

ಬೆಂಗಳೂರು: ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಟ್ಟು ಹೊರ ಹೋಗುವುದಿಲ್ಲ. ಬಿಜೆಪಿಯಲ್ಲೇ ಸಕ್ರೀಯನಾಗಿ ಕೆಲಸ ಮಾಡುತ್ತಿದ್ದು, ಯಾರ ಮುಲಾಜಿಗೂ ಒಳಗಾಗಿಲ್ಲ ಎಂದು ಹೇಳುತ್ತಾ ವಸತಿ ಸಚಿವ ವಿ.ಸೋಮಣ್ಣ ಸುದ್ದಿಗೋಷ್ಠಿಯಲ್ಲಿ ಭಾವುಕರಾಗಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪಕ್ಕದಲ್ಲಿ ಕುಳಿತು ಸಚಿವ ವಿ.ಸೋಮಣ್ಣ ವಿಮಾನದಲ್ಲಿ ಪ್ರಯಾಣಿಸುತ್ತಿರುವ ಫೋಟೋ ವೈರಲ್ ಆಗುತ್ತಿದ್ದಂತೆ ಸಾಕಷ್ಟು ರಾಜಕೀಯ ಚರ್ಚೆಗಳಿಗೆ ಕಾರಣವಾಗಿತ್ತು. ವಿ.ಸೋಮಣ್ಣ ಬಿಜೆಪಿ ತೊರೆದು ಕಾಂಗ್ರೆಸ್ಗೆ ಸೇರ್ಪಡೆಗೊಳ್ಳುತ್ತಾರೆ ಎಂದು ಊಹಾಪೋಹ ಸೃಷ್ಟಿಯಾಗಿತ್ತು.
ಈ ಬಗ್ಗೆ ಸ್ಪಷ್ಟನೆ ನೀಡುತ್ತಾ ವಿ.ಸೋಮಣ್ಣ ಸುದ್ದಿಗೋಷ್ಠಿಯಲ್ಲಿ ಭಾವುಕರಾದರು. ನಾನು ಕಾಂಗ್ರೆಸ್ ಸೇರುತ್ತೇನೆ ಎಂಬ ವದಂತಿ ಹಬ್ಬಿದೆ. ಇದು ಸತ್ಯಕ್ಕೆ ದೂರವಾದುದು. ಡಿ.ಕೆ.ಶಿ ಅವರೊಂದಿಗೆ ಸಂಚರಿಸುತ್ತಿದ್ದ ಫೋಟೋ ವೈರಲ್ ಆಗಿದ್ದು, ಇದು ಸಾಕಷ್ಟು ಹಳೆಯ ಫೋಟೋ. ಹಳೆ ಫೋಟೋ ವೈರಲ್ ಆಗಿರುವುದಕ್ಕೆ ನಾನೇನು ಮಾಡಲು ಸಾಧ್ಯವಿಲ್ಲ. ನಾನೊಬ್ಬ ಪ್ರಾಮಾಣಿಕ ವ್ಯಕ್ತಿಯಾಗಿದ್ದು, ಬಿಜೆಪಿಯನ್ನು ಬಿಟ್ಟು ಹೋಗುವುದಿಲ್ಲ. ನನಗೆ ಏನಾದರೂ ಸಮಸ್ಯೆ ಆಗಿದ್ದರೇ ರಾಜೀನಾಮೆ ಕೊಡುತ್ತಿದ್ದೆ. ಆದರೆ ಆ ರೀತಿಯ ಸಮಸ್ಯೆ ನನಗೆ ಏನೂ ಆಗಿಲ್ಲ. ಮುಂದಿನ ಚುನಾವಣೆಯಲ್ಲಿ ಟಿಕೆಟ್ ಕೊಟ್ಟರೇ ಸ್ಪರ್ಧಿಸುತ್ತೇನೆ. ಇಲ್ಲದಿದ್ದರೇ ಪಕ್ಷದ ಕೆಲಸ ಮಾಡಿಕೊಂಡು ಹೋಗುತ್ತೇನೆ ಎಂದು ಹೇಳಿದರು.
ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿದ್ದು, ನನ್ನ ಇತಿಮಿತಿ ಗೊತ್ತಿದೆ. ಹೊಟ್ಟೆ ಪಾಡಿಗಾಗಿ ಬೆಂಗಳೂರಿಗೆ ಬಂದವನು, ಪಿಗ್ಮಿ ಸಂಗ್ರಹಿಸಿ ಜೀವನ ದೂಡಿದ್ದೇನೆ. ಸ್ವಾಭಿಮಾನ ಮಾರಾಟ ಮಾಡಿ ಜೀವನ ಮಾಡಲು ನನಗೆ ಗೊತ್ತಿಲ್ಲ ಎಂದು ಕಷ್ಟದ ದಿನಗಳನ್ನು ನೆನೆದು ಸಚಿವ ವಿ.ಸೋಮಣ್ಣ ಸುದ್ದಿಗೋಷ್ಠಿಯಲ್ಲಿ ಕಣ್ಣೀರು ಹಾಕಿದರು.