

ನವದೆಹಲಿ: ಸಣ್ಣ ಪಕ್ಷಗಳನ್ನು ನಿಭಾಯಿಸಲು ಬಿಜೆಪಿ ವಿಫಲಗೊಂಡಿದ್ದೇ 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರ ಪತನಗೊಳ್ಳಲು ಪ್ರಮುಖ ಕಾರಣವೆಂದು ಹೊಸ ಪುಸ್ತಕವೊಂದು ಅಭಿಪ್ರಾಯಪಟ್ಟಿದೆ. ಕಾಂಗ್ರೆಸ್ ಸಂಸದ ಗಿರಿಧರ್ ಗಮಾಂಗ್, ನ್ಯಾಷನಲ್ ಕಾನ್ಪರೆನ್ಸ್ ನಾಯಕ ಸೈಫುದ್ದೀನ್ ಸೋಜ್ ಸರ್ಕಾರ ಪತನದ ಪ್ರಮುಖ ಖಳನಾಯಕರೆಂಬುದು ಬಿಜೆಪಿ ಬೆಂಬಲಿಗರ ಅಭಿಪ್ರಾಯ ತಪ್ಪೆಂದು ಈ ಪುಸ್ತಕ ಹೇಳಿದೆ.
ಶಕ್ತಿ ಸಿನ್ಹಾ ಬರೆದಿರುವ ‘ವಾಜಪೇಯಿ: ಭಾರತವನ್ನು ಪರಿವರ್ತಿಸಿದ ಆ ವರ್ಷಗಳು’ ಕೃತಿ ಈ ವಿಚಾರದ ಮೇಲೆ ಹೆಚ್ಚಿನ ಬೆಳಕು ಚೆಲ್ಲಿದೆ. ಸಿನ್ಹಾ ಅನೇಕ ವರ್ಷ ಕಾಲ ವಾಜಪೇಯಿಯವರ ಆಪ್ತ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು.
ಬಿಜೆಪಿ ನೇತೃತ್ವದ ಸರ್ಕಾರದ ಕಾರ್ಯ ನಿರ್ವಹಣೆ ಮತ್ತು ಜೆ. ಜಯಲಲಿತಾ ನೇತೃತ್ವದ ಎಐಎಡಿಎಂಕೆ ಬೆಂಬಲ ವಾಪಸ್ ಪಡೆದಿದ್ದರಿಂದ ವಾಜಪೇಯಿ ಸರ್ಕಾರ ಪತನವಾದ ವಿಚಾರಗಳನ್ನು ಕೃತಿಕಾರರು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ವಾಜಪೇಯಿ ಸರ್ಕಾರ ಪತನಗೊಳ್ಳಲು ಗಮಾಂಗ್ ಕಾರಣರೆಂದು ಅನೇಕರು ತಪ್ಪಾಗಿ ತಿಳಿದು ಅವರ ಮೇಲೆ ಕೋಪ ಹೊಂದಿದ್ದಾರೆ. ಆದರೆ ವಾಸ್ತವವಾಗಿ ಸರ್ಕಾರ ಬೀಳುವಲ್ಲಿ ಇನ್ನೂ ಹಲವರ ಪಾತ್ರ ಪ್ರಮುಖವಾಗಿದೆ. ಅದರಲ್ಲೂ ಸಣ್ಣ ಪ್ರಾದೇಶಿಕ ಪಕ್ಷಗಳನ್ನು ಸರಿಯಾಗಿ ನಿರ್ವಹಿಸುವಲ್ಲಿ ಬಿಜೆಪಿ ವೈಫಲ್ಯವೇ ದೊಡ್ಡ ಪಾತ್ರ ವಹಿಸಿದೆ ಎಂದು ಸಿನ್ಹಾ ವಿವರಿಸಿದ್ದಾರೆ.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..