ಖಾಲಿ ಹುದ್ದೆ ಭರ್ತಿಗೆ ಶೀಘ್ರದಲ್ಲೇ ಕ್ರಮ

Dinesh gundurao
Published on

ಕೋಲಾರ: ಜನ ಸಾಮಾನ್ಯರಿಗೆ ಆರೋಗ್ಯ ಸೇವೆಯಲ್ಲಿ ಯಾವುದೇ ರೀತಿ ವ್ಯಾತ್ಯಾಸವಾಗದಂತೆ ಹೊರಗುತ್ತಿಗೆ ಆಧಾರದ ಮೇಲೆ ವೈದ್ಯರನ್ನು ನೇಮಿಸಿಕೊಳ್ಳಲಾಗುತ್ತಿದೆ. ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಅತಿ ಶೀಘ್ರದಲ್ಲೇ ಭರ್ತಿ ಮಾಡಲು ಕ್ರಮವಹಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇಲಾಖೆಯಲ್ಲಿ ಶೇ.40ರಷ್ಟು ಅಧಿಕಾರಿ, ಸಿಬ್ಬಂದಿ ಕೊರತೆಯಿದ್ದು, ನೇಮಕಕ್ಕೆ ಅನುಮತಿ ನೀಡವಂತೆ ಹಣಕಾಸು ಇಲಾಖೆಯನ್ನು ಕೋರಲಾಗಿದ್ದು, ಸಕಾರಾತ್ಮವಾಗಿ ಸ್ಪಂದನೆ ಸಿಕ್ಕಿದೆ ಎಂದರು.
ರಾಜ್ಯದಾದ್ಯಂತ ಶುಶ್ರೂಷಕರು, ತಾಂತ್ರಿಕ ಸಿಬ್ಬಂದಿ, ಪಿಎಚ್​ಒ ಹಾಗೂ ಎಚ್​ಎಒ ಹುದ್ದೆಗಳು ಖಾಲಿಯಿವೆ. ಮುಂದಿನ ಎರಡು ವರ್ಷಗಳಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು. ಈಗಾಗಲೇ ಎಂಬಿಬಿಎಸ್​ ವೈದ್ಯರ ಕೌನ್ಸಿಲಿಂಗ್​ ನಡೆಯುತ್ತಿದ್ದು, ಶ್ರೀವೇ ಗ್ರಾಮೀಣ ಭಾಗದ ಆಸ್ಪತ್ರೆಗಳಿಗೆ ವೈದ್ಯರನ್ನು ಕಳುಹಿಸಲಾಗುವುದು ಎಂದು ತಿಳಿಸಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು, ಸಿಬ್ಬಂದಿ ಕೊರತೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿದ್ದು, ಅಗತ್ಯವಿರುವ ಕಡೆ ಗುತ್ತಿಗೆ ಆಧಾರದ ಮೇಲೆ ವೈದ್ಯರ ನೇಮಕಕ್ಕೆ ಅನುಮತಿ ನೀಡಲಾಗಿದೆ ಎಂದು ಹೇಳಿದರು.

