

ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣದ ತನಿಖೆಯಲ್ಲಿ ನಾನು ಮೂಗು ತೂರಿಸುವುದಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.
ನಿಗಮದ ಎಂಡಿ ಮತ್ತು ಅಕೌಂಟೆಂಟ್ ನಡುವಿನ ಸಂಭಾಷಣೆಯ ಆಡಿಯೋ ಸೋರಿಕೆ ಬಗ್ಗೆ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಆ ಆಡಿಯೋವನ್ನು ಕೇಳಿಲ್ಲ. ಜೊತೆಗೆ ಮುಕ್ತವಾಗಿ ತನಿಖೆ ನಡೆಯಬೇಕು ಎಂದು ಸಚಿವರೇ ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಿದ್ದಾರೆ. ಸ್ವತಃ ಸಚಿವರೇ ಇದರಲ್ಲಿ ನನ್ನ ಪಾತ್ರವಿಲ್ಲ ಎಂದು ಹೇಳಿದ್ದಾರೆ. ಅವರಿಗೂ ನೊಟೀಸ್ ನೀಡಲಾಗಿದೆ ಎಂದು ಮಾಧ್ಯಮಗಳ ಮೂಲಕ ತಿಳಿಯಿತು. ನಾನು ಇದರಲ್ಲಿ ಮೂಗು ತೂರಿಸಲು ಹೋಗುವುದಿಲ್ಲ. ಭ್ರಷ್ಟಾಚಾರದಲ್ಲಿ ನಮ್ಮ ಮಂತ್ರಿ, ಶಾಸಕರ ಪಾತ್ರವಿಲ್ಲ, ಆದರೆ ಬೇರೆಯವರು ಇದರಲ್ಲಿ ಭಾಗಿಯಾಗಿದ್ದಾರೆ ಎಂದರು.
ಸೋರಿಕೆಯಾಗಿರುವ ಆಡಿಯೋ ಸಂಭಾಷಣೆಯಲ್ಲಿ ವಾಲ್ಮೀಕಿ ನಿಗಮದ ಹಗರಣದ ಬಗ್ಗೆ ಅಧ್ಯಕ್ಷರಿಗೆ ತಿಳಿಸೋಣ ಎಂದು ಪರಶುರಾಮ್ ಹೇಳುತ್ತಾರೆ. ಸ್ವಲ್ಪ ದಿನ ಬಿಟ್ಟು ಹೇಳೋಣ ಎಂದು ಪದ್ಮನಾಭ ಹೇಳುತ್ತಾರೆ ಎಂದು ಕೇಳಿದಾಗ, ಹಗರಣದ ಬಗ್ಗೆ ಅಧ್ಯಕ್ಷರಿಗೆ ಮತ್ತು ಸಚಿವರಿಗೆ ಏನೂ ತಿಳಿದಿಲ್ಲ ಎಂಬುದು ಈ ಆಡಿಯೋ ಮೂಲಕವೇ ಸ್ಪಷ್ಟವಾಗುತ್ತಿಲ್ಲವೆ? ನಾನು ಆಡಿಯೋವನ್ನು ಕೇಳಿಸಿಕೊಂಡಿಲ್ಲ ನಿಮ್ಮಿಂದಲೇ ವಿಚಾರ ತಿಳಿಯುತ್ತಿದೆ. ನೀವು ಹೇಳುತ್ತಿರುವ ಮಾತಿನಲ್ಲೇ ಈ ಪ್ರಕರಣದಲ್ಲಿ ಅಧ್ಯಕ್ಷರು ಹಾಗೂ ಸಚಿವರ ಪಾತ್ರವಿಲ್ಲ ಎಂಬುದು ಸ್ಚಷ್ಟವಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.