

ನವದೆಹಲಿ: ಕರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿ ಯಲ್ಲಿರುವ ಕರ್ನಾಟಕಕ್ಕೆ ತುರ್ತು ಬಳಕೆಗಾಗಿ ಕೋವಿಡ್ ಲಸಿಕೆ ಮೊದಲ ಕಂತಿನಲ್ಲೇ ಲಭ್ಯವಾಗಲಿದೆ. ಹೌದು, ಕರ್ನಾಟಕ ಸಹಿತ 19 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳನ್ನು ಮೊದಲ ಹಂತದ ಲಸಿಕೆ ವಿತರಣೆಗೆ ಗುರುತಿಸಲಾಗಿದ್ದು, ಇನ್ನೊಂದು ವಾರದಲ್ಲಿ ಲಸಿಕೆ ತಲುಪಲಿದೆ. ಲಸಿಕೆ ಅಭಿಯಾನಕ್ಕೆ ಸನ್ನದ್ಧವಾಗಿರುವಂತೆ ಈ ರಾಜ್ಯಗಳಿಗೆ ಈಗಾಗಲೇ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಮೊದಲ ಹಂತದಲ್ಲಿ ಲಸಿಕೆಯನ್ನು ಶೀಘ್ರವೇ ಸರಬರಾಜು ಮಾಡಲಾಗುವುದು. ಪೂರಕ ಸಿದ್ಧತೆ ಮಾಡಿಕೊಳ್ಳುವಂತೆ ಆರೋಗ್ಯ ಸಚಿವಾಲಯದ ಪುನರುತ್ಪಾದನೆ ಮತ್ತು ಮಕ್ಕಳ ಆರೋಗ್ಯ (ಆರ್ಸಿಎಚ್) ವಿಭಾಗದ ಸಲಹೆಗಾರ ಡಾ. ಪ್ರದೀಪ್ ಹಲ್ದರ್ ಜ. 5ರ ಪತ್ರದಲ್ಲಿ ಸೂಚಿಸಿದ್ದಾರೆ. ಫಲಾನುಭವಿಗಳ ನೋಂದಣಿಯ ಆಧಾರದಲ್ಲಿ ಲಸಿಕೆಯನ್ನು ಜಿಲ್ಲೆಗಳಿಗೆ ರವಾನಿಸಲಾಗುತ್ತದೆ.
ಶೀಘ್ರ ಮೋದಿ ಘೋಷಣೆ: ಲಸಿಕೆ ವಿತರಣೆ ಪೂರ್ವಾಭ್ಯಾಸದಲ್ಲಿ ತೊಡಗಿರುವ ರಾಜ್ಯಗಳಿಗೆ ಸಾಮೂಹಿಕ ಬಳಕೆಗೆ ಲಸಿಕೆ ಯಾವಾಗ ಸಿಗಬಹುದೆಂಬ ಕುತೂಹಲ ಇದೆ. ಗುರುವಾರ ಕೇಂದ್ರ ಆರೋಗ್ಯ ಸಚಿವರೊಂದಿಗೆ ನಡೆದ ವಿಡಿಯೋ ಸಂವಾದದಲ್ಲೂ ಹಲವು ರಾಜ್ಯಗಳು ಲಸಿಕೆ ಯಾವಾಗ ಕೈ ಸೇರಬಹುದೆಂಬ ಪ್ರಶ್ನೆ ಎತ್ತಿದ್ದವು. ಆದರೆ, ಶೀಘ್ರ ಎಂದಷ್ಟೇ ಸಚಿವರಿಂದ ಉತ್ತರ ಬಂದಿತ್ತು. ವಿಜಯವಾಣಿಗೆ ಲಭ್ಯವಾದ ಮಾಹಿತಿ ಪ್ರಕಾರ ಸಂಕ್ರಾಂತಿ ವೇಳೆಗೆ ಪ್ರಧಾನಿಯವರೇ ದಿನಾಂಕ ಘೋಷಿಸಲಿದ್ದಾರೆ.
ಯಾವ್ಯಾವ ಲಸಿಕೆ?: ಕೋವಿಶೀಲ್ಡ್, ಕೊವ್ಯಾಕ್ಸಿನ್.
ಮೊದಲು ಯಾರಿಗೆ?: ಮೊದಲ ಹಂತದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್ಗಢ, ದೆಹಲಿ, ಗುಜರಾತ್, ಹರಿಯಾಣ, ಜಾರ್ಖಂಡ್, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ಪಂಜಾಬ್, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳಕ್ಕೆ ಲಸಿಕೆ ಪೂರೈಕೆಯಾಗಲಿದೆ. ಉಳಿದ 18 ರಾಜ್ಯ ಕೇಂದ್ರಾಡಳಿತ ಪ್ರದೇಶಗಳಿಗೆ ಆಯಾ ಸರ್ಕಾರಗಳಿಂದಲೇ ಲಸಿಕೆ ಸರಬರಾಜು ಆಗಲಿದೆ.
ಪುಣೆಯಿಂದ ದೆಹಲಿಗೆ ಲಸಿಕೆ: ಗುರುವಾರ ಪುಣೆಯಿಂದ ದೆಹಲಿಗೆ ಕೋವಿಶೀಲ್ಡ್ ಲಸಿಕೆಯ ಮೊದಲ ಸಾಗಣೆ ಪ್ರಕ್ರಿಯೆ ನಡೆದಿದೆ. ಏರ್ ಇಂಡಿಯಾದ ಎಐ-850 ವಿಮಾನ ಲಸಿಕೆ ಸಾಗಿಸಿದೆ. ಲಸಿಕೆ ಇಡುವುದಕ್ಕಾಗಿಯೇ ದೆಹಲಿಯ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲಾಗಿದೆ.
41 ಕೇಂದ್ರಗಳು: ದೇಶದಾದ್ಯಂತ 41 ವಿಮಾನ ನಿಲ್ದಾಣಗಳನ್ನು ಲಸಿಕೆ ಸರಬರಾಜು ಮಾಡುವ ಕೇಂದ್ರಗಳೆಂದು ಗುರುತಿಸಲಾಗಿದೆ.
ಡಿಸಿಜಿಐ ಅನುಮೋದನೆ: ಭಾರತ ಔಷಧಗಳ ಮಹಾ ನಿಯಂತ್ರಕರು (ಡಿಸಿಜಿಐ) ಜ. 3ರಂದು ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳ ಸೀಮಿತ ತುರ್ತು ಬಳಕೆಗೆ ಅನುಮೋದನೆ ನೀಡಿದ್ದರು.
ಸಾಗಾಟ ಯೋಜನೆ ಅಂತಿಮ: ಲಸಿಕೆಯನ್ನು ವಿಮಾನಗಳ ಮೂಲಕ ದೇಶದ ವಿವಿಧ ಕೇಂದ್ರಗಳಿಗೆ ಸಾಗಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ಅಂತಿಮಗೊಳಿಸಿದೆ. ಗುರುವಾರ ಅಥವಾ ಶುಕ್ರವಾರವೇ ಸಾಗಾಟ ಆರಂಭವಾಗಲಿದೆ.
ಬೆಂಗಳೂರು/ನವದೆಹಲಿ: ಲಸಿಕೆ ಅಭಿಯಾನದ ಯಶಸ್ಸಿಗೆ ಪೂರ್ವಭಾವಿಯಾಗಿ ಶುಕ್ರವಾರ ಉತ್ತರ ಪ್ರದೇಶ ಮತ್ತು ಹರಿಯಾಣ ಹೊರತುಪಡಿಸಿ ದೇಶದ ಉಳಿದೆಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇನ್ನೊಂದು ಸುತ್ತಿನ ತಾಲೀಮು ನಡೆಯಲಿದೆ. ಕರೊನಾ ಲಸಿಕೆ ವಿತರಣೆಯನ್ನು ವ್ಯವಸ್ಥಿತವಾಗಿ ನೆರವೇರಿಸುವ ಉದ್ದೇಶದಿಂದ ಶುಕ್ರವಾರ ರಾಜ್ಯದ 263 ಕಡೆ ತಾಲೀಮು ನಡೆಸಲಾಗುತ್ತದೆ. ಈ ತಾಲೀಮಿನ ಪೂರ್ವ ತಯಾರಿ ಕುರಿತಂತೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರೊಂದಿಗಿನ ಸಭೆ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಕೇಂದ್ರ ಕಳಿಸಿದ್ದೇನೇನು?: ಈವರೆಗೆ 24 ಲಕ್ಷ ಸಿರಿಂಜ್ಗಳನ್ನು ಎಲ್ಲ ಜಿಲ್ಲೆಗಳಿಗೆ ಕಳುಹಿಸಿಕೊಡಲಾಗಿದೆ. ರಾಜ್ಯದಲ್ಲಿ 10 ವಾಕ್ - ಇನ್ ಕೂಲರ್, 4 ವಾಕ್ -ಇನ್ ಫ್ರೀಜರ್, 3,201 ಐಎಲ್ ಆರ್, 3039 ಡೀಪ್ ಫ್ರೀಜರ್, 3,312 ಕೋಲ್ಡ್ ಬಾಕ್ಸ್, 46,591 ಲಸಿಕೆ ಕ್ಯಾರಿಯರ್, 2,25,749 ಐಸ್ ಪ್ಯಾಕ್ ಲಭ್ಯವಿದೆ. ಕೇಂದ್ರವು 225 ಲೀಟರ್ ಸಾಮರ್ಥ್ಯದ 64 ಐಎಲ್ಆರ್ಗಳನ್ನು ಕಳುಹಿಸಿಕೊಟ್ಟಿದೆ. ಇನ್ನೂ 2 ವಾಕ್ - ಇನ್ ಕೂಲರ್, 1 ವಾಕ್ - ಇನ್ ಫ್ರೀಜರ್ ಕಳುಹಿಸಿಕೊಡುವುದಾಗಿ ಕೇಂದ್ರ ತಿಳಿಸಿದೆ.
ಎಷ್ಟು ಕಡೆ ತಾಲೀಮು?: 24 ಜಿಲ್ಲಾಸ್ಪತ್ರೆ, 20 ಮೆಡಿಕಲ್ ಕಾಲೇಜು, 43 ತಾಲೂಕು ಆಸ್ಪತ್ರೆ, 31 ಸಮುದಾಯ ಆರೋಗ್ಯ ಕೇಂದ್ರ, 87 ಪ್ರಾಥಮಿಕ ಆರೋಗ್ಯ ಕೇಂದ್ರ, 30 ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, 28 ಖಾಸಗಿ ಆರೋಗ್ಯ ಕೇಂದ್ರಗಳಲ್ಲಿ ತಾಲೀಮು ನಡೆಯಲಿದೆ.