

ಲಂಡನ್: ಆಸ್ಟ್ರಾಜೆನಿಕಾ ಅಭಿವೃದ್ಧಿಪಡಿಸಿರುವ ಕರೊನಾ ಲಸಿಕೆಯನ್ನು ಮಕ್ಕಳ ಮೇಲೆ ಪ್ರಾಯೋಗಿಕವಾಗಿ ಪರೀಕ್ಷೆ ನಡೆಸಲಾಗುತ್ತದೆ ಎಂದು ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಶನಿವಾರ ಪ್ರಕಟಿಸಿದೆ. 6ರಿಂದ 17 ವಯೋಮಾನದ ಮಕ್ಕಳ ಮೇಲೆ ಲಸಿಕೆ ಪ್ರಯೋಗಕ್ಕೆ ಸಿದ್ಧತೆ ನಡೆಸಲಾಗಿದೆ. ಮಕ್ಕಳಲ್ಲಿ ಕೋವಿಡ್-19 ಲಸಿಕೆಯ ಸುರಕ್ಷತೆ ಮತ್ತು ರೋಗನಿರೋಧಕತೆ ಅಂದಾಜು ಮಾಡಲು ಅಧ್ಯಯನ ನೆರವಾಗಲಿದೆ ಎಂದು ವಿವಿ ತಿಳಿಸಿದೆ. ಮಕ್ಕಳ ಮೇಲಿನ ಲಸಿಕೆ ಪ್ರಯೋಗಕ್ಕಾಗಿ 300 ಸ್ವಯಂಸೇವಕರನ್ನು ನೋಂದಾಯಿಸಿಕೊಳ್ಳಲಾಗುತ್ತದೆ. ಈ ತಿಂಗಳಲ್ಲೇ ಲಸಿಕೆ ಹಾಕುವ ನಿರೀಕ್ಷೆಯಿದೆ.
ಭಾರತದಲ್ಲಿ 2ನೇ ಡೋಸ್ ನೀಡಿಕೆ: ದೇಶದಲ್ಲಿ ಕರೊನಾ ಲಸಿಕೆ ಅಭಿಯಾನದ ಎರಡನೇ ಹಂತ ಶನಿವಾರ ಆರಂಭವಾಗಿದೆ. ಮೊದಲ ಹಂತದಲ್ಲಿ ಲಸಿಕೆ ಪಡೆದವರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗುತ್ತದೆ. ಜನವರಿ 16ರಂದು ಮೊದಲ ಹಂತದ ಅಭಿಯಾನ ಆರಂಭವಾಗಿತ್ತು. ಎರಡನೇ ಡೊಸ್ನ್ನು 28 ದಿನಗಳ ಅಂತರದಲ್ಲಿ ನೀಡಬೇಕು. ಮೊದಲ ಹಂತದಲ್ಲಿ ಆರೋಗ್ಯ ಸೇವಾ ಸಿಬ್ಬಂದಿ, ಪೊಲೀಸ್ ಹಾಗೂ ನಾಗರಿಕ ಸಿಬ್ಬಂದಿ ಸಹಿತ ಮುಂಚೂಣಿ ಕಾರ್ಯಕರ್ತರು ಮೊದಲಾದವರಿಗೆ ಲಸಿಕೆ ಹಾಕಲಾಗಿದೆ. ಆದ್ಯತಾ ವಲಯದ ಒಟ್ಟು ಮೂರು ಕೋಟಿ ಜನರಿಗೆ ಲಸಿಕೆ ಹಾಕುವುದು ಗುರಿಯಾಗಿದೆ.
12,143 ಹೊಸ ಪ್ರಕರಣ: ದೇಶದಲ್ಲಿ ಶನಿವಾರ ಬೆಳಗಿನ ವರೆಗಿನ 24 ಗಂಟೆಗಳ ಅವಧಿಯಲ್ಲಿ 12,143 ಹೊಸ ಕರೊನಾ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,08,92,746ಕ್ಕೆ ಏರಿದೆ. ಈ ಅವಧಿಯಲ್ಲಿ 103 ಜನರು ಮೃತರಾಗಿದ್ದು, ಸಾವಿನ ಸಂಖ್ಯೆ 1,55,550ಕ್ಕೆ ತಲುಪಿದೆ. ಒಟ್ಟು 1,06,00,625 ಸೋಂಕಿತರು ಗುಣಮುಖರಾಗಿದ್ದಾರೆ. 1,36,571 ಸಕ್ರಿಯ ಪ್ರಕರಣಗಳಿವೆ. 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಈ ಅವಧಿಯಲ್ಲಿ ಕೋವಿಡ್-19 ಸಂಬಂಧಿತ ಸಾವಿನ ಯಾವುದೇ ಪ್ರಕರಣಗಳು ವರದಿಯಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.