

ಬೆಂಗಳೂರು: ರಾಜ್ಯದಲ್ಲಿ ವಿವಿಧ ಹಂತದ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ 14,523 ಹುದ್ದೆಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಕುರಿತ ತೀರ್ಪನ್ನು ಕಾಯ್ದಿರಿಸಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಮಂಜೂರಾದ ವಿವಿಧ ಒಟ್ಟು 34,967 ಹುದ್ದೆಗಳ ಪೈಕಿ 14,523 ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಹಂತ-ಹಂತವಾಗಿ ಭರ್ತಿ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.
ಈ ವಿಚಾರವಾಗಿ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಪ್ರಕರಣದ ಅಮಿಕಾಸ್ ಕ್ಯೂರಿ ವಕೀಲ ಶ್ರೀಧರ್ ಪ್ರಭು, ರಾಜ್ಯದಲ್ಲಿ ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಹುದ್ದೆಗಳ ಸ್ಥಿತಿ ಅತ್ಯಂತ ವಿಶಮವಾಗಿದೆ. ಸರ್ಕಾರದ ಹೇಳಿಕೆಯಂತೆ ಒಟ್ಟು ಮಂಜೂರಾದ 34,967 ಹುದ್ದೆಗಳ ಪೈಕಿ 14, 523 ಹುದ್ದೆಗಳು ಖಾಲಿ ಇವೆ.
ಗ್ರಾಮೀಣ ಕಡ್ಡಾಯ ಸೇವೆ ನೆರವಿನಿಂದ ಪರಿಸ್ಥಿತಿ ನಿಭಾಯಿಸಲಾಗುತ್ತಿದೆ ಎಂದು ಸರ್ಕಾರ ಹೇಳಿದೆ. ಆದರೆ, ಗ್ರಾಮೀಣ ಕಡ್ಡಾಯ ಸೇವೆ ರದ್ದುಪಡಿಸಲಾಗಿದೆ. ಇದು ಸರ್ಕಾರದ ನೀತಿ ನಿರ್ಧಾರಕ ವಿಚಾರ ಆಗಿರಬಹುದು. ಆದರೆ, ಗ್ರಾಮೀಣ ಕಡ್ಡಾಯ ಸೇವೆ ಇಲ್ಲ ಎಂದಾದ ಮೇಲೆ ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರ ಯಾವ ಕ್ರಮಗಳನ್ನು ಕೈಗೊಳ್ಳಲಿದೆ ಎಂಬುದು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದರು.
ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿ 16 ಸಾವಿರಕ್ಕೂ ಅಧಿಕ ಹುದ್ದೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಸರ್ಕಾರ ಹೇಳಿದೆ. ಆದರೆ, ಕೇಂದ್ರ ಸರ್ಕಾರ ಈ ಯೋಜನೆಯಡಿ ಅನುದಾನ ನೀಡವುದರಿಂದ, ಕೇಂದ್ರ ಸರ್ಕಾರವೂ ಇದರ ಬಗ್ಗೆ ಗಮನಹರಿಸಬೇಕಿದೆ. ಡಿ ಗ್ರೂಪ್ ಹುದ್ದೆಗಳು ಗ್ರಾಮೀಣ ಆರೋಗ್ಯ ಸೇವೆಯ ಬೆನ್ನಲಬು ಆಗಿವೆ. ಆದರೆ, ರಾಜ್ಯದಲ್ಲಿ 10 ಸಾವಿರಕ್ಕೂ ಅಧಿಕ ಡಿ. ಗ್ರೂಪ್ ಹುದ್ದೆಗಳು ಖಾಲಿ ಇದ್ದಾವೆ ಎಂದು ನ್ಯಾಯಪೀಠದ ಮುಂದೆ ತಿಳಿಸಿದರು.
ಸರ್ಕಾರದ ಪರ ವಕೀಲರು ವಾದ ಮಂಡಿಸಿ, ಖಾಲಿ ಹುದ್ದೆಗಳ ಭರ್ತಿಗೆ ಹಂತ-ಹಂತವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ವೈದ್ಯಾಧಿಕಾರಿಗಳು, ತಜ್ಞರು, ದಂತ ವೈದ್ಯರು, ಲ್ಯಾಬ್ ಟೆಕ್ನಿಷಿಯನ್, ಫಾರ್ಮಸಿ ಅಧಿಕಾರಿಗಳು, ನರ್ಸಿಂಗ್ ಅಧಿಕಾರಿಗಳು ಹಾಗೂ ಡಿ ಗ್ರೂಪ್ ನೌಕರರು ಸೇರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಒಟ್ಟು ಮಂಜೂರಾದ ಹುದ್ದೆಗಳ ಸಂಖ್ಯೆ 34,967 ಇದ್ದು, ಇದರಲ್ಲಿ 20,444 ಹುದ್ದೆಗಳು ಭರ್ತಿಯಾಗಿವೆ, 14,523 ಹುದ್ದೆಗಳು ಖಾಲಿ ಇದ್ದು, ಹೊರಗುತ್ತಿಗೆ, ಸರ್ಕಾರಿ ಗುತ್ತಿಗೆ, ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯಡಿ 16,501 ಹುದ್ದೆಗಳು ಕಾರ್ಯನಿರ್ವಹಿಸುತ್ತಿವೆ.
ಗ್ರಾಮೀಣ ಕಡ್ಡಾಯ ಸೇವೆಯಡಿ 2,371 ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. 204 ಜೂನಿಯರ್ ಲ್ಯಾಬ್ ಟೆಕ್ನಿಷಿಯನ್ ಹುದ್ದೆಗಳ ಭರ್ತಿ ಪ್ರಕ್ರಿಯೆ ನಡಿತಿದೆ. 413 ಹುದ್ದೆಗಳ ಭರ್ತಿ ಪ್ರಸ್ತಾವನೆ ಪರಿಶೀಲನೆಯಲ್ಲಿದೆ. 498 ಫಾರ್ಮಸಿ ಅಧಿಕಾರಿಗಳ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದ್ದು, 705 ಹುದ್ದೆಗಳ ಭರ್ತಿ ಪ್ರಸ್ತಾವನೆ ಪರಿಶೀಲನೆಯಲ್ಲಿದೆ, ಖಾಲಿ ಇರುವ 10,253 ಡಿ ಗ್ರೂಪ್ ಹುದ್ದೆಗಳಲ್ಲಿ ಶೇ.75ರಷ್ಟು ಹುದ್ದೆಗಳ ಭರ್ತಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಸರ್ಕಾರ ಹೇಳಿದೆ.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ತೀರ್ಪು ಕಾಯ್ದರಿಸುವುದಾಗಿ ಹೇಳಿದೆ