ಅಪ್ರಾಪ್ತೆಗೆ ಕಿರುಕುಳ; ಪ್ರಯಾಣಿಕರಿಂದ ರೈಲ್ವೆ ಸಿಬ್ಬಂದಿಗೆ ಥಳಿತ.. ಮುಂದೇನಾಯ್ತು?

Untitled-design-2024-09-13T172330.423
Published on

ಲಖನೌ: ಅಪ್ರಾಪ್ತಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ರೈಲ್ವೆ ಸಿಬ್ಬಂದಿಯನ್ನು ಥಳಿಸಿ ಕೊಂದಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಸಂತ್ರಸ್ತೆಯ ತಾಯಿ ಆರೋಪಿ ಮೃತನ ವಿರುದ್ಧ ಕಿರುಕುಳದ ದೂರು ನೀಡಿದ್ದರೆ, ನೌಕರನ ಕುಟುಂಬಸ್ಥರು ಸಹ ಪೊಲೀಸರಿಗೆ ಹತ್ಯೆ ಮಾಡಿರುವ ಕುರಿತು ದೂರು ದಾಖಲಿಸಿದ್ದಾರ ಎನ್ನಲಾಗಿದೆ.

ಅಪ್ರಾಪ್ತ ಬಾಲಕಿ ತನ್ನ ಕುಟುಂಬಸ್ಥರೊಂದಿಗೆ ಲಖನೌದಿಂದ ಕಾನ್ಪುರಕ್ಕೆ ಹಮ್ಸಫರ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದಳು. ಬಾಲಕಿಯ ತಾಯಿ ಶೌಚಾಲಯಕ್ಕೆ ಹೋಗಿದ್ದಾಗ ರೈಲ್ವೆ ಸಿಬ್ಬಂದಿ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ತನ್ನ ತಾಯಿ ಬಂದಿ ಬಳಿಕ ಬಾಲಕಿ ನಡೆದ ವಿಚಾರವನ್ನೆಲ್ಲಾ ತಿಳಿಸಿದ್ದಾಳೆ. ಮಹಿಳೆ ತನ್ನ ಕುಟುಂಬದವರಿಗೆ ವಿಷಯ ತಿಳಿಸಿದ ಬಳಿಕ ಅವರೆಲ್ಲ ರೈಲ್ವೆ ಸಿಬ್ಬಂದಿಗೆ ಥಳಿಸಿದ್ದಾರೆ. ಅಲ್ಲದೆ ಸಹಪ್ರಯಾಣಿಕರು ಆತನನ್ನು ಹಿಡಿದು ಹೊಡೆದಿದ್ದಾರೆ.

ರೈಲ್ವೆ ಕಾನ್ಪುರ ಸೆಂಟ್ರಲ್​ ತಲುಪಿದ ತಕ್ಷಣ ಸರ್ಕಾರಿ ರೈಲ್ವೆ ಪೊಲೀಸ್​​​ (ಜಿಆರ್‌ಪಿ) ಆರೋಪಿ ರೈಲ್ವೆ ಕಾರ್ಮಿಕನನ್ನು ಬಂಧಿಸಿದ್ದಾರೆ. ಬಂಧಿಸುವಷ್ಟರಲ್ಲಿ ರೈಲಿನಲ್ಲಿದ್ದವರು ಥಳಿಸಿದ ಕಾರಣ ಆತ ಗಂಭೀರವಾಗಿ ಗಾಯಗೊಂಡಿದ್ದಾನೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ರೈಲ್ವೆ ಸಿಬ್ಬಂದಿ ಮೃತಪಟ್ಟಿದ್ದಾನೆ.

ಮೃತನನ್ನು ಪ್ರಶಾಂತ್​​​​ ಕುಮಾರ್​ ಎಂದು ಗುರುತಿಸಲಾಗಿದೆ. ಬಿಹಾರದ ಮುಜಾಫರ್‌ಪುರ ಜಿಲ್ಲೆಯ ಸಮಸ್ತ್‌ಪುರ ಗ್ರಾಮದಲ್ಲಿ ವಾಸಿಸುವ ಆತನ ಕುಟುಂಬಕ್ಕೆ ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಪ್ರಶಾಂತ್ ಅಂತಹ ವ್ಯಕ್ತಿಯಲ್ಲ, ಪಿತೂರಿಯ ಭಾಗವಾಗಿ ಅವನನ್ನು ಕೊಲ್ಲಲಾಗಿದೆ ಎಂದು ತೋರುತ್ತದೆ. ಅವನನ್ನು ಇಷ್ಟು ಮಂದಿ ಥಳಿಸುತ್ತಿದ್ದರೆ ಸುತ್ತಲೂ ರೈಲ್ವೆ ಪೊಲೀಸ್ ಪಡೆಯ ಸಿಬ್ಬಂದಿ ಇರಲಿಲ್ಲವೇ ಎಂದು ಮೃತನ ಚಿಕ್ಕಪ್ಪ ಹೇಳಿದ್ದಾರೆ.

ರೈಲು ಐಶ್‌ಬಾಗ್ ದಾಟಿದ ಬಳಿಕ ಬಾಲಕಿ ತನಗೆ ಕಿರುಕುಳ ನೀಡಲಾಯಿತು ಎಂದು ಹೇಳಿದರು. ಆಕೆಯ ಕುಟುಂಬ ಸದಸ್ಯರು ಮತ್ತು ಇತರ ಪ್ರಯಾಣಿಕರು ಆರೋಪಿಯನ್ನು ಥಳಿಸಿದ್ದಾರೆ. ಕಾನ್ಪುರ ಸೆಂಟ್ರಲ್‌ನಲ್ಲಿ ಆರೋಪಿಯನ್ನು ಹಸ್ತಾಂತರಿಸಲಾಗಿದೆ. ಜಿಆರ್‌ಪಿ ದೂರು ದಾಖಲಿಸಿದ್ದು, ಆತನನ್ನು ಆಸ್ಪತ್ರೆಗೆ ಸಾಗಿಸಿದಾಗ ಆತ ಮೃತಪಟ್ಟಿದ್ದಾನೆ ಎಂದು ಜಿಆರ್‌ಪಿ (ಪ್ರಯಾಗ್‌ರಾಜ್) ಪೊಲೀಸ್ ಅಧೀಕ್ಷಕ ಅಭಿಷೇಕ್ ಯಾದವ್ ತಿಳಿಸಿದ್ದಾರೆ. (ಎಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net