

ರಾಮನಗರ : ಜಿಲ್ಲೆಯಲ್ಲಿ ಕೋವಿಡ್ ಸೋಂಕನ್ನು ಪರಿಣಾಮಕಾರಿಯಾಗಿ ಹತ್ತಿಕ್ಕಲು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಮೂರು ಅಂಶಗಳ ಸೂತ್ರವನ್ನು ಸೂಚಿಸಿದ್ದು, ಅದರ ಪ್ರಕಾರ ಕ್ರಮಬದ್ಧವಾಗಿ ಕೋವಿಡ್ ಸ್ಥಿತಿಯನ್ನು ನಿರ್ವಹಣೆ ಮಾಡುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದರು.
ಜಿಲ್ಲೆಯ ಸಂಸದರು, ಶಾಸಕರು, ಎಲ್ಲ ಚುನಾಯಿತ ಪ್ರತಿನಿಧಿಗಳ, ಉನ್ನತ ಅಧಿಕಾರಿಗಳ ಜತೆ ಶುಕ್ರವಾರ ವರ್ಚ್ಯುಯಲ್ ಸಭೆ ನಡೆಸಿ ಜಿಲ್ಲೆಯಲ್ಲಿನ ಕರೊನಾ ಪರಿಸ್ಥಿತಿ ಬಗ್ಗೆ ಅವಲೋಕನ ಮಾಡಿದರು. ಈ ವೇಳೆ ಮಾತನಾಡಿದ ಅವರು, ಕರೊನಾ ಸೋಂಕಿತರನ್ನು ಕ್ಷಿಪ್ರವಾಗಿ ಪತ್ತೆ ಹಚ್ಚಿ ಪರೀಕ್ಷೆ ಒಳಪಡಿಸುವುದು, ಕ್ಷಿಪ್ರವಾಗಿ ಫಲಿತಾಂಶ ನೀಡುವುದು ಹಾಗೂ ಪಾಸಿಟಿವ್ ಬಂದರೆ ಅಷ್ಟೇ ಕ್ಷಿಪ್ರವಾಗಿ ಚಿಕಿತ್ಸೆ ಆರಂಭಿಸುವ ಮೂರು ಅಂಶಗಳ ಸೂತ್ರವನ್ನು ಸೂಚಿಸಿದರು.
ಲಸಿಕೆ ಅಭಿಯಾನವನ್ನು ಮತ್ತಷ್ಟು ತೀವ್ರಗೊಳಿಸಬೇಕು, ಸರ್ಕಾರದ ಮಾರ್ಗಸೂಚಿಯಂತೆ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ತಪ್ಪದೇ ಲಸಿಕೆ ಕೊಡಬೇಕು. ಅದಕ್ಕೆ ಬೇಕಾದ ಎಲ್ಲ ಕಾರ್ಯತಂತ್ರ ಅಳವಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜ್ವರ, ಶೀತ ಇದ್ದರೆ ಪರೀಕ್ಷೆ ಮಾಡಿ: ಯಾರಿಗೆ ಆಗಲಿ ಜ್ವರ, ಶೀತ, ಕೆಮ್ಮು ಇತ್ಯಾದಿ ರೋಗ ಲಕ್ಷಣಗಳಿದ್ದರೆ ಕೂಡಲೇ ಅಂಥವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು ಅಥವಾ ಅಂಥವರು ಯಾರಾದರೂ ಇದ್ದರೆ ನಿರ್ಲಕ್ಷ್ಯ ಮಾಡದೇ ಪರೀಕ್ಷೆ ಮಾಡಿಸಿಕೊಳ್ಳಬೇಕು.
ಕೆಲ ಗಂಟೆಗಳಲ್ಲೇ ವರದಿ ಕೊಡುವುದರ ಜತೆಗೆ, ಯಾವುದೇ ವ್ಯಕ್ತಿಗೆ ಕೋವಿಡ್ ಪಾಸಿಟಿವ್ ಕಂಡುಬಂದರೆ ತಕ್ಷಣವೇ ಚಿಕಿತ್ಸೆ ಶುರು ಮಾಡಬೇಕು. ಸಿಮ್ಟಮ್ಯಾಟಿಕ್ ಅಥವಾ ಅಸಿಮ್ಟೀಮ್ಯಾಟಿಕ್ ಅಂತ ವಿಂಗಡಣೆ ಮಾಡುವುದು ಬೇಡ. ಸೋಂಕು ಬಂದ ತಕ್ಷಣ ಚಿಕಿತ್ಸೆ ನೀಡಿದರೆ ರೋಗವು ಉಲ್ಬಣಿಸುವುದಿಲ್ಲ. ಆಗ ಆಸ್ಪತ್ರೆ, ಐಸಿಯು, ಆಕ್ಸಿಜನ್ ಮುಂತಾದವು ಬೇಕಾಗುವುದಿಲ್ಲ. ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ನಿರ್ದೇಶನ ನೀಡಿದರು. ಈ ಸೂತ್ರದಂತೆ ಕೆಲಸ ಮಾಡಿದರೆ ಸೋಂಕನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು. ಆಗ ಮಾತ್ರ ಯಾವುದೇ ಸಾವು-ನೋವು ಉಂಟಾಗುವುದಿಲ್ಲ. ಇದನ್ನು ತಕ್ಷಣವೇ ಜಾರಿಗೆ ತರಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಡಾ. ಸಿ.ಎನ್. ಅಶ್ವತ್ಥನಾರಾಯಣ ಸೂಚಿಸಿದರು.
