ಮೇಲ್ಮನೆಯಲ್ಲಿ ವಾಲ್ಮಿಕಿ ಹಗರಣದ ಕೋಲಾಹಲ

allwyn_280920_ctravi1
Published on

ಬೆಂಗಳೂರು:
ವಾಲ್ಮೀಕಿ ನಿಗಮದ ಹಗರಣವನ್ನು ಸಿಬಿಐಗೆ ವಹಿಸಬೇಕು. ಕೂಡಲೆ ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಮೇಲ್ಮನೆಯಲ್ಲಿ ಬಿಜೆಪಿಯ ಸಿ.ಟಿ.ರವಿ ಆಗ್ರಹಿಸಿದ್ದಾರೆ.
ನಿಯಮ 68 ರಡಿಯಲ್ಲಿ ವಾಲ್ಮೀಕಿ ನಿಗಮದ ಹಗರಣದ ಬಗ್ಗೆ ಚರ್ಚೆ ಪ್ರಾರಂಭಿಸಿದ ಅವರು, ರಾಜ್ಯದ ಇತಿಹಾಸದಲ್ಲೆ ದೊಡ್ಡ ಹಗರಣವಾಗಿದೆ. ಇದನ್ನ ಪಿಕ್ ಪ್ಯಾಕೇಟ್ ಅಥವಾ ಕಳ್ಳತನ ಎಂದು ಹೇಳಲು ಆಗಲ್ಲ. ಇದೊಂದು ವ್ಯವಸ್ಥಿತ ದರೋಡೆಯಾಗಿದೆ ಎಂದರು.
ಇದರಲ್ಲಿ ಕೇವಲ ನಾಗೇಂದ್ರ ಮಾತ್ರ ಪಾಲುದಾರನಲ್ಲ, ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿರುವ ಸಾಧ್ಯತೆ ಇದೆ ಎಂದು ಅನುಮಾನ ವ್ಯಕ್ತಪಡಿಸಿದರು.
ಹಗರಣದ ಬಳಿಕ ನಿಗಮದ ಅಧಿಕಾರಿಗಳನ್ನ ಕರೆದಿದ್ದ ನಾಗೇಂದ್ರ ನನ್ನ ಹೆಸರನ್ನ ಎಲ್ಲೂ ಹೇಳಬೇಡಿ.
ನಾನು ಅಧಿಕಾರದಲ್ಲಿದ್ರೆ ಮಾತ್ರ ನಿಮಗೆಲ್ಲ ಬಿಡುಗಡೆ ಮಾಡಿಸಲು ಸಾಧ್ಯ ಎಂದು ಹೇಳಿದ್ದಾರೆ ಎಂದರು.
ನಮ್ಮ ಸರ್ಕಾರವಿದ್ದಾಗ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಾಗ ಇದು ಸರ್ಕಾರಿ ಪ್ರಾಯೋಜಿತ ಹತ್ಯೆ ಎಂದು ಆಗಿನ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದರು. ಹಾಗಾದರೆ ಇದು ಸರ್ಕಾರಿ ಪ್ರಾಯೋಜಿತ ಹತ್ಯೆ ಅಲ್ಲವೇ? ಎಂದು ಪ್ರಶ್ನಿಸಿದರು.
ಆಗಿನ ಸಚಿವ ನಾಗೇಂದ್ರ ಅವರು, ಶಾಂಗ್ರೀಲಾ ಹೋಟೆಲ್ ನಲ್ಲಿ ಎಂಡಿ ಪದ್ಮನಾಭ, ಪರಶುರಾಮ್ ಜೊತೆ ಚರ್ಚೆ ಮಾಡ್ತಾರೆ. ಇನ್ನೊಬ್ಬ ನೆಕ್ಕುಂಟಿ ನಾಗರಾಜ್ ಬ್ಯಾಂಕಿನ ಎಂಡಿ ಅಂತ ಒಬ್ಬನನ್ನ ಪರಿಚಯ ಮಾಡಿಸ್ತಾನೆ. ವಸಂತನಗರದಿಂದ ಎಂಜಿ ರಸ್ತೆಯ ಬ್ರಾಂಚ್‌ಗೆ ಹಣ ವರ್ಗಾವಣೆ ಮಾಡುವಂತೆ ಪದ್ಮನಾಭಗೆ ಹೇಳ್ತಾನೆ. ಅಲ್ಲಿಂದ ಹೈದರಾಬಾದಿನ ಬ್ಯಾಂಕುಗಳಿಗೆ ಹೋಗುತ್ತೆ ಎಂದು ಹಗರಣವನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು.
ನೆಕ್ಕುಂಟಿ ನಾಗರಾಜ್ ಬಿಜೆಪಿ ಕಾರ್ಯಕರ್ತ ಎಂದು ಹೇಳಿದ್ದರು. ಇಲ್ಲಿ ನೋಡಿ ಯಾರ‌್ಯಾರ ಜೊತೆ ಇದ್ದಾನೆ ಎಂದು ಸಿಎಂ, ಡಿಸಿಎಂ ಜೊತೆಗೆ ಆತನಿರುವ ಪೋಟೋ ಪ್ರದರ್ಶಿಸುತ್ತಿದ್ದಂತೆ ಆಕ್ರೋಶಗೊಂಡ ಕಾಂಗ್ರೆಸ್ ಸದಸ್ಯರು ಪ್ರತಿಯಾಗಿ ಆತ ಆಗಿನ ಸಚಿವ ಶ್ರೀರಾಮುಲು, ಆನಂದ್ ಸಿಂಗ್ ಸೇರಿದಂತೆ ಬಿಜೆಪಿ ನಾಯಕರ ಜೊತೆಯಲ್ಲಿರುವ ಪೋಟೋ ಪ್ರದರ್ಶನ ಮಾಡಿ ಪ್ರತಿರೋಧ ಒಡ್ಡಿದರು.
ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಏರು ಧ್ವನಿಯಲ್ಲಿ ನಡೆದ ವಾಕ್ಸಮರ ಸದನ ಕೋಲಾಹಲಕ್ಕೆ ಕಾರಣವಾಯಿತು. ಒಂದು ಹಂತದಲ್ಲಿ ಯಾರು ಏನು ಮಾತನಾಡುತ್ತಿದ್ದಾರೆ ಎನ್ನುವುದು ತಿಳಿಯದಾಯಿತು.
ಶೇಮ್ ಶೇಮ್, ಲೂಟಿ ರವಿ ಎಂದು ಕಾಂಗ್ರೆಸ್ ಸದಸ್ಯರು ಘೋಷಣೆ ಕೂಗುತ್ತಿದ್ದರೆ, ಇತ್ತ ಕಡೆಯಿಂದಲೂ ಭ್ರಷ್ಟ, ಲೂಟಿ ಸರ್ಕಾರ ಎಂದು ೋಷಣೆ ಕೂಗಿದರು.
ಸದನ ತಹಬಂದಿಗೆ ತರಲು ಸಾಧ್ಯವಾಗದೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಸದನವನ್ನು ಮುಂದೂಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net