ನಕಲಿ ವೈದ್ಯರ ವಿರುದ್ಧ ಕ್ರಮಕ್ಕೆ ಹೊಸ ಬಿಲ್​

ನಕಲಿ ಕ್ಲಿನಿಕ್​ಗಳ ಹಾವಳಿ ತಪ್ಪಿಸುವ ಉದ್ದೇಶದಿಂದ ಈಗಾಗಲೇ ಕ್ಲಿನಿಕ್​ಗಳ ಮುಂದೆ ವೈದ್ಯರ ವಿವರಗಳನ್ನು ಅಳವಡಿಕೆಗೆ ಸೂಚನೆ ನೀಡಲಾಗಿದ್ದು, ಅಲೋಪತಿ ವೈದ್ಯರು ನೀಲಿ ಬಣ್ಣ, ಆಯುಷ್​ ವೈದ್ಯರು ಹಸಿರು ಬಣ್ಣ ಲಕದಲ್ಲಿ ವಿವರಗಳನ್ನು ಪ್ರಕಟಿಸಲು ಸುತ್ತೋಲೆ ಹೊರಡಿಸಲಾಗಿದೆ ಎಂದು ಹೇಳಿದರು.
ನಕಲಿ ವೈದ್ಯರ ವಿರುದ್ಧ ಕ್ರಮಕೈಗೊಳ್ಳಲು ಸರ್ಕಾರದಿಂದ ಜಾರಿಗೊಳಿಸಿರುವ ಹೊಸ ಬಿಲ್​ಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಅದರಂತೆ ಮುಂದಿನ ದಿನಗಳಲ್ಲಿ ನಕಲಿ ವೈದ್ಯರ ವಿರುದ್ಧವಾಗಿ ಕಠಿಣ ಕ್ರಮಕೈಗೊಳ್ಳಲು ಅವಕಾಶವಿದೆ, ಈಗಲೂ ಸಹ ಕೋಲಾರ ಜಿಲ್ಲೆಯಲ್ಲೇ ಅತಿ ಹೆಚ್ಚು ದೂರುಗಳು ದಾಖಲಾಗಿವೆ ಎಂದು ತಿಳಿಸಿದರು.

ಸ್ಕ್ಯಾನಿಂಗ್​ ಸೆಂಟರ್​ಗಳ ಮೇಲೆ ಹದ್ದಿನ ಕಣ್ಣು
ರಾಜ್ಯದಾದ್ಯಂತ ಭ್ರೂಣಲಿಂಗ ಪತ್ತೆ ಮಾಡುವ ಸ್ಕ್ಯಾನಿಂಗ್​ ಸೆಂಟರ್​ಗಳ ಮೇಲೆ ಇಲಾಖೆಯ ಅಧಿಕಾರಿಗಳು ನಿರಂತರವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಹದ್ದಿನ ಕಣ್ಣಿಡಲಾಗಿದೆ. ಮಂಡ್ಯ, ಬಾಗಲಕೋಟೆಯಲ್ಲಿ ಸಾಕ್ಷಿ ಸಮೇತವಾಗಿ ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಭ್ರೂಣಲಿಂಗ ಪತ್ತೆ ಮಾಡುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಇಲಾಖೆಯಿಂದಲೇ ಗರ್ಭಿಣಿಯೊಬ್ಬರನ್ನು ಗುರುತಿಸಿ ಸ್ಕ್ಯಾನಿಂಗ್ ಸೆಂಟರ್​ಗಳಿಗೆ ಕಳುಹಿಸಿ ಸಾಕ್ಷಿ ಸಮೇತವಾಗಿ ಹಿಡಿದಾಗ ಮಾತ್ರವೇ ಕ್ರಮಕೈಗೊಳ್ಳಲು ಸಾಧ್ಯವಾಗುತ್ತದೆ, ಕೋಲಾರದಲ್ಲೂ ಹಲವು ಪ್ರಕರಣಗಳನ್ನು ದಾಖಲು ಮಾಡಲಾಗಿದೆ ಎಂದು ತಿಳಿಸಿದರು.

ದರಪಟ್ಟಿ ಅಳವಡಿಕೆ ಕಡ್ಡಾಯ

ಇಂತಿಷ್ಟೇ ಶುಲ್ಕ ವಿಧಿಸಿ ಎಂದು ಹೇಳಲು ಸಾಧ್ಯವಿಲ್ಲ, ಆದರೆ ಖಾಸಗಿ ಆಸ್ಪತ್ರೆಗಳು ಆರೋಗ್ಯ ಸೇವೆ ನಿಗಧಿಪಡಿಸಿರುವ ಶುಲ್ಕದ ವಿವರಗಳನ್ನು ಕಡ್ಡಾಯವಾಗಿ ಲಕವನ್ನು ಕಡ್ಡಾಯವಾಗಿ ಅಳವಡಿಸಬೇಕು, ಈ ಬಗ್ಗೆ ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಕೊತ್ತೂರು ಜಿ. ಮಂಜುನಾಥ್​, ವಿಧಾನ ಪರಿಷತ್​ ಸದಸ್ಯರಾದ ಎಂ.ಎಲ್​.ಅನಿಲ್​ಕುಮಾರ್​, ಇಂಚರ ಗೋವಿಂದರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್​ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net