

ಬೆಂಗಳೂರು: ವಿದೇಶದಿಂದ ಬರುವ ಎಲ್ಲ ಪ್ರಯಾಣಿಕರಿಗೂ ಆರ್ಟಿಪಿಸಿಆರ್ ಪರೀಕ್ಷೆ ಹಾಗೂ ಒಂದು ವಾರ ಕಡ್ಡಾಯ ಕ್ವಾರಂಟೈನ್, ಹೊಸ ವೈರಾಣು ಸೋಂಕಿತರಿಗೆ ಚಿಕಿತ್ಸೆ ನಿರ್ಧಾರಕ್ಕೆ ಸಮಿತಿ ರಚನೆ, ಲಸಿಕೆ ಪ್ರಮಾಣ ಹೆಚ್ಚಿಸಲು ಕ್ರಮ... ತೀವ್ರ ಆತಂಕ ತಂದೊಡ್ಡಿರುವ ಒಮಿಕ್ರಾನ್ ತಡೆಗೆ ಸರ್ಕಾರ ಕೈಗೊಂಡಿರುವ ಬಿಗಿ ಕ್ರಮಗಳಿವು.
ವಿಧಾನಸೌಧದಲ್ಲಿ ಮಂಗಳವಾರ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅಧ್ಯಕ್ಷತೆಯಲ್ಲಿ ನಡೆದ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಬಂದ ಸಲಹೆಗಳಂತೆ ಕೆಲವು ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ. ಯಾವ ದೇಶದಿಂದ ಬಂದರೂ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಬೇಕು. ನೆಗೆಟಿವ್ ಬಂದರೂ ಅವರನ್ನು ಕಡ್ಡಾಯವಾಗಿ 7 ದಿನ ಮನೆಯಲ್ಲಿಯೇ ಕ್ವಾರಂಟೈನ್ ಮಾಡಲು ತೀರ್ವನಿಸಲಾಗಿದೆ. ಸಭೆ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದ ಸಚಿವ ಡಾ.ಕೆ. ಸುಧಾಕರ್, ಪ್ರತಿ ದಿನ ರಾಜ್ಯಕ್ಕೆ ವಿದೇಶಗಳಿಂದ 2,500 ಪ್ರಯಾಣಿಕರು ಬರುವ ಕಾರಣ ವಿಮಾನ ನಿಲ್ದಾಣಗಳಲ್ಲಿ ಪರೀಕ್ಷೆಗೆ ಕಟ್ಟುನಿಟ್ಟಿನ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. ಹೊಸ ವೈರಾಣು ಕಂಡುಬಂದಿರುವ ದೇಶಗಳಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರಿಗೆ ಕಡ್ಡಾಯವಾಗಿ ಆರ್ಟಿಪಿಸಿಆರ್ ಪರೀಕ್ಷೆ ನಡೆಸಲಾಗುತ್ತಿದೆ. ಇನ್ನು ಮುಂದೆ ಯಾವುದೇ ದೇಶಗಳಿಂದ ಬಂದ ಪ್ರಯಾಣಿಕರಿಗೂ ಪರೀಕ್ಷೆ ನಡೆಸಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ ಎಂದರು.
ಹೋಂ ಕ್ವಾರಂಟೈನ್: ಪರೀಕ್ಷೆ ವೇಳೆ ನೆಗೆಟಿವ್ ಇದ್ದವರಿಗೆ 7 ದಿನ ಮನೆ ಕ್ವಾರಂಟೈನ್ ಕಡ್ಡಾಯ. 5ನೇ ದಿನ ಮತ್ತೆ ಮನೆಯಲ್ಲೇ ಪರೀಕ್ಷೆ ಮಾಡಲಾಗುತ್ತದೆ. ಎಸಿಂಪ್ಟಮ್ಯಾಟಿಕ್ ಆದವರಿಗೆ 7 ನೇ ದಿನ ಪರೀಕ್ಷೆ ಮಾಡಲಾಗುತ್ತದೆ. ಪಾಸಿಟಿವ್ ಬಂದರೆ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ಹೇಳಿದರು.
