ಯಕ್ಷಗಾನ ಥ್ರಿಲ್ಲರ್ ಯಾನ; ವಿಜಯವಾಣಿ ಸಿನಿಮಾ ವಿಮರ್ಶೆ

Review
Published on

| ಹರ್ಷವರ್ಧನ್ ಬ್ಯಾಡನೂರು

  • ಚಿತ್ರ: ವೈಶಂಪಾಯನ ತೀರ
  • ನಿರ್ದೇಶನ: ರಮೇಶ್ ಬೇಗಾರ್
  • ನಿರ್ಮಾಣ: ಸುರೇಶ್ ಬಾಬು
  • ತಾರಾಗಣ: ಪ್ರಮೋದ್ ಶೆಟ್ಟಿ, ವೈಜಯಂತಿ ಅಡಿಗ, ರಮೇಶ್ ಭಟ್, ರಮೇಶ್ ಪಂಡಿತ್, ಬಾಬು ಹಿರಣ್ಣಯ್ಯ, ರವೀಶ್ ಹೆಗ್ಡೆ, ಪ್ರಸನ್ನ ಶೆಟ್ಟಿಗಾರ್, ನಾಗಶ್ರೀ ಬೇಗಾರು ಮುಂತಾದವರು.

ಅದು ಮಲೆನಾಡ ಹಸಿರ ಸಿರಿಯನ್ನು ಹೊದ್ದ ರುದ್ರಗಿರಿ. ಆಗಾಗ ಯಕ್ಷಗಾನ ನಡೆಯುತ್ತಿರುತ್ತದೆ. ಕೃಷ್ಣ ಭಟ್ (ರವೀಶ್ ಹೆಗ್ಡೆ) ಮತ್ತು ವೆಂಕಪ್ಪ ಹೆಗ್ಡೆ (ಪ್ರಸನ್ನ ಶೆಟ್ಟಿಗಾರ್) ಅವರ ಜುಗಲ್​ಬಂದಿ ನೋಡಲು ಊರಿನವರೆಲ್ಲರೂ ಸೇರುತ್ತಿರುತ್ತಾರೆ. ಆದರೆ, ಯಕ್ಷಗಾನ ನಡೆದಾಗೆಲ್ಲ ಕಾಡುಗಳ್ಳರು ಮಲೆನಾಡಿನ ಅಪರೂಪದ ಅರಣ್ಯ ಸಂಪತ್ತನ್ನು ಲೂಟಿ ಮಾಡುತ್ತಿರುತ್ತಾರೆ. ಅವರ ಬೆನ್ನುಹತ್ತುವ ಪೊಲೀಸ್ ಅಧಿಕಾರಿ ಎಸ್​ಎಸ್ ಹಿರೇಮಠ್​ಗೆ (ಪ್ರಮೋದ್ ಶೆಟ್ಟಿ) ಕಾಡುಗಳ್ಳರನ್ನು ಹಿಡಿಯುವ ಮುನ್ನವೇ ಒಂದು ಕೊಲೆ ನಡೆದುಬಿಡುತ್ತದೆ. ಮಲೆನಾಡಿನಲ್ಲಿ ಕೇವಲ ನದಿ ಮಾತ್ರವಲ್ಲ ಆಗಾಗ ರಕ್ತವೂ ಹರಿಯುತ್ತಿರುತ್ತೆ ಎಂಬುದು ಪೊಲೀಸರಿಗೆ ಗೊತ್ತಾಗುತ್ತದೆ. ಹಾಗಾದರೆ ಕಾಡುಗಳ್ಳರಿಗೂ, ಕೊಲೆಗೂ ಸಂಬಂಧವಿದೆಯಾ? ಯಕ್ಷಗಾನದ ಸಮಯದಲ್ಲೇ ಯಾಕೆ ಅಪರಾಧಗಳು ನಡೆಯುತ್ತಿರುತ್ತವೆ? ಕೊಲೆಯಾಗಿದ್ದು ಯಾರು? ಯಾಕೆ ಕೊಲೆಯಾದರು? ಈ ಎಲ್ಲ ಪ್ರಶ್ನೆಗಳಿಗೂ ಚಿತ್ರದಲ್ಲಿ ಉತ್ತರವಿದೆ.