ಸಿಬ್ಬಂದಿ ಕೊರತೆ ಆಗಬಾರದು: ವಿಧಾನ ಪರಿಷತ್ ಎಸ್. ರವಿ ಅವರು ಸಿಬ್ಬಂದಿ ಕೊರತೆ ಬಗ್ಗೆ ಪ್ರಸ್ತಾಪಿಸಿದ್ದಕ್ಕೆ ಉತ್ತರ ನೀಡಿದ ಡಿಸಿಎಂ, ಕೂಡಲೇ ಅಗತ್ಯ ಇರುವ ಕಡೆ ಸಿಬ್ಬಂದಿ ನೇಮಕ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು. ಸಂಪನ್ಮೂಲ ಕೊರತೆ ಕಂಡು ಬಂದರೆ ವಿಪತ್ತು ನಿರ್ವಹಣಾ ನಿಧಿಯಿಂದ ಖರ್ಚು ಮಾಡಿ ಎಂದು ಸಲಹೆ ಮಾಡಿದರು.
ಸಾಧ್ಯವಾದಷ್ಟು ಜನಪ್ರತಿನಿಧಿಗಳ ಸಲಹೆ ಸಹಕಾರ ಪಡೆದುಕೊಳ್ಳಿ. ಅವರು ಎತ್ತುವ ಆಕ್ಷೇಪಗಳಿಗೆ ಕಿವಿಗೊಡಿ. ಸಮಸ್ಯೆಗಳ ಬಗ್ಗೆ ತಿಳಿಸಿದರೆ ಕೂಡಲೇ ಬಗೆಹರಿಸಿ ಎಂದು ಕಿವಿಮಾತು ಹೇಳಿದರು. ಕೋವಿಡ್ ನಿರ್ವಹಣೆಯಲ್ಲಿ ಮೊದಲಿನಿಂದಲೂ ರಾಮನಗರ ಜಿಲ್ಲೆ ರಾಜ್ಯಕ್ಕೆ ಮಾದರಿಯಾಗಿದೆ. ಈಗಲೂ ಉತ್ತಮ ನಿರ್ವಹಣೆ ಇದೆ. ದಿನಕ್ಕೆ 1050ರಿಂದ 1100 ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈ ಸಂಖ್ಯೆಯನ್ನು ಹೆಚ್ಚಿಸಲು ಸೂಚಿಸಿದ್ದೇನೆ. ಹಾಗೆಯೇ, ಜಿಲ್ಲೆಯ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಇಲ್ಲ. ದಯಾನಂದ ಸಾಗರ್ ಮೆಡಿಕಲ್ ಕಾಲೇಜ್, ರಾಜರಾಜೇಶ್ವರಿ ಮೆಡಿಕಲ್ ಕಾಲೇಜ್‌ನಲ್ಲಿ ಬೆಡ್‌ಗಳು ಸಾಕಷ್ಟು ಲಭ್ಯ ಇವೆ. ಸರ್ಕಾರ ಕೂಡ ಜಿಲ್ಲಾ ಕೇಂದ್ರದಲ್ಲಿ ಕೋವಿಡ್ ಆಸ್ಪತ್ರೆ ಮಾಡಿದೆ ಎಂದು ಮಾಹಿತಿ ನೀಡಿದರು.
ಸಂಸದ ಡಿ.ಕೆ.ಸುರೇಶ್, ಶಾಸಕರಾದ ಅನಿತಾ ಕುಮಾರಸ್ವಾಮಿ, ಎ. ಮಂಜುನಾಥ, ಎಂಎಲ್‌ಸಿ ರವಿ, ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್ ಕುಮಾರ್ ಜಿಪಂ ಸಿಇಒ ಇಕ್ರಂ, ಎಸ್‌ಪಿ ಗಿರೀಶ್, ಡಿಎಚ್‌ಒ ಡಾ. ನಿರಂಜನ್ ಹಾಗೂ ಅಧಿಕಾರಿಗಳು ಇದ್ದರು.
