ಉಪ್ರದಲ್ಲಿ ಬಿಜೆಪಿ ಹೋಳಿ; ಮೋದಿ ವರ್ಚಸ್ಸು-ಯೋಗಿ ಜನಪ್ರಿಯತೆ ಪ್ಲಸ್ ಪಾಯಿಂಟ್

df
Published on
ದಿಲ್ಲಿ ಗದ್ದುಗೆಗೆ ಹೋಗಲು ಮುಖ್ಯದ್ವಾರವೆಂದೇ ಹೇಳಲಾಗುವ ಉತ್ತರ ಪ್ರದೇಶದಲ್ಲಿ 37 ವರ್ಷಗಳ ನಂತರ ಅಧಿಕಾರದಲ್ಲಿದ್ದ ಪಕ್ಷಕ್ಕೆ ಜನರು ಮನ್ನಣೆ ನೀಡಿದ್ದಾರೆ. ಈ ಮೂಲಕ ಯೋಗಿ ಆದಿತ್ಯನಾಥ ಸತತ ಎರಡನೇ ಅವಧಿಗೆ ಸಿಎಂ ಆಗಲಿದ್ದಾರೆ. ಈ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ (ಎಸ್​ಪಿ) ಪ್ರಬಲ ಪೈಪೋಟಿ ನೀಡಿದ್ದು, ಹಿಂದಿನ ಚುನಾವಣೆಗಿಂತ ಶೇ. 10ರಷ್ಟು ಮತಗಳಿಕೆ ಹೆಚ್ಚಿಸಿಕೊಂಡು 2024ರ ಲೋಕಸಭಾ ಚುನಾವಣೆ ಸುಲಭವಲ್ಲ ಎಂಬ ಸಂದೇಶವನ್ನು ಬಿಜೆಪಿಗೆ ರವಾನಿಸಿದೆ. ಕಾಂಗ್ರೆಸ್ ಮತ್ತು ಬಿಎಸ್​ಪಿ ಭಾರಿ ಮುಖಭಂಗ ಅನುಭವಿಸಿವೆ.

|ರಾಘವ ಶರ್ಮ ನಿಡ್ಲೆ,ನವದೆಹಲಿ

ಉತ್ತರ ಪ್ರದೇಶದಲ್ಲಿ ಬುಲ್ಡೋಜರ್ ಗೆದ್ದಿದೆ! ಹೌದು, ಚುನಾವಣೆಯಲ್ಲಿ ಹೆಚ್ಚು ಸದ್ದುಮಾಡಿದ್ದೇ ಸಿಎಂ ಯೋಗಿ ಆದಿತ್ಯನಾಥರ ಬುಲ್ಡೋಜರ್. ಧ್ವಂಸ ಮತ್ತು ಅಭಿವೃದ್ಧಿಯ ಸಂಕೇತವಾದ ಬುಲ್ಡೋಜರನ್ನು ನೆಚ್ಚಿಕೊಂಡ ಮತದಾರರು, ಸಮಗ್ರ ಅಭಿವೃದ್ಧಿಯ ದೃಷ್ಟಿಕೋನವನ್ನಿಟ್ಟುಕೊಂಡು ಕೆಲಸ ಮಾಡಿದ ಸರ್ಕಾರವನ್ನೇ ಮರು ಆಯ್ಕೆ ಮಾಡಿದ್ದಾರೆ. ಇದರೊಟ್ಟಿಗೆ, ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ಜತೆಗೂಡಿದೆ.