ಪ್ರತ್ಯೇಕ ಚಿಕಿತ್ಸೆ: ಒಮಿಕ್ರಾನ್ ವೈರಸ್ ಬಂದರೆ ಯಾವ ರೀತಿ ಚಿಕಿತ್ಸೆ ನೀಡಬೇಕು ಎನ್ನುವ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ತಂತ್ರಜ್ಞಾನ ಬಳಸಿ ಅನೇಕ ಆಪ್ ಮಾಡಿದ್ದೇವೆ. ವಿದೇಶಗಳಿಂದ ಬಂದವರು ಪಾಸಿಟಿವ್ ಆದರೆ, ಅವರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುವುದು ಎಂದು ಸುಧಾಕರ್ ತಿಳಿಸಿದರು.
ಲಸಿಕೆ ಹೆಚ್ಚಿಸಲು ಕ್ರಮ: ಲಸಿಕೆಗೆ ಕಾನೂನು ತರಬೇಕು ಇಲ್ಲದಿದ್ದರೆ, ದಂಡ ವಿಧಿಸಿ ಲಸಿಕೆ ಹಾಕಿಸಬೇಕು ಅನ್ನೋದು ಸರಿಯಲ್ಲ. ತಾಂತ್ರಿಕ ಸಲಹಾ ಸಮಿತಿ ಒಂದಿಷ್ಟು ಸಲಹೆ ನೀಡಿದೆ. ಆದರೆ ಜನ ಸ್ವಯಂಪ್ರೇರಿತರಾಗಿ ಲಸಿಕೆ ಪಡೆಯಬೇಕು ಎಂದು ಮನವಿ ಮಾಡಿದರು.
ಡಾ.ರವಿ ನೇಮಕ: ಪೋ›ಟೋಕಾಲ್ ಸಮಿತಿಗೆ ಅಧ್ಯಕ್ಷರನ್ನಾಗಿ ಡಾ.ರವಿ ಅವರನ್ನು ನೇಮಕ ಮಾಡಲಾಗಿದೆ. ಈ ಸಮಿತಿ ಹೊಸ ಪ್ರಭೇದದಲ್ಲಿ ಇನ್ಪೆಕ್ಟ್ ಆದವರಿಗೆ ಯಾವ ಚಿಕಿತ್ಸೆ ನೀಡಬೇಕು ಎಂದು ಪೋ›ಟೋಕಾಲ್ ನೀಡುತ್ತಾರೆ. ಇಡೀ ರಾಜ್ಯದಲ್ಲಿ ಈ ಪ್ರೋಟೋಕಾಲ್ ಅಳವಡಿಸಲಾಗುವುದು. ಇದಕ್ಕೆ ಯಾವ ಔಷಧಿ ಬೇಕು ಎಂಬುದನ್ನು ಕೂಡ ಹೇಳಲಾಗುತ್ತದೆ ಎಂದರು.
ಬೆಳಗಾವಿ ಅಧಿವೇಶನ: ಬೆಳಗಾವಿಯಲ್ಲಿ ವಿಧಾನಸಭೆ ಅಧಿವೇಶನ ಮಾರ್ಗಸೂಚಿ ಪ್ರಕಾರ ನಡೆಯಲಿದೆ. ತಾಂತ್ರಿಕ ಸಮಿತಿಯಲ್ಲಿ ಚರ್ಚೆ ಮಾಡಲಾಗಿದ್ದು, ಈ ಬಗ್ಗೆ ಸಿಎಂ ಬಳಿ ಮಾತನಾಡುತ್ತೇನೆ ಎಂದರು.
ಬೂಸ್ಟರ್ ಡೋಸ್ ನಿರ್ಧಾರವಾಗಿಲ್ಲ: ಬೂಸ್ಟರ್ ಡೋಸ್ ನೀಡುವ ವಿಚಾರದಲ್ಲಿ ಕೇಂದ್ರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಕರೊನಾ ವಾರಿಯರ್ಗೆ ಬೂಸ್ಟರ್ ಕೊಡೋಣ ಎಂದಿತ್ತು. ತಾಂತ್ರಿಕ ಸಮಿತಿ ಮೊದಲು ಸಲಹೆ ನೀಡಿತ್ತು. ಆದರೆ, ಕೇಂದ್ರದಿಂದ ಯಾವುದೇ ಮಾಹಿತಿ ಬಂದಿಲ್ಲ. ಹಾಗಾಗಿ ನಾವು ಏಕಪಕ್ಷೀಯ ನಿರ್ಧಾರಕ್ಕೆ ಬರಲಾಗುವುದಿಲ್ಲ ಎಂದು ಸಚಿವ ಸುಧಾಕರ್ ತಿಳಿಸಿದರು.