ಸದ್ಯಕ್ಕೆ ರಾಮನಗರ ಜಿಲ್ಲಾ ಕೇಂದ್ರದಲ್ಲಿಯೇ ಕೋವಿಡ್ ಟೆಸ್ಟ್‌ಗಳನ್ನು ಮಾಡಲಾಗುತ್ತಿದೆ. ಅಲ್ಲಿ ಯಾವುದೇ ಕೊರತೆ ಇಲ್ಲ ಎಂದ ಅವರು, ತಮ್ಮಲ್ಲಿ ರೋಗ ಲಕ್ಷಣಗಳಿದ್ದರೆ ಪರೀಕ್ಷೆ ಮಾಡಿಸಿಕೊಳ್ಳಲು ತಡ ಮಾಡಬಾರದು. ಎಲ್ಲೆಲ್ಲಿ ಪರೀಕ್ಷೆ ಮಾಡಲಾಗುತ್ತದೆ ಎಂಬ ವಿವರಗಳನ್ನು ಜನರಿಗೆ ವ್ಯಾಪಕವಾಗಿ ತಿಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.
ಡಾ. ಸಿ.ಎನ್. ಅಶ್ವತ್ಥನಾರಾಯಣ ಡಿಸಿಎಂ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ
52 ಸಾವಿರ ರೂ. ದಂಡ ವಸೂಲಿ
ರಾಮನಗರ: ನಗರಸಭೆ ವ್ಯಾಪ್ತಿಯಲ್ಲಿ ಕರೊನಾ ಹರಡದಂತೆ ಸಾರ್ವಜನಿಕ ಹಿತದೃಷ್ಠಿಯಿಂದ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಸೂಪರ್ ಮಾರ್ಕೆಟ್, ಬಾರ್ ಆಂಡ್ ರೆಸ್ಟೋರೆಂಟ್, ಜ್ಯುವೆಲರಿ ಶಾಪ್, ಮೊಬೈಲ್ ಅಂಗಡಿಗಳ ಮೇಲೆ ಶುಕ್ರವಾರ ನಗರಸಭೆ ಪೌರಾಯುಕ್ತರು ನೇತೃತ್ವದಲ್ಲಿ ದಾಳಿ ನಡೆಸಿ ದಂಢ ವಿಧಿಸಲಾಯಿತು.
ಕರೊನಾ ಮಾರ್ಗಸೂಚಿ ಪಾಲಿಸದ ಹಾಗೂ ನಿಷೇಧಿತ ಪ್ಲಾಸ್ಟಿಕ್ ಬಳಸುತ್ತಿರುವ ಅಂಗಡಿ ಮಾಲೀಕರು ಮತ್ತು ಗ್ರಾಹಕರಿಗೆ ದಂಡ ವಿಧಿಸಿ 52 ಸಾವಿರ ರೂ. ಸಂಗ್ರಹಿಸಲಾಯಿತು ಎಂದು ಪೌರಾಯುಕ್ತ ನಂದಕುಮಾರ್ ತಿಳಿಸಿದರು..
ನಗರಸಭೆ ವ್ಯಾಪ್ತಿಯಲ್ಲಿ ಕರೊನಾ ಸೋಂಕು ಹರಡದಂತೆ ಪ್ರತಿದಿನ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸುತ್ತಿದ್ದು, ನಿಯಮ ಉಲ್ಲಂಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ನಾಗರಿಕರು ಕೂಡ ಮದುವೆ ಶುಭ ಸಮಾರಂಭಗಳು, ಜಾತ್ರೆಗಳು ಹಾಗೂ ಇನ್ನಿತರೆ ಸಮಾರಂಭಗಳು, ಜಾತ್ರೆಗಳು ಹಾಗೂ ಇನ್ನಿತರ ಸಮಾರಂಭಗಳಲ್ಲಿ ಹೆಚ್ಚಿನ ಜನಸಂಖ್ಯೆ ಸೇರದೆ ಹಾಗೂ ಮಾಸ್ಕ್ ಧರಿಸಿ, ಪರಸ್ಪರ ಅಂತರವನ್ನು ಕಾಯ್ದುಕೊಂಡು ಕರೊನಾ ತಡೆಗೆ ಸಹಕರಿಸುವಂತೆ ಮನವಿ ಮಾಡಿದರು.
ಮನವೊಲಿಸಿ : ಅಲ್ಪಸಂಖ್ಯಾತ ಸಮುದಾಯದವರೂ ಸೇರಿ ಕೆಲವರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವ ಬಗ್ಗೆ ದೂರುಗಳು ಬಂದಿವೆ. ಅವರನ್ನು ಮನವೊಲಿಸಿ ಲಸಿಕೆ ಪಡೆಯುವಂತೆ ಮಾಡಿ ಎಂದು ಡಿಸಿಎಂ ನಿರ್ದೇಶನ ನೀಡಿದರು. ಸಭೆಯಲ್ಲಿ ಪಾಲ್ಗೊಂಡಿದ್ದ ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ಕೆಲ ಉತ್ತಮ ಸಲಹೆಗಳನ್ನು ನೀಡಿದ್ದು, ಅವುಗಳನ್ನು ಜಾರಿಗೆ ತರಲಾಗುವುದು ಎಂದು ಅಶ್ವತ್ಥನಾರಾಯಣ ತಿಳಿಸಿದರು.