

|ಮಂಡಗದ್ದೆ ಪ್ರಕಾಶ್ಬಾಬು ಕೆ.ಆರ್.
ಜಗತ್ಪಾಲಕನಾದ ಮಹಾವಿಷ್ಣುವಿನ ಶಕ್ತಿಯಾಗಿ, ಅವನ ಹೃದಯೇಶ್ವರಿಯಾಗಿರುವ ಲಕ್ಷ್ಮಿಯನ್ನು ಜಗತ್ ಪೋಷಣೆಗೆ ಅವಶ್ಯವಾದ ವೃದ್ಧಿ-ಸಮೃದ್ಧಿಗಳ ಸಕಲ ಭಾಗ್ಯಗಳಾಗಿ ಪೂಜಿಸುತ್ತಾರೆ. ಶ್ರೀ ಎಂದರೆ ಲಕ್ಷ್ಮೀ ಎಂದೇ ಅರ್ಥ. ‘ಶ್ರೀ’ ವೇದಪೂರ್ವದಲ್ಲಿದ್ದ ದೇವತೆ ಹಾಗೂ ಫಲಶಕ್ತಿ, ಜಲ ಮತ್ತು ಕೃಷಿಗಳಿಗೆ ಸಂಬಂಧಪಟ್ಟ ದೇವತೆ. ಕಾಲಕ್ರಮದಲ್ಲಿ ಈ ವೇದಪೂರ್ವ ದೇವತೆ, ವೇದದಲ್ಲಿನ ನಿರುಪಮ ಸೌಂದರ್ಯವತಿ ಲಕ್ಷ್ಮಿಯೊಡನೆ ಒಂದಾದಳು.
ವಿಷ್ಣುಪುರಾಣದಲ್ಲಿ ಹೀಗೊಂದು ಕಥೆ ಇದೆ. ಭೃಗುಮಹರ್ಷಿಯ ಪತ್ನಿ ‘ಖ್ಯಾತಿ’. ಇವರಿಗೆ ಗಂಡುಮಕ್ಕಳು ಮಾತ್ರ ಇದ್ದರು. ಖ್ಯಾತಿಗೆ ಹೆಣ್ಣುಮಕ್ಕಳನ್ನು ಪಡೆಯಬೇಕು ಎಂಬ ಆಸೆ ಉಂಟಾಯಿತು. ಅವಳು ದೇವಿಯನ್ನು ಕುರಿತು ತಪಸ್ಸು ಮಾಡಿದಳು. ತಪಸ್ಸಿಗೆ ಮೆಚ್ಚಿ ಜಗನ್ಮಾತೆಯು ಪುತ್ರಿಯನ್ನು ಕರುಣಿಸಿದಳು. ಆಕೆಗೆ ‘ಲಕ್ಷ್ಮೀ’ ಎಂದು ಹೆಸರಿಟ್ಟರು. ಲಕ್ಷ್ಮೀ ಚಿಕ್ಕಂದಿನಲ್ಲೇ ವಿಷ್ಣುವನ್ನು ಕುರಿತು ತಪಸ್ಸು ಮಾಡಿದಳು. ಅವಳ ತಪಸ್ಸಿಗೆ ಮೆಚ್ಚಿದ ವಿಷ್ಣುವು ನಾರಾಯಣನ ರೂಪದಲ್ಲಿ ಪ್ರತ್ಯಕ್ಷನಾಗಿ ವರವನ್ನು ಬೇಡು ಎನ್ನಲು ‘‘ಸ್ವಾಮೀ, ನಿಮ್ಮ ವಿಶ್ವರೂಪವನ್ನು ತೋರಿಸಿದರೆ ನಾನು ನಂಬುವೆನು. ಆ ನಂತರ ನನ್ನನ್ನು ವಿವಾಹ ಮಾಡಿಕೊಳ್ಳಿ’’ ಎಂದು ವರವನ್ನು ಬೇಡಿದಳು. ವಿಷ್ಣು ವಿಶ್ವರೂಪವನ್ನು ತೋರಿಸಿ ಶ್ರೀಲಕ್ಷ್ಮಿಯನ್ನು ವಿವಾಹವಾದನು ಹಾಗೂ ಲಕ್ಷ್ಮಿಯು ಸಂಪತ್ತಿಗೆ ಅಧಿದೇವತೆ ಆದಳು ಎನ್ನುತ್ತದೆ ವಿಷ್ಣುಪುರಾಣ. ಈ ಲಕ್ಷ್ಮಿಯೇ ಕ್ಷೀರಾಬ್ದಿಯಿಂದ ಉದ್ಭವಿಸಿದಳು. ನಂತರ ವಿಷ್ಣುವಿನ ಪತ್ನಿಯಾದಳು. ವಾಮನಾವತಾರದಲ್ಲಿ ಪದ್ಮಳಾಗಿ, ಪರಶುರಾಮಾವತಾರದಲ್ಲಿ ಧರಣಿಯಾಗಿ, ರಾಮಾವತಾರದಲ್ಲಿ ಸೀತೆಯಾಗಿ, ಕೃಷ್ಣಾವತಾರದಲ್ಲಿ ರುಕ್ಮಿಣಿಯಾಗಿ ಅವತರಿಸಿದವಳು ಎಂದು ಪುರಾಣಗಳು ಹೇಳುತ್ತವೆ.
ವರಮಹಾಲಕ್ಷ್ಮೀ ವ್ರತದ ಹಿನ್ನೆಲೆ: ಒಮ್ಮೆ ಶಿವ ಮತ್ತು ಪಾರ್ವತಿಯು ಚದುರಂಗದ ಆಟವನ್ನು ಆಡಬೇಕೆಂದು ನಿರ್ಧರಿಸಿದರು. ಆ ಆಟದ ತೀರ್ಪಗಾರರಾಗಿ ಶಿವಗಣದ ಚಿತ್ರನೇಮಿ ಎಂಬುವನನ್ನು ನೇಮಿಸಿದರು. ಚಿತ್ರನೇಮಿಯು ಇವರಿಬ್ಬರ ಆಟವನ್ನು ಸರಿಯಾಗಿ ವೀಕ್ಷಿಸಿದನು. ಬಹಳ ಹೊತ್ತಿನ ನಂತರ ಇದ್ದಕ್ಕಿದ್ದಂತೆ ಶಿವ-ಪಾರ್ವತಿಯರಲ್ಲಿ ಸೋಲು-ಗೆಲುವಿನ ಬಗ್ಗೆ ಚರ್ಚೆ ನಡೆಯಿತು. ಚಿತ್ರನೇಮಿಯು ಶಿವನೇ ಆಟದಲ್ಲಿ ಗೆದ್ದಿರುವುದು ಎಂದು ನುಡಿದನು. ಆಗ ಪಾರ್ವತಿಗೆ ಕೋಪ ಬಂದು ತಕ್ಷಣ, ನೀನು ಕುಷ್ಠರೋಗದಿಂದ ನರಳುವಂತಾಗು ಎಂದು ಶಾಪ ಕೊಟ್ಟಳು. ತಾನು ತಪ್ಪು ಮಾಡದೇ ಇದ್ದರೂ ಈ ರೀತಿ ಶಾಪ ಕೊಟ್ಟಿರುವರಲ್ಲ ಎಂದು ನೊಂದುಕೊಂಡು ಆ ಶಾಪದಿಂದ ಮುಕ್ತನಾಗುವುದು ಹೇಗೆ ಎಂದು ಪಾರ್ವತಿಯನ್ನು ಕೇಳಿದನು. ಆಗ ಪಾರ್ವತಿಯು ಈ ರೀತಿ ತಿಳಿಸಿದಳು. ಭೂಲೋಕದಲ್ಲಿ ಶ್ರಾವಣಮಾಸದ ಎರಡನೇ ಶುಕ್ರವಾರ ‘ಮಹಾಲಕ್ಷ್ಮೀ ವ್ರತ’ ಆಚರಿಸುತ್ತಾರೆ. ಅದನ್ನು ನೀನು ಏಕಾಗ್ರತೆಯಿಂದ ನೋಡಿದರೆ ಶಾಪ ವಿಮೋಚನೆ ಆಗುವುದು ಎಂದಳು. ಅದೇ ರೀತಿ ಚಿತ್ರನೇಮಿ ಭೂಲೋಕಕ್ಕೆ ಬಂದು ವರಮಹಾಲಕ್ಷ್ಮೀ ವ್ರತವನ್ನು ಕಣ್ತುಂಬ ನೋಡಿ ಶಾಪದಿಂದ ವಿಮುಕ್ತನಾದನು. ಈ ವ್ರತವನ್ನು ನೋಡುವುದರಿಂದಲೇ ಶಾಪ ಪರಿಹಾರ ಎಂದ ಮೇಲೆ ಈ ವ್ರತವನ್ನು ಆಚರಿಸುವುದರಿಂದ ಅದರ ಫಲ ಎಷ್ಟು ಅಪಾರವೆಂದು ಊಹಿಸಿ.
ಲಕ್ಷ್ಮಿಯ ನೆಲೆ ಪ್ರತಿದಿನವೂ ಮನೆಯ ಮುಂದೆ ರಂಗೋಲಿ ಹಾಕುವುದರಿಂದ, ದೇವರ ಮುಂದೆ ದೀಪವನ್ನು ಬೆಳಗುವುದರಿಂದ, ತುಳಸಿಯನ್ನು ಪೂಜಿಸುವು ದರಿಂದ, ಕಮಲದ ಹೂವಿನಿಂದ ಲಕ್ಷ್ಮಿಯನ್ನು ಪೂಜಿಸು ವುದರಿಂದ, ಗೋಪೂಜೆ ಮಾಡುವುದರಿಂದ, ಪ್ರತಿದಿನ ಸುಮಂಗಲಿಯರು ಹಣೆಯಲ್ಲಿ ಕುಂಕುಮವನ್ನು ಧರಿಸುವುದರಿಂದ ಈ ಎಲ್ಲ ಸ್ಥಳಗಳಲ್ಲಿ ಲಕ್ಷ್ಮಿಯು ವಿರಾಜ ಮಾನವಾಗಿರುತ್ತಾಳೆ ಎಂಬುದು ಪ್ರಾಜ್ಞರ ಅಭಿಮತ.