2017ರಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ, ಹದಗೆಟ್ಟಿದ್ದ ಕಾನೂನು ಸುವ್ಯವಸ್ಥೆ ಯನ್ನು ಸರಿದಾರಿಗೆ ತಂದ ಸಿಎಂ ಯೋಗಿ, ಗ್ಯಾಂಗ್​ಸ್ಟರ್ ಕಾಯ್ದೆ ಮೂಲಕ ರೌಡಿ, ಮಾಫಿಯಾಗಳ ಹೆಡೆಮುರಿ ಕಟ್ಟಿ, ಹಲವು ವರ್ಷಗಳಿಂದ ಜನತೆಯ ಮನದೊಳಗೆ ಹುದುಗಿದ್ದ ‘ಭಯ-ಭೀತಿ’ಯನ್ನು ಹೊರಗಟ್ಟಿದ್ದರಿಂದಲೇ ಮುಖ್ಯವಾಗಿ ಮಹಿಳಾ ಮತದಾರರು ‘ಬುಲ್ಡೋಜರ್ ಬಾಬಾ’ ಯೋಗಿ ಆದಿತ್ಯನಾಥರನ್ನೇ ಮತ್ತೊಮ್ಮೆ ಗೆಲ್ಲಿಸಿದ್ದಾರೆ. ಸಮಾಜವಾದಿ ಮತ್ತು ಬಹುಜನ ಸಮಾಜ ಪಕ್ಷದ ಸರ್ಕಾರಗಳಿದ್ದಾಗ ಮೆರೆದಾಡುತ್ತಿದ್ದ ಮಾಫಿಯಾ ಗ್ಯಾಂಗ್​ಗಳನ್ನು ಕಾನೂನಿನ ಸಂಕೋಲೆಯಲ್ಲಿ ಸಿಲುಕಿಸಿದ ಯೋಗಿ ಸರ್ಕಾರ, ಹಲವಾರು ರೌಡಿಶೀಟರ್​ಗಳನ್ನು ಎನ್​ಕೌಂಟರ್​ನಲ್ಲಿ ಕೊನೆಗೊಳಿಸಿರುವುದೂ ಜನರಲ್ಲಿ ನೆಮ್ಮದಿ ತಂದಿದೆ.

ಪಶ್ಚಿಮ ಉತ್ತರ ಪ್ರದೇಶ, ಬುಂದೇಲ್​ಖಂಡ್, ಅವಧ್ ಪ್ರದೇಶ ಮತ್ತು ಪೂರ್ವಾಂಚಲ ಭಾಗಗಳ ಯಾವೆಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆಯೋ ಅಲ್ಲಿ ಅರ್ಧದಷ್ಟು ಮತದಾರರು ಅಭ್ಯರ್ಥಿಗಳು ಯಾರೆನ್ನುವುದನ್ನೂ ನೋಡದೆ, ‘ಕಾನೂನು ಸುವ್ಯವಸ್ಥೆ ಮತ್ತು ಸದೃಢ ಆಡಳಿತ’ಕ್ಕೆ ಮತ ಹಾಕಿದ್ದಾರೆ. ಚುನಾವಣೆಯೊಂದರಲ್ಲಿ ‘ಕಾನೂನು ಸುವ್ಯವಸ್ಥೆ’ ಬಹುದೊಡ್ಡ ವಿಷಯವಾಗಿ, ಜನರು ಅದಕ್ಕೇ ಮತ ಹಾಕಿರುವುದು ಇದೇ ಮೊದಲಬಾರಿ ಎನ್ನಲಾಗುತ್ತಿದೆ. ಒಂದರ್ಥದಲ್ಲಿ ಬಿಜೆಪಿ ಪಾಲಿಗೆ ಇದು ‘ಪಾಸಿಟಿವ್ ವೋಟಿಂಗ್’. ಬೆಲೆ ಏರಿಕೆ, ನಿರುದ್ಯೋಗ ಪ್ರಮಾಣ ಹೆಚ್ಚಳ, ಕರೊನಾ ಸಂಕಟದಿಂದ ಉಂಟಾದ ಆರ್ಥಿಕ ಸಂಕಷ್ಟಗಳ ಮಧ್ಯೆಯೂ ಮೋದಿ-ಯೋಗಿ ಪ್ರಾಮಾಣಿಕವಾಗಿ ಜನಪರ ಕೆಲಸ ಮಾಡಿದ್ದಾರೆ ಎಂಬ ಅನಿಸಿಕೆಗಳೂ ಬಿಜೆಪಿಗೆ ಮತ ತಂದುಕೊಟ್ಟಿದೆ.

