ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ; ಎಸ್‌ಐಟಿ ಮಹಜರ್

scam
Published on

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಸಂಬಂಧ ವಿಶೇಷ ತನಿಖಾ ತಂಡ (ಎಸ್‌ಐಟಿ) ಸೋಮವಾರ ಸ್ಥಳ ಮಹಜರ್ ನಡೆಸಿದ್ದಾರೆ.

ಅಕ್ರಮ ಹಣ ವಹಿವಾಟು ಆರೋಪದ ಮೇಲೆ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ. ಪದ್ಮನಾಭ ಮತ್ತು ಮಾಜಿ ಲೆಕ್ಕಾಧಿಕಾರಿ ಪರಶುರಾಮ್ ಜಿ. ದುರ್ಗಣ್ಣನವರ್ ಎಂಬುವರನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿ ಕಸ್ಟಡಿಗೆ ಪಡೆದಿದ್ದರು.

ವಸಂತನಗರದಲ್ಲಿ ಇರುವ ಜಸ್ಮಾ ಭವನದಲ್ಲಿ ಇರುವ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಕಚೇರಿಗೆ ಬಂಧಿತರನ್ನು ಕರೆದೊಯ್ದು ಮಹಜರ್ ನಡೆಸಿದರು. ಇದೇ ವೇಳೆ ತನಿಖೆಗೆ ಬೇಕಾದ ಅಗತ್ಯ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ನಿಗಮದ ವ್ಯವಸ್ಥಾಪಕ ಎ. ರಾಜಶೇಖರ್ ನಗರದ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದರ ಮೇರೆಗೆ ತನಿಖೆ ಕೈಗೊಂಡಿರುವ ಎಸ್‌ಐಟಿ ಅಧಿಕಾರಿಗಳು, ಪ್ರಮುಖ ಇಬ್ಬರು ಆರೋಪಿಗಳನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ತನಿಖೆ ವೇಳೆ ಕಂಡು ಬರುವ ಸಾಕ್ಷಾೃಧಾರಗಳ ಆಧಾರದ ಮೇಲೆ ಆರೋಪಿತರಾದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪ್ರಧಾನ ವ್ಯವಸ್ಥಾಪಕಿ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಣಿಮೇಖಲೈ, ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕರಾದ ನಿತೇಶ್ ರಂಜನ್, ರಾಮಸುಬ್ರಮಣಿಯಂ, ಸಂಜಯ್ ರುದ್ರ, ಪಂಕಜ್ ದ್ವಿವೇದಿ ಹಾಗೂ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕಿ ಸುಚಿಸ್ಮಿತಾ ರೌಲ್ ಅವರನ್ನು ವಿಚಾರಣೆ ನಡೆಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net