

ಮುಖ್ಯವಾಗಿ ಪಾಶ್ಚಾತ್ಯ ಚಿಂತಕರಲ್ಲಿ ಎರಡು ರೀತಿಯ ಮಾನವತಾ ವಾದಗಳನ್ನು ಗುರುತಿಸಬಹುದು. ಒಂದು ದೇವತಾಶಾಸ್ತ್ರ (Theology)ವನ್ನು ಆಧರಿಸಿದ ಧಾರ್ವಿುಕ ಮಾನವತಾವಾದ. ಇದು ಮುಖ್ಯವಾಗಿ ದೇವರು, ಧರ್ಮ, ಸ್ವರ್ಗ ಇವುಗಳನ್ನು ಆಧರಿಸಿದೆ. ಎರಡನೇಯದು ಲೌಕಿಕ ಮಾನವತಾವಾದ. ಇದು ಮೂಲತಃ ಸ್ವರೂಪದಲ್ಲಿ ಲೌಕಿಕವಾಗಿದೆ. ದೇವರು, ಧರ್ಮ, ಸ್ವರ್ಗ, ಆತ್ಮ ಇತ್ಯಾದಿ ಧಾರ್ವಿುಕ ಮತ್ತು ಆಧ್ಯಾತ್ಮ ತತ್ತ್ವಗಳನ್ನು ಅದು ಒಪ್ಪುವುದಿಲ್ಲ. ಮಾನವನ ಬೆಳವಣಿಗೆಗೆ ಧರ್ಮವು ಸಹಕಾರಿ ಎಂದು ಅವರು ನಂಬುವುದಿಲ್ಲ. ಆದರೆ ಕಾರ್ಲಿಸ್ ಲಾಮೆಂಟೆನು ಪ್ರತಿಪಾದಿಸಿದ ಮಾನವತಾವಾದವು ನೈಸರ್ಗಿಕ ಧರ್ಮವನ್ನು ಒಪ್ಪುತ್ತದೆ.
ಯಾವುದೇ ಅತೀಂದ್ರಿಯ ಶಕ್ತಿಗಳನ್ನು, ವಿಧಿವಾದವನ್ನು ಅದು ಒಪ್ಪುವುದಿಲ್ಲ. ಮಾನವನು ಪ್ರಕೃತಿಯಿಂದ ವಿಕಸಿತನಾದ ಅದ್ಭುತ ಜೀವಿ. ಮಾನ ವತಾವಾದವು ಮನುಷ್ಯನು ತಾನು ಬೇಕಾದುದನ್ನು ಸಾಧಿಸಿಕೊಳ್ಳಬಲ್ಲ ಶಕ್ತಿಯಿದೆ ಎಂದು ನಂಬಿರುತ್ತದೆ. ವ್ಯಕ್ತಿಯ ಶ್ರೇಯಸ್ಸು ಮತ್ತು ಸಮಾಜದ ಸಾಮರಸ್ಯ ಬೆಳವಣಿಗೆಗೆ ಮಾನವತಾವಾದವು ಅತ್ಯಂತ ಸಹಕಾರಿ ಎಂದು ತನ್ನ ಮಾನವತಾವಾದದ ಸಿದ್ಧಾಂತದಲ್ಲಿ ತಿಳಿಸುತ್ತಾನೆ. ಇದಲ್ಲದೆ ವೈಜ್ಞಾನಿಕ ಮಾನವತಾವಾದ, ವಿಚಾರವಾದ ಮಾನವತಾವಾದ, ಇತ್ಯಾದಿ ಪ್ರಭೇದಗಳನ್ನು ಪಾಶ್ಚಾತ್ಯ ಚಿಂತಕರಲ್ಲಿ ಕಾಣಬಹುದು.
ಇವೆರಡಕ್ಕಿಂತಲೂ ಭಿನ್ನವಾಗಿರುವ ದೃಷ್ಟಿಕೋನವನ್ನು ನಾವು ಭಾರತೀಯ ಚಿಂತಕರಲ್ಲಿ ಕಾಣಬಹುದು. ಮಾನವತಾವಾದವು ಭಾರತದಲ್ಲಿ ವೇದ ಕಾಲದಿಂದಲೂ ಆಧ್ಯಾತ್ಮಿಕ ಮಾನವತಾವಾದವಾಗಿದೆ. ಧರ್ಮ, ದೇವರು, ಆತ್ಮಗಳ ಮೂಲಕ ನಮ್ಮ ಮತ್ತು ಸಮಾಜದ ಐಕ್ಯತೆಯನ್ನು ಬೋಧಿಸುತ್ತಿದೆ. ಮಾನವನು ಅಮೃತಸ್ಯ ಪುತ್ರ ಎಂಬ ಉಪನಿಷತ್ ವಾಕ್ಯವೇ ಇದಕ್ಕೆ ಸಾಕ್ಷಿ. ಭಾರತದ ಆಸ್ತಿಕ ಧರ್ಮಗಳು ಮಾನವನನ್ನು ದೇವರ ಮಟ್ಟಕ್ಕೆ ಕರೆದೊಯ್ಯುತ್ತವೆ.ನೂತನ ಯುಗದ ಪ್ರವಾದಿಯಾದ ಸ್ವಾಮಿ ವಿವೇಕಾನಂದರು ಮಾನವನ ಸಂಪೂರ್ಣ ಬೆಳವಣಿಗೆಗೆ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ. ಅವರು ಮುಕ್ತಿಯೂ ಸೇರಿದಂತೆ ತಮ್ಮ ಎಲ್ಲಾ ಆಸೆಗಳನ್ನು ಬದಿಗೊತ್ತಿ ಮಾನವನ, ಸಮಾಜದ ಅಭಿವೃದ್ಧಿಗಾಗಿ ಹಗಲಿರಳು ದುಡಿದಂತಹ ಮಾನವ ಪ್ರೇಮಿ.