ಕೇಂದ್ರ ಸರ್ಕಾರದ ಗರೀಬ್ ಕಲ್ಯಾಣ್ ಯೋಜನೆಯಲ್ಲಿ ರೇಷನ್, ಪಿಎಂ ಆವಾಸ್ ಮತ್ತು ಮುಖ್ಯಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಗ್ರಾಮೀಣ ಜನತೆಗೆ ಮನೆ ಕಟ್ಟಲು ಹಣಕಾಸು ನೆರವು ನೀಡಿರುವುದರಿಂದಲೂ ಮತದಾರ ಬಿಜೆಪಿ ಕಡೆ ಹೊರಳಿದ್ದಾನೆ. ಕರ್ತವ್ಯದಲ್ಲಿ ಸಿಎಂ ಯೋಗಿ ಪ್ರಾಮಾಣಿಕತೆ, ದಕ್ಷತೆಯನ್ನೂ ಜನ ಮೆಚ್ಚಿಕೊಂಡಿದ್ದಾರೆ. ಯೋಗಿ ಕಾರ್ಯಶೈಲಿ ಬಗ್ಗೆ ಪಕ್ಷದ ಮುಖಂಡರು, ಶಾಸಕರು ಮತ್ತು ಕಾರ್ಯಕರ್ತರ ಮಧ್ಯೆ ಆರಂಭಿಕ ಹಂತದಲ್ಲಿ ಅಸಮಾಧಾನಗಳಿದ್ದರೂ, ಯೋಗಿ ನಾಯಕತ್ವಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಯಿತ್ತು. ವಾರಾಣಸಿಯಲ್ಲಿ ಕಾಶಿ ಕಾರಿಡಾರ್ ನಿರ್ವಣ, ಅಯೋಧ್ಯೆಯಲ್ಲಿ ರಾಮಮಂದಿರ ಸೇರಿದಂತೆ ಹಿಂದು ಧಾರ್ವಿುಕ ಅಸ್ಮಿತೆಗೆ ಪೂರಕವಾಗಿ ಬಿಜೆಪಿ ಕೆಲಸ ಮಾಡುತ್ತಿದೆ ಎಂಬ ಸಾರ್ವಜನಿಕ ಗ್ರಹಿಕೆಯೂ ಗಟ್ಟಿಗೊಂಡಿದ್ದರಿಂದ ಹಿಂದೂ ಮತದಾರರಲ್ಲಿ ‘ಬಿಜೆಪಿ ಹಿಂದೂ ಪಾರ್ಟಿ’ ಎಂಬ ಭಾವನೆ ಬೇರೂರಿದ್ದೂ ಈ ಗೆಲುವಿಗೆ ಕೊಡುಗೆ ನೀಡಿದೆ.

2017ರಲ್ಲಿ 50 ಸೀಟನ್ನೂ ಗೆಲ್ಲದೆ ಮೂಲೆಗುಂಪಾಗಿದ್ದ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಾರ್ಟಿ ಬಿಜೆಪಿಗೆ ಪರ್ಯಾಯ ಎಂಬಂತೆ ಭಾರೀ ಹೋರಾಟ ಪ್ರದರ್ಶಿಸಿದೆ. ಎಸ್​ಪಿ ಸೀಟುಗಳು ಮತ್ತು ಮತಪ್ರಮಾಣ ಏರಿಕೆಯಾಗಿದೆ. ರಾಜ್ಯದಲ್ಲಿ ಪ್ರಬಲ ವಿಪಕ್ಷವಾಗಿ ಹೊರಹೊಮ್ಮಿರುವ ಎಸ್​ಪಿ, 2024 ಲೋಕಸಭೆ ಚುನಾವಣೆಗೆ ಮಹತ್ವದ ವಿಪಕ್ಷ ದಳವಾಗಲಿದೆ. ಈಗಿರುವ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ಹೊರತುಪಡಿಸಿದ ಆಮ್ ಆದ್ಮಿ ಪಾರ್ಟಿ, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ ಒಳಗೊಂಡ ತೃತೀಯ ರಂಗಕ್ಕೆ ಉತ್ತರ ಪ್ರದೇಶ ಫಲಿತಾಂಶ ನಾಂದಿ ಹಾಡಿದಂತಿದೆ. ಕಳೆದ ಚುನಾವಣೆಯಲ್ಲಿ 19 ಸೀಟು ಗೆದ್ದಿದ್ದ ಮಾಯಾವತಿ ಈ ಸಲ ಆರಂಭದಿಂದಲೇ ರಾಜಕೀಯ ಆಕ್ರಮಣಶೀಲತೆಯನ್ನು ಬದಿಗೆ ಸರಿಸಿದ್ದರು. ಹಿಂದೊಮ್ಮೆ ರಾಜ್ಯದ ದಲಿತ ಅಸ್ಮಿತೆಯಾಗಿದ್ದ ಮಾಯಾವತಿ ಮತ್ತು ಬಹುಜನ ಸಮಾಜ ಪಕ್ಷ ರಾಜ್ಯದಲ್ಲಿ ರಾಜಕೀಯ ಅಂತ್ಯಕ್ಕೆ ತಾವೇ ಗುಂಡಿ ತೋಡಿಕೊಂಡಂತಿದೆ.

