ವಾಲ್ಮೀಕಿ ನಿಗಮದ ಹಗರಣ, ಮೌಖಿಕ ಮಾಹಿತಿ ಪಡೆದ ಸಿಬಿಐ: ಸಚಿವ ಪರಮೇಶ್ವರ್

parmeshwar
Published on

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ನಿಗಮ ಹಗರಣದ ತನಿಖೆಯನ್ನು ಹಸ್ತಾಂತರ ಮಾಡುವ ಕುರಿತು ಸಿಬಿಐನಿಂದ ಈವರೆಗೂ ಅಧಿಕೃತ ಪತ್ರ ಬಂದಿಲ್ಲ. ಬಂದರೆ ಪರಿಶೀಲಿಸಿ ಕ್ರಮ ವಹಿಸಲಾಗುತ್ತದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಹಣಕಾಸು ಅವ್ಯವಹಾರ ಪ್ರಕರಣದ ಕುರಿತು ಡಿಜಿಪಿಯಿಂದ ಸಿಬಿಐ ಅಧಿಕಾರಿಗಳು ಮೌಖಿಕವಾಗಿ ಕೇಳಿದ್ದಾರೆ ಎನ್ನುವ ಮಾಹಿತಿ ಇದೆ ಆದರೆ ಅಧಿಕೃತವಾಗಿ ನಮಗೆ ಪತ್ರ ಬಂದಿಲ್ಲ ಎನ್ನುವ ಮಾಹಿತಿ ಇದೆ ನಿನ್ನೆ ಮೊನ್ನೆ ಏನಾದರೂ ಬಂದಿದ್ದರೆ ಅದರ ಪ್ರಕಾರ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.

ನಾಗೇಂದ್ರ ರಾಜೀನಾಮೆ ನಂತರವೂ ಬಿಜೆಪಿಯವರು ಸಿಎಂ ಸಿದ್ದರಾಮಯ್ಯ, ಬಸನಗೌಡ ದದ್ದಲ್ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ, ಆದರೆ ತನಿಖೆ ಪ್ರಾರಂಭವಾಗಿದೆ ಜತೆಗೆ ಸಿಬಿಐಗೆ ಬ್ಯಾಂಕ್ ಪತ್ರ ಬರೆದ ಹಿನ್ನೆಲೆಯಲ್ಲಿ ಸಿಬಿಐ ಕೂಡ ಪ್ರವೇಶ ಮಾಡಿದೆ ತನಿಖೆಯಾಗಲಿ ಸತ್ಯವೇನೆಂಬುದು ಹೊರ ಬರಲಿದೆ ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.

ಎಸ್ ಐಟಿಗೆ ಕಾಲಮಿತಿಯಿಲ್ಲ

ವಿಶೇಷ ತನಿಖಾ ದಳಕ್ಕೆ ಆದಷ್ಟು ಶೀಘ್ರ ತನಿಖೆ ಮಾಡಿ ಎಂದು ಹೇಳಿದ್ದೇವೆ ಇಷ್ಟೇ ದಿನದಲ್ಲಿ ತನಿಖೆ ಮಾಡಿ ಎಂದು ಹೇಳಲು ಸಾಧ್ಯವಿಲ್ಲ ಹೇಳಿದರೂ ಅದು ಅಸಾಧ್ಯ ಅವರಿಗೆ ಕಾಲಮಿತಿಯ ಅಗತ್ಯವಿರಲಿದೆ ಎಂದು ಡೆಡ್ ಲೈನ್ ಬೇಡಿಕೆ ತಳ್ಳಿಹಾಕಿದರು.

ಪ್ರಕರಣ ಸಂಬಂಧ ಹೇಳಿಕೆಗಳು, ಆರೋಪಿಗಳ ಹೇಳಿಕೆಗಳು,ಬಂಧಿತರ ಹೇಳಿಕೆ ಎಲ್ಲವನ್ನ ಪರಿಶೀಲಿಸಬೇಕಾಗಲಿದೆ,ಡಾ.ಸಾಕ್ಷಿನಾಶ ಸಂಬಂಧ ಶರಣಪ್ರಕಾಶ್ ಪಾಟೀಲ್ ಕಚೇರಿಯಲ್ಲಿ ಸಭೆ ನಡೆದಿದೆ ಎಂದರೆ ಅದನ್ನು ಪರಿಶೀಲನೆ ಮಾಡಲಿ ಸಿಸಿಟಿವಿ ಫೋಟೋ ಎಲ್ಲವೂ ಸಿಗಲಿದೆ.ಎಸ್ಐಟಿಗೆ ಅಗತ್ಯವೆನಿಸಿದರೆ ಪರಿಶೀಲನೆ ಮಾಡಬಹುದು ಎಂದರು.

ಇಷ್ಟು ದಿನ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿತ್ತು ಎರಡು ತಿಂಗಳಿಗೂ ಹೆಚ್ಚು ಕಾಲ ಮಾದರಿ ನೀತಿ ಸಂಹಿತೆ ಇತ್ತು ಸರ್ಕಾರದ ಮಟ್ಟದಲ್ಲಿ ಯಾವುದೇ ಕೆಲಸ ಕಾರ್ಯಗಳನ್ನು ಮಾಡಲು ಆಗಿರಲಿಲ್ಲ ಈಗ ಅದಕ್ಕೆಲ್ಲ ಚಾಲನೆ ಕೊಡಲಾಗುತ್ತದೆ ಅಭಿವೃದ್ಧಿ ಕಾರ್ಯಗಳಿಗೆ ವೇಗ ಸಿಗಲಿದೆ ಎಂದರು.

ಕಾಂಗ್ರೆಸ್ ನಲ್ಲಿ ಒಳಜಗಳಗಳಿಲ್ಲ

ಪಕ್ಷದಲ್ಲಿ ಹಿರಿಯರ ಅಭಿಪ್ರಾಯ ಕೇಳುತ್ತಿಲ್ಲ ಎಂದು ಸಂದರ್ಭನುಸಾರ ನಾವು ಆ ಮಾತುಗಳನ್ನು ಹೇಳುತ್ತೇವೆ ಅಷ್ಟು ಬಿಟ್ಟರೆ ನಮ್ಮಲ್ಲಿ ಯಾವುದೇ ಒಳ ಜಗಳಗಳಾಗಲಿ ಗೊಂದಲಗಳಾಗಲಿ ಇಲ್ಲ ಎಲ್ಲಿ ಜಗಳವಾಗಿದೆ, ಎಲ್ಲಿ ಗೊಂದಲವಾಗಿದೆ ಎಲ್ಲಿ ನೋಡಿದ್ದರೋ ಗೊತ್ತಿಲ್ಲ ಎಂದು ಬಿಜೆಪಿ ಶಾಸಕರಿಗೆ ಕುಟುಕಿದರು.

ಯಾವುದೋ ಒಂದು ವಿಚಾರದಲ್ಲಿ ಭಿನ್ನವಾದ ಅಭಿಪ್ರಾಯ ಬರುವುದು ಸಹಜ ಒಬ್ಬರು ಹೇಳಿದ್ದನ್ನ ಇನ್ನೊಬ್ಬರು ಕೇಳಬೇಕು ಎನ್ನುವುದಿಲ್ಲ ಅಭಿಪ್ರಾಯ ಭೇದ ಇದ್ದೇ ಇರುತ್ತದೆ ಇದನ್ನು ಹೊರತುಪಡಿಸಿದರೆ ಯಾವುದೇ ಸಮಸ್ಯೆ ಇಲ್ಲ ಎಂದು ಹಿರಿಯರ ಅಭಿಪ್ರಾಯ ಕಡೆಗಣನೆ ಆರೋಪ ತಳ್ಳಿಹಾಕಿದರು.

ಸಚಿವ ಸಂಪುಟದಲ್ಲಿ ನಾವು ನಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತೇವೆ ಸರ್ಕಾರಕ್ಕೆ ಸಂಬಂಧಪಟ್ಟ ತೀರ್ಮಾನಗಳನ್ನ ಅಲ್ಲೇ ಚರ್ಚಿಸುತ್ತೇವೆ, ಪಕ್ಷಕ್ಕೆ ಸಂಬಂಧಪಟ್ಟ ತೀರ್ಮಾನಗಳನ್ನು ಕೋರ್ ಕಮಿಟಿ ಸಭೆ, ಪದಾಧಿಕಾರಿಗಳ ಸಭೆಯಲ್ಲಿ ಚರ್ಚಿಸಬಹುದು ಅದಕ್ಕೆ ಅವಕಾಶಗಳನ್ನ ಅಧ್ಯಕ್ಷರು ಕೊಡಬೇಕಾಗಲಿದೆ ಅವರು ಅದನ್ನು ಮಾಡುತ್ತಾರೆ ಎಂದರು.

ನನ್ನ ಜಿಲ್ಲೆಯು ಸೇರಿ ನಾವು ಅನೇಕ ಕಡೆ ಸೋತಿದ್ದೇವೆ, 17 ಜನ ಸಚಿವರು ಅವರ ಜಿಲ್ಲೆಗಳಲ್ಲಿ ಸೋತಿದ್ದೇವೆ. ಅದರ ಪರಿಶೀಲನೆ, ಆತ್ಮಾವಲೋಕನ ಮಾಡುವ ಅಗತ್ಯವಿದೆ ನಾವೆಲ್ಲರೂ ಇದನ್ನ ಒಪ್ಪುತ್ತೇವೆ ಪಕ್ಷದ ಸೂಚನೆಯನ್ನು ಪಾಲಿಸುವ ಪದ್ಧತಿ ನಮ್ಮಲ್ಲಿದೆ ಅದನ್ನು ಮಾಡುತ್ತೇವೆ ಎಂದು ಡಾ.ಜಿ.ಪರಮೇಶ್ವರ್ ಸಮಜಾಯಿಷಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net