ಲೇಖಕ ಮಹಾಬಲಮೂರ್ತಿ ಕೊಡ್ಲೆಕೆರೆ ಅವರ ಸಣ್ಣ ಕಥೆ ಆಧಾರಿತ ಸಿನಿಮಾ ‘ವೈಶಂಪಾಯನ ತೀರ’. ಅದಕ್ಕೆ ಸಿನಿಮಾ ರೂಪ ನೀಡಿದ್ದಾರೆ ನಿರ್ದೇಶಕ ರಮೇಶ್ ಬೇಗಾರು. ‘ಕಾಂತಾರ’ ಚಿತ್ರದಲ್ಲಿ ಭೂತಕೋಲ, ಕಂಬಳದ ಜತೆ ಕುಂದಾಪುರ ಕನ್ನಡ ಪ್ರಮುಖವಾಗಿ ನೋಡುಗರನ್ನು ಆಕರ್ಷಿಸಿತ್ತು. ಅದೇ ರೀತಿ ರಮೇಶ್ ಬೇಗಾರು ನಿರ್ದೇಶನದ ‘ವೈಶಂಪಾಯನ ತೀರ’ ಚಿತ್ರದಲ್ಲಿ ಯಕ್ಷಗಾನ ಬಹಳ ಪ್ರಾಮುಖ್ಯತೆ ವಹಿಸಿದೆ. ಕಥೆಯ ಜತೆಗೇ ಕೀಚಕ ವಧೆ, ಗದಾಯುದ್ಧ ಸೇರಿದಂತೆ ಹಲವು ಪ್ರಸಂಗಗಳನ್ನು ನೋಡಬಹುದು. ಚಿತ್ರದ ಹಲವು ಪ್ರಮುಖ ಟ್ವಿಸ್ಟ್​ಗಳು ಇರುವುದು ಯಕ್ಷಗಾನದಲ್ಲೇ. ಜತೆಗೆ ಮಲೆನಾಡ ಕನ್ನಡ ಕೇಳುವುದೇ ಚಂದ. ಜತೆಗೆ ಸಸ್ಪೆನ್ಸ್ ಥ್ರಿಲ್ಲರ್, ಮರ್ಡರ್ ಮಿಸ್ಟರಿ ಜತೆಗೆ ಅಲ್ಲಲ್ಲಿ ಕಾಮಿಡಿ, ಒಂದು ಲವ್​ಸ್ಟೋರಿ, ಫ್ಯಾಮಿಲಿ ಡ್ರಾಮಾ ಹೀಗೆ ಚಿತ್ರದಲ್ಲಿ ಹಲವು ಅಂಶಗಳಿವೆ.

ಎರಡು ತಾಸುಗಳ ಚಿತ್ರವಾದರೂ, ಕೆಲವೊಮ್ಮೆ ನಿಧಾನ ಎನಿಸಬಹುದು. ಶ್ರೀಕಾಂತ್ ಕೊಪ್ಪ ಸಂಗೀತದಲ್ಲಿ ರೊಮ್ಯಾಂಟಿಕ್ ಸಾಂಗ್ ಸೊಗಸಾಗಿದೆ. ವಿನು ಮನಸು ಹಿನ್ನೆಲೆ ಸಂಗೀತ ಕಥೆಗೆ ಪೂರಕವಾಗಿದೆ. ಪೊಲೀಸ್ ಅಧಿಕಾರಿಯಾಗಿ ಪ್ರಮೋದ್ ಶೆಟ್ಟಿ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಕಲ್ಯಾಣಿ ಪಾತ್ರದಲ್ಲಿ ವೈಜಯಂತಿ ಅಡಿಗ ಇಷ್ಟವಾಗುತ್ತಾರೆ. ಕೃಷ್ಣ ಭಟ್ ಪಾತ್ರದಲ್ಲಿ ಯಕ್ಷಗಾನ ಕಲಾವಿದನಾಗಿ ಅಬ್ಬರಿಸುವ ರವೀಶ್ ಹೆಗ್ಡೆ, ವೇಷ ಬದಲಿಸಿದ ಬಳಿಕ ಮಂಕಾಗುತ್ತಾರೆ. ಅವರಿಗೆ ಪಾತ್ರ ಆವರಿಸಿಕೊಳ್ಳಲು ಮತ್ತಷ್ಟು ಅವಕಾಶವಿತ್ತು. ನಾಯಕಿ ಮಾವನಾಗಿ ರಮೇಶ್ ಭಟ್, ಹುಡುಗನಂತಾಡುವ ಹುಡುಗಿ ನಯನಾ ಪಾತ್ರದಲ್ಲಿ ನಾಗಶ್ರೀ, ಆಕೆಯ ತಂದೆಯಾಗಿ ರಮೇಶ್ ಪಂಡಿತ್, ದೊಡ್ಡಪ್ಪನಾಗಿ ಬಾಬು ಹಿರಣ್ಣಯ್ಯ, ಯಕ್ಷಗಾನ ಕಲಾವಿದ ವೆಂಕಪ್ಪ ಹೆಗ್ಡೆಯಾಗಿ ಪ್ರಸನ್ನ ಶೆಟ್ಟಿಗಾರ್ ಗಮನ ಸೆಳೆಯುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net