ಇದು ಅಭಿವೃದ್ಧಿಗೆ ಸಂದ ಸ್ಪಷ್ಟ ಜಯ. ಜನರು ಇನ್ನೊಮ್ಮೆ ರಾಷ್ಟ್ರೀಯತೆಗೆ ಮತ ನೀಡಿದ್ದಾರೆ. ಜಾತಿವಾದಿಗಳು ಮತ್ತು ಕುಟುಂಬ ರಾಜಕಾರಣವನ್ನು ಜನರು ತಿರಸ್ಕರಿಸಿದ್ದಾರೆ.

| ಯೋಗಿ ಆದಿತ್ಯನಾಥ,ಉತ್ತರ ಪ್ರದೇಶ ಸಿಎಂಹಿಂದುತ್ವದ ಪೋಸ್ಟರ್ ಬಾಯ್: ಈಗಿನ ಉತ್ತರಾಖಂಡದ ಪಂಚೂರ್​ನಲ್ಲಿ 1972 ಜೂನ್ 5ರಂದು ಜನಿಸಿದ ಆದಿತ್ಯನಾಥರ ಮೂಲ ಹೆಸರು ಅಜಯ್ ಸಿಂಗ್ ಬಿಷ್ಟ್. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ವಣದ ಆಂದೋಲನದಲ್ಲಿ ಪಾಲ್ಗೊಳ್ಳಲು 1990ರಲ್ಲಿ ಅವರು ಮನೆ ಬಿಟ್ಟು ಬಂದರು. ನಂತರ ಗೋರಖ್​ಪುರದ ಗೋರಖನಾಥ ಮಂದಿರದ ಮಹಂತ ಅವೈದ್ಯನಾಥರ ಶಿಷ್ಯರಾದರು. 2014ರಲ್ಲಿ ಅವೈದ್ಯನಾಥರ ನಿಧನದ ನಂತರ ಗೋರಖನಾಥ ಮಠದ ಮುಖ್ಯಸ್ಥರಾದರು. ಈಗಲೂ ವೃತ್ತಿಯಲ್ಲಿ ಅವರು ಮಹಂತರು.

1998ರಲ್ಲಿ ರಾಜಕೀಯ ಪ್ರವೇಶಿಸಿದ ಯೋಗಿ, 28ನೇ ವಯಸ್ಸಿನಲ್ಲಿ ಲೋಕಸಭೆಗೆ ಆಯ್ಕೆಯಾಗಿ ಕಿರಿಯವಯಸ್ಸಿನ ಸದಸ್ಯ ಎಂಬ ಖ್ಯಾತಿ ಪಡೆದರು. ಗೋರಖ್​ಪುರ ಕ್ಷೇತ್ರದಿಂದ 4 ಬಾರಿ ಲೋಕಸಭೆ ಪ್ರವೇಶ ಮಾಡಿದ ಅವರನ್ನು ‘ಹಿಂದುತ್ವದ ಪೋಸ್ಟರ್​ಬಾಯ್’ ಎಂದೇ ಕರೆಯಲಾಗುತ್ತದೆ. 2017ರ ಚುನಾವಣೆಯಲ್ಲಿ ಬಿಜೆಪಿಯ ಪ್ರಚಂಡ ವಿಜಯದ ನಂತರ ಅಚಾನಕ್ಕಾಗಿ ಯೋಗಿಗೆ ಉತ್ತರ ಪ್ರದೇಶದ ಸಿಎಂ ಪಟ್ಟ ಮಾರ್ಚ್ 19ರಂದು ಒಲಿದು ಬಂತು.