ಇಬ್ಬರಿಗೆ ಪಾಸಿಟಿವ್: ಹೊಸ ತಳಿ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಡಿಸೆಂಬರ್ 1 ಅಥವಾ 2 ರ ಒಳಗೆ ವಿಶ್ವ ಆರೋಗ್ಯ ಸಂಸ್ಥೆ ನಮಗೆ ಮಾರ್ಗಸೂಚಿ ಕೊಡಬಹುದು. ಬಳಿಕ ನಾವು ರಾಜ್ಯದಲ್ಲಿ ಯಾವ ಕ್ರಮ ತೆಗೆದುಕೊಳ್ಳಬೇಕು ಅಂತ ನಿರ್ಧಾರ ಮಾಡುತ್ತೇವೆ. ಸದ್ಯಕ್ಕೆ ಯಾವುದೇ ಚಟುವಟಿಕೆಗಳ ಮೇಲೆ ನಿರ್ಬಂಧ ಇಲ್ಲ ಎಂದು ಸುಧಾಕರ್ ಸ್ಪಷ್ಟಪಡಿಸಿದರು.
ಗಡಿಯಲ್ಲಿ ಬಿಗಿ ಕ್ರಮ: ಗಡಿ ಭಾಗವಾದ ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗಿದೆ. ವಿದೇಶದಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ವಹಿಸಲಾಗಿದೆ. ಸ್ವತಃ ಜಿಲ್ಲಾಧಿಕಾರಿಗಳು ನಿಗಾ ವಹಿಸುವಂತೆ ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು. ರಾಜ್ಯ ಸಹಜ ಸ್ಥಿತಿಗೆ ಮರಳುವವರೆಗೂ ಮಾಸ್ಕ್ ಬಳಸುವುದು ಕಡ್ಡಾಯವಾಗಿ ಮುಂದುವರಿಯಲಿದೆ. ಇದು ರಾಜಕೀಯ ಪಕ್ಷಗಳು ಸೇರಿದಂತೆ ಎಲ್ಲ ಸಭೆ, ಸಮಾರಂಭ ಹಾಗೂ ಮದುವೆಗಳಿಗೂ ಅನ್ವಯವಾಗಲಿದೆ ಎಂದು ಹೇಳಿದರು.
ತುಮಕೂರು: ನಗರದ 15 ನರ್ಸಿಂಗ್ ವಿದ್ಯಾರ್ಥಿಗಳಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಸೋಂಕಿತರ ಗಂಟಲು ದ್ರವವನ್ನು ಜಿನೋಮ್ ಸೀಕ್ವೆನ್ಸಿಂಗ್ಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ. ಸರ್ಕಾರದ ನಿರ್ದೇಶನದಂತೆ ನಗರದ ಅಶ್ವಿನಿ, ಅರುಣ, ಶ್ರೀದೇವಿ, ಅಕ್ಷಯ, ಶ್ರೀ ಕೃಷ್ಣ ನರ್ಸಿಂಗ್ ಕಾಲೇಜುಗಳ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ ವರದರಾಜು ನರ್ಸಿಂಗ್ ಕಾಲೇಜಿನ 90 ವಿದ್ಯಾರ್ಥಿಗಳಲ್ಲಿ 7 ವಿದ್ಯಾರ್ಥಿಗಳು ಹಾಗೂ ಶ್ರೀ ಸಿದ್ಧಗಂಗಾ ನರ್ಸಿಂಗ್ ಕಾಲೇಜಿನ 150 ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ 8 ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಿದೆ. ಕರೊನಾ ಕಾಣಿಸಿಕೊಂಡಿರುವ 15 ವಿದ್ಯಾರ್ಥಿನಿಯರೂ ಕೇರಳ ಮೂಲದವರಾಗಿದ್ದಾರೆ.