'ವಂದೇ ಭಾರತ್' ಚಾಲಕ, ಸಿಬ್ಬಂದಿ ಮೇಲೆ ರೈಲ್ವೇ ನೌಕರರ ಹಲ್ಲೆ.. ಕಾರಣವೇನು ಗೊತ್ತೇ?

rail (2)
Published on

ನವದೆಹಲಿ: ಉದಯಪುರ ಮತ್ತು ಆಗ್ರಾ ನಡುವೆ ಹೊಸದಾಗಿ ಪ್ರಾರಂಭಿಸಲಾದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ರೈಲ್ವೇ ನೌಕರರ ಗುಂಪೊಂದು ನುಗ್ಗಿ ರೈಲಿನ ಚಾಲಕ, ಸಹ-ಚಾಲಕ ಮತ್ತು ಗಾರ್ಡ್‌ನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಕುರಿತಾದ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗಿದೆ.

ಉದಯಪುರ ಮತ್ತು ಆಗ್ರಾ ನಡುವೆ ಸೆಪ್ಟೆಂಬರ್ 2 ರಂದು ಪರಿಚಯಿಸಲಾದ ರೈಲು ವಿವಾದದ ಕೇಂದ್ರವಾಗಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಕಾರ್ಯಾಚರಣೆ ಬಗ್ಗೆ ವಿವಾದ ಪ್ರಾರಂಭವಾಗಿದ್ದು, ವಿವಿಧ ವಿಭಾಗಗಳಿಗೆ ಸೇರಿದ ನೌಕರರು ಸಿಟ್ಟಿಗೆದ್ದಿದ್ದರು. ಇದನ್ನು ಚಾಲಕ, ಗಾರ್ಡ್​ಗಳನ್ನು ಪ್ರಶ್ನಿಸಲು ಬಂದಾಗ ಅವರು ಬಾಗಿಲುಗಳನ್ನು ಬಂದ್​ ಮಾಡಿಕೊಂಡಿದ್ದರು. ಆಗ ವಾಗ್ವಾದವಾಗಿ ಬಲವಂತವಾಗಿ ಬಾಗಿಲು ಮುರಿದು ಒಳನುಗ್ಗಿದ ನೌಕರರು ರೈಲಿನ ಚಾಲಕ, ಸಹ-ಚಾಲಕ ಮತ್ತು ಗಾರ್ಡ್‌ನ ಮೇಲೆ ಹಲ್ಲೆ ನಡೆಸಿದ್ದಾರೆ. ಇದರ ಜೊತೆಗೆ ಗಾರ್ಡ್ ರೂಮಿನ ಡೋರ್ ಲಾಕ್ ಗೆ ಹಾನಿ ಮಾಡಿ ಕ್ಯಾಬಿನ್ ನಲ್ಲಿದ್ದ ಗಾಜುಗಳನ್ನು ಒಡೆದು ಹಾಕಿದ್ದಾರೆ. ಈ ಸಂದರ್ಭದಲ್ಲಿ ಲೋಕೊ ಪೈಲಟ್‌ಗೆ ಗಾಯವಾಗಿದೆ.

ವಿವಾದ ಬಿಗಡಾಯಿಸಿದ ಕಾರಣ ಇದೀಗ ಈ ಸಮಸ್ಯೆಯನ್ನು ರೈಲ್ವೆ ಮಂಡಳಿಯ ಗಮನಕ್ಕೆ ತರಲಾಗಿದೆ. ರೈಲು-ಪಶ್ಚಿಮ ಸೆಂಟ್ರಲ್ ರೈಲ್ವೆ, ವಾಯುವ್ಯ ರೈಲ್ವೆ ಮತ್ತು ಉತ್ತರ ರೈಲ್ವೆ-ನಿರ್ವಹಣೆಯಲ್ಲಿ ತೊಡಗಿರುವ ವಿವಿಧ ರೈಲ್ವೆ ವಿಭಾಗಗಳ ನಡುವಿನ ಸಂಘರ್ಷವು ಸುಗಮ ಸೇವೆಯ ಮೇಲೆ ಪರಿಣಾಮ ಬೀರುತ್ತಿದೆ. ಈ ಆಂತರಿಕ ಸಂಘರ್ಷಗಳಿಂದಾಗಿ ಈ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಹಲವು ಬಾರಿ ವಿಳಂಬವಾಗಿದೆ ಎಂದು ವರದಿಯಾಗಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಚಾರಗೊಂಡಿದ್ದು, ರೈಲ್ವೇ ಅಧಿಕಾರಿಗಳು ದಾಂಧಲೆ ನಡೆಸಿದವರ ಮೇಲೆ ಶಿಸ್ತು ಕ್ರಮ ಜರುಗಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net