ಯೋಗಿ ಸಪ್ತ ಸಾಧನೆ:
  1. ಮೂವತ್ತೇಳು ವರ್ಷದ ಬಳಿಕ ಅಧಿಕಾರದಲ್ಲಿದ್ದ ಪಕ್ಷಕ್ಕೆ ಮತ್ತೆ ಜನಮನ್ನಣೆ. ಉತ್ತರ ಪ್ರದೇಶದಲ್ಲಿ ಕಳೆದ 37 ವರ್ಷಗಳಿಂದ ಅಧಿಕಾರದಲ್ಲಿದ್ದ ಪಾರ್ಟಿ (ಏಕಪಕ್ಷ) ಪುನರಾಯ್ಕೆ ಆಗಿರಲಿಲ್ಲ ಮತ್ತು ಸತತ ಎರಡನೇ ಬಾರಿಗೆ ಯಾರೂ ಸಿಎಂ ಆಗಿ ಮುಂದುವರಿದಿರಲಿಲ್ಲ.

2. ಸಿಎಂ ಯೋಗಿ ಮೊದಲ ಅವಧಿ ಪೂರ್ಣಗಳಿಸಿ ಮತ್ತೆ ಅಧಿಕಾರ ಹಿಡಿಯುತ್ತಿರುವ ಮೊದಲ ನಾಯಕ. ಉತ್ತರ ಪ್ರದೇಶದ ವಿಧಾನಸಭೆ 1952ರ ಮೇ 2ರಂದು ರಚನೆ ಆಯಿತು. ಅಲ್ಲಿಂದೀಚೆಗೆ 21 ಮುಖ್ಯಮಂತ್ರಿಗಳು ಆಗಿದ್ದಾರೆ. ಈ ಏಳು ದಶಕದಲ್ಲಿ ಅಧಿಕಾರಾವಧಿಯನ್ನು ಯಶಸ್ವಿಯಾಗಿ ಮುಗಿಸಿ ಎರಡನೇ ಅವಧಿಗೆ ಯಾವ ಮುಖ್ಯಮಂತ್ರಿಯೂ ಆಯ್ಕೆ ಆಗಿರಲಿಲ್ಲ.

3. ಸತತ ಎರಡನೇ ಸಲ ಸಿಎಂ ಆದ 5ನೇ ನಾಯಕ. ಯೋಗಿ ಆದಿತ್ಯನಾಥ ಅವರಿಗಿಂತ ಹಿಂದೆ ಸಂಪೂರ್ಣಾನಂದ (1957), ಚಂದ್ರಭಾನು ಗುಪ್ತಾ (1962), ಹೇಮಾವತಿ ನಂದನ ಬಹುಗುಣ (1974), ನಾರಾಯಣ ದತ್ತ ತಿವಾರಿ (1985) ಸತತ ಎರಡನೇ ಸಲ ಸಿಎಂ ಆಗಿದ್ದರು. ಆದರೆ ಇವರ್ಯಾರೂ ಐದು ವರ್ಷದ ಅವಧಿ ಮುಗಿಸಿ ಮತ್ತೆ ಸಿಎಂ ಆದವರಲ್ಲ.

4. ಅವಧಿಯನ್ನು ಯಶಸ್ವಿಯಾಗಿ ಪೂರೈಸಿದ ಮೂರನೇ ಸಿಎಂ. ರಾಜ್ಯ ವಿಧಾನಸಭೆಯ 70 ವರ್ಷದ ಸುದೀರ್ಘ ಇತಿಹಾಸದಲ್ಲಿ ಮೂವರು ಮಾತ್ರ ಐದು ವರ್ಷದ ಅಧಿಕಾರಾವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಬಿಎಸ್​ಪಿ ನಾಯಕಿ ಮಾಯಾವತಿ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಈ ಹಿಂದಿನ ಇಬ್ಬರು.

5. ಸತತ ಎರಡನೇ ಬಾರಿಗೆ ಸಿಎಂ ಆದ ಬಿಜೆಪಿಯ ಮೊದಲ ನಾಯಕ. ಬಿಜೆಪಿಯಿಂದ ಈ ಹಿಂದೆ ಕಲ್ಯಾಣ್ ಸಿಂಗ್, ರಾಮ್ ಪ್ರಕಾಶ ಗುಪ್ತಾ, ರಾಜನಾಥ ಸಿಂಗ್ ಸಿಎಂ ಆಗಿದ್ದರು. ಆದರೆ ಇವರ್ಯಾರೂ ಎರಡನೇ ಸಲ ಸಿಎಂ ಆಗಲಿಲ್ಲ.

6. ಒಂದೂವರೆ ದಶಕದ ನಂತರ ವಿಧಾನಸಭೆಗೆ ಆಯ್ಕೆಯಾದವರು ಸಿಎಂ ಆಗುತ್ತಿದ್ದಾರೆ. ಯೋಗಿ ಆದಿತ್ಯನಾಥ ಹಾಲಿ ವಿಧಾನ ಪರಿಷತ್ ಸದಸ್ಯರು. ಇದೇ ಮೊದಲ ಬಾರಿಗೆ ಅವರು ವಿಧಾನಸಭೆಗೆ ಆಯ್ಕೆ ಆಗಿದ್ದಾರೆ. 2007ರಿಂದ 2012ರವರೆಗೆ ಸಿಎಂ ಆಗಿದ್ದ ಮಾಯಾವತಿ, 2012ರಿಂದ 2017ರವರೆಗೆ ಸಿಎಂ ಆಗಿದ್ದ ಅಖಿಲೇಶ್ ಯಾದವ್ ಕೂಡ ವಿಧಾನ ಪರಿಷತ್ ಸದಸ್ಯರಾಗಿದ್ದರು.

7. ‘ನೋಯ್ಡಾ ಜಿಂಕ್ಸ್’ ಮುರಿದ ನಾಯಕ. ‘ಕರ್ನಾಟಕದ ಚಾಮರಾಜನಗರಕ್ಕೆ ಭೇಟಿ ನೀಡಿದ ಸಿಎಂ ಅಧಿಕಾರ ಕಳೆದುಕೊಳ್ಳುತ್ತಾರೆ’ ಎಂಬ ಮೂಢನಂಬಿಕೆಯಂತೆ, ಗೌತಮಬುದ್ಧ ನಗರ ಜಿಲ್ಲೆಯ, ದೆಹಲಿ ಸನಿಹದಲ್ಲಿರುವ ನೋಯ್ಡಾಕ್ಕೆ ಭೇಟಿ ನೀಡಿದ ಸಿಎಂ ಮುಂದಿನ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಳ್ಳುತ್ತಾರೆಂಬ ಪ್ರತೀತಿ ಬೆಳೆದುಬಂದಿದೆ.

ಜನಾದೇಶವನ್ನು ಗೌರವದಿಂದ ಸ್ವೀಕರಿಸುವೆವು. ಈ ಚುನಾವಣೆ ಪಾಠಕಲಿಸಿದೆ. ಆದರೆ, ಕಾರ್ಯಕರ್ತರ ದೊಡ್ಡ ಬಲ ಪಕ್ಷಕ್ಕೆ ಇದೆ. ಹೀಗಾಗಿ ನಿರಾಶರಾಗಿಲ್ಲ. ಚುನಾವಣೆಯಲ್ಲಿ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು.

| ರಾಹುಲ್ ಗಾಂಧಿಕಾಂಗ್ರೆಸ್ ನಾಯಕಪರಿಣಾಮ ಬೀರದ ಕೃಷಿ ಕಾಯ್ದೆ ಹೋರಾಟ: ಕೃಷಿ ಕಾಯ್ದೆ ವಿರುದ್ಧದ ಹೋರಾಟಗಳ ಬೆನ್ನಲ್ಲೇ ಉತ್ತರ ಪ್ರದೇಶ ಚುನಾವಣೆ ನಡೆದರೂ, ಕೃಷಿಕರು ಹೆಚ್ಚಿರುವ ಉತ್ತರ ಪ್ರದೇಶದಲ್ಲಿ ಈ ಹೋರಾಟ ಬಿಜೆಪಿಗೆ ಹೆಚ್ಚಿನ ಹಾನಿ ಮಾಡಿಲ್ಲ. ಪಶ್ಚಿಮ ಉತ್ತರ ಪ್ರದೇಶದ ರೈತಾಪಿ ವರ್ಗ ದೆಹಲಿ-ಉತ್ತರ ಪ್ರದೇಶ ಗಡಿಯಲ್ಲಿ ಪ್ರತಿಭಟನೆ ನಡೆಸಿತ್ತು. ಇದರಿಂದಾಗಿ ಈ ಭಾಗದಲ್ಲಿ ಕೆಲವು ಸೀಟುಗಳನ್ನು ಬಿಜೆಪಿ ಕಳೆದು ಕೊಂಡಿದೆ. ಲಖಿಮ್ುರ ಖೇರಿ ಜಿಲ್ಲೆಯ ನಿಘಾಸನ್​ನಲ್ಲಿ ರೈತ ಹಿಂಸಾಚಾರ ಘಟನೆ ಕೂಡ ಬಿಜೆಪಿಗೆ ಯಾವುದೇ ಹಾನಿ ಮಾಡಿಲ್ಲ. 2017ರಂತೆ ಈ ಚುನಾವಣೆಯಲ್ಲೂ ಬಿಜೆಪಿ 8ಕ್ಕೆ 8 ಕ್ಷೇತ್ರಗಳಲ್ಲಿ ದಿಗ್ವಿಜಯ ಸಾಧಿಸಿದೆ. ಹಾಥರಸ್​ನ ಅತ್ಯಾಚಾರ ಘಟನೆಯನ್ನು ಚುನಾವಣೆಯಲ್ಲಿ ವಿಪಕ್ಷಗಳು ಬಹುದೊಡ್ಡ ಅಸ್ತ್ರವನ್ನಾಗಿ ಬಳಸಿದರೂ, ಜನರ ಆಲೋಚನಾ ಲಹರಿ ಬೇರೆಯದೇ ಇತ್ತು ಎನ್ನುವುದು ಸಾಬೀತಾಗಿದೆ. ಶೋಭಾ ಕರಂದ್ಲಾಜೆ ಉಸ್ತುವಾರಿ ವಹಿಸಿದ್ದ ಅವಧ್ ಪ್ರದೇಶದ 82 ಸೀಟುಗಳಲ್ಲಿ 65ನ್ನು ಬಿಜೆಪಿ ಗೆದ್ದಿದೆ. ಕಳೆದ ಬಾರಿ 67 ಕ್ಷೇತ್ರಗಳು ಬಿಜೆಪಿ ಪಾಲಾಗಿದ್ದವು.

ಬುಲ್ಡೋಜರ್​ಗಳಲ್ಲಿ ಸಂಭ್ರಮಾಚರಣೆ: ಬಿಜೆಪಿ ಮತ್ತೊಮ್ಮೆ ಜಯಭೇರಿ ಬಾರಿಸುವ ಸುಳಿವು ಹೊರಬೀಳುತ್ತಿದ್ದಂತೆಯೇ ಪಕ್ಷದ ಕಾರ್ಯಕರ್ತರು ಬುಲ್ಡೋಜರ್​ಗಳಲ್ಲಿ ಸಂಭ್ರಮಾಚರಣೆ ಮಾಡಿದ ದೃಶ್ಯ ರಾಜಧಾನಿ ಲಖನೌದಲ್ಲಿ ಕಂಡುಬಂತು. ಚುನಾವಣಾ ಪ್ರಚಾರದ ವೇಳೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಸಿಎಂ ಆದಿತ್ಯನಾಥರನ್ನು ‘ಬುಲ್ಡೋಜರ್ ಬಾಬಾ’ ಎಂದು ತೆಗಳುತ್ತಿದ್ದರು. ಎಲ್ಲವನ್ನೂ ನಾಶ ಮಾಡುತ್ತಾರೆ ಎನ್ನುವುದು ಅವರ ಟೀಕೆಯ ಸಾರವಾಗಿತ್ತು. ಇದಕ್ಕೆ ತಿರುಗೇಟು ಎಂಬಂತೆ ಪಕ್ಷದ ಕಾರ್ಯಕರ್ತರು ಬುಲ್ಡೋಜರ್​ಗಳನ್ನೇ ವಿಜಯದ ಸಂಕೇತ ಮಾಡಿಕೊಂಡಿದ್ದು ವಿಶೇಷವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net