರಶೇಖರ್, ಅಖಿಲ,ಪ್ರಜ್ವಲ್, ಕುಮಾರ್, ರವಿಶಂಕರ್, ಸುಜಯ್, ಎನ್.ಎಂ.ಪೊನ್ನಣ್ಣ, ಮೆಹಮ್ಮದ್ ಅಬುತಲ ಹಾಗೂ ಮಾರ್ಗದರ್ಶಕರಾದ ಪ್ರೊ.ಟಿ.ಕೆ.ವೆಂಟಟೇಗೌಡ,ಪ್ರೊ.ಕೆ.ಎಸ್.ಕೃಪೇಶ್, ಪ್ರೊ.ಮಲ್ಲಿಕಾರ್ಜುನ್, ಪ್ರೊ.ಕೆ.ಅಜಯ್ ಕುಮಾರ್ ಅವರನ್ನು ಎಂಐಟಿ ಸಂಸ್ಥೆಯು ಅಭಿನಂದಿಸುತ